ಕೋಲಾರ: ರಾಜ್ಯ ಕಾಂಗ್ರೆಸ್ ನಲ್ಲಿ ಉದ್ಬವಿಸಿರುವ ಮುಖ್ಯಮಂತ್ರಿ ಹುದ್ದೆಯ ಬಿಕ್ಕಟ್ಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಲಾಮು ಹಚ್ಚಿದ್ದಾರೆ. ಕೋಲಾರದಲ್ಲಿ ಏರ್ಪಡಿಸಿದ್ದ ಭಾರತ್ ಸತ್ಯಾಗ್ರಹ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆಗಲಿ, ನನಗೆ ಅದು ಮುಖ್ಯ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಂತರ, ಹೈಕಮಾಂಡ್ ಹಾಗೂ ಶಾಸಕರು ಹೇಳಿದಂತೆ ಮುಖ್ಯಮಂತ್ರಿ ಆಯ್ಕೆ ಆಗುತ್ತಾರೆ ಎಂದು ಹೇಳಿದರು.
ವೇದಿಕೆ ಮೇಲೆ ಇರುವ ನಮ್ಮ ನಾಯಕರಿಗೆ ನಾನು ಹೇಳೋದಿಷ್ಟೇ. ಯಾರೇ ಮುಖ್ಯಮಂತ್ರಿ ಆಗಲಿ, ನನಗೆ ಅದು ಮುಖ್ಯ ಅಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಂತರ ಹೈಕಮಾಂಡ್ ಹಾಗೂ ಶಾಸಕರು ಹೇಳಿದಂತೆ ಮುಖ್ಯಮಂತ್ರಿ ಆಯ್ಕೆ ಆಗ್ತಾರೆ. ಹೀಗಾಗಿ ಸರ್ಕಾರದ ತರುವುದು ನಮಗೆ ಮುಖ್ಯ. 150 ಸೀಟ್ ಗೆಲ್ಲುವ ಗುರಿ ಮುಟ್ಟಬೇಕು. ನಿಮ್ಮದು ಏನೇ ಇದ್ದರೂ ಎಲ್ಲರೂ ಕೈ ಜೋಡಿಸಿ ಹೋಗಬೇಕು ಎಂದು ಹೇಳಿದರು.
ಕೋಲಾರ ಜಿಲ್ಲೆ ಬಂಗಾರದ ಜಿಲ್ಲೆಯಾಗಿದೆ. ಇಡೀ ದೇಶದಲ್ಲಿ ಮೂರು ಬಂಗಾರದ ಗಣಿಗಳಿವೆ. ಆ ಮೂರು ಕೂಡ ಕರ್ನಾಟಕದಲ್ಲಿದೆ. ಒಂದು ಕೋಲಾರ, ಪಾವಗಡ, ರಾಯಚೂರು. ಇಡೀ ದೇಶಕ್ಕೆ ಬಂಗಾರ ಕೊಡುವ ನಾಡು ನಮ್ಮದಾಗಿದೆ. ಇಲ್ಲಿ ರಾಜ್ಯದ ಸಂಪತ್ತು ಮತ್ತು ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ರಾಜ್ಯದ ನಾಯಕರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದ್ರೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಜಗದೀಶ್ ಶೆಟ್ಟರ್ ಕೂಡ ಹೇಳಿದ್ದಾರೆ ಇಂತಹ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬಂಗಾರದ ನಾಡಾಗಿರುವ ಕೋಲಾರದಲ್ಲಿ ನೀರಾವರಿಗಾಗಲೀ, ಕೃಷಿಗಾಗಲೀ ಹೆಚ್ಚು ಮಹತ್ವ ಕೊಟ್ಟಿಲ್ಲ. ನಮ್ಮ ಸರ್ಕಾರ ಇಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದೆ. ಈಗ ನೂರಾರು ಎಕರೆಯಲ್ಲಿ ಕೃಷಿ ಮಾಡಲಾಗ್ತಿದೆ. ಇಲ್ಲಿ ಡೇರಿ ಹಾಗೂ ರೇಷ್ಮೆ ಉದ್ಯಮ ಕೂಡ ಆರಂಭ ಆಗಿದೆ. ಇಂಥಾ ಬಂಗಾರದ ನೆಲದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇವೆ. ನಮಗೆ ಯಶಸ್ಸು ಸಿಗುವುದಂತೂ ನಿಶ್ಚಿತ. ಮೋದಿ ಸರ್ಕಾರಕ್ಕಿಂತ ಭ್ರಷ್ಟ ಸರ್ಕಾರ 40 % ಕಮಿಷನ್ ಸರ್ಕಾರ. ಮೋದಿ ಅಮಿತ್ ಶಾ ಇಲ್ಲಿನ ಭ್ರಷ್ಟ ಸರ್ಕಾರದ ಬಗ್ಗೆ ಮಾತನಾಡಲ್ಲ. ಇಲ್ಲಿ ಬಂದು ಕಾಂಗ್ರೆಸ್ ಏನು ಮಾಡಿತು ಅಂತ ಮಾತಾಡ್ತಾರೆ ಎಂದು ಕಿಡಿ ಕಾರಿದರು.




