ಬೆಂಗಳೂರು: ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಶಿಕ್ಷಣ ಇಲಾಖೆಯ ನಿರ್ಧಾರ ಇದೀಗ ವಿವಾದವನ್ನು ಸೃಷ್ಟಿಸಿದೆ. ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಈ ನಡುವೆ ಶಾಲಾ ಕಟ್ಟಡಕ್ಕೆ ಕೇಸರಿ ಬಣ್ಣಹಚ್ಚಿದರೆ ವಿರೋಧ ಪಕ್ಷದವರಿಗೆ ಏನು ಸಮಸ್ಯೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಪಂಡಿತ್ ಜವಹಾರ್ ಲಾಲ್ ನೆಹರು ಅವರ ಜನ್ಮದಿನಾಚರಣೆ ಅಂಗವಾಗಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು ಪ್ರತಿಯೊಂದರಲ್ಲೂ ವಿರೋಧ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟಕ್ಕೂ ಕೇಸರಿ ಬಣ್ಣ ಕಂಡರೆ ಇವರಿಗೆ ಆಗುವುದೇ ಇಲ್ಲವೇ. ಕೇಸರಿ ಬಣ್ಣ ನಮ್ಮ ಭಾರತದ ಧ್ವಜದಲ್ಲೇ ಇದೆ. ಕೇಸರಿ ಬಣ್ಣ ಕಂಡರೆ ಯಾಕೆ ಇವರಿಗೆ ಅಷ್ಟು ಲಕ್ಷೆ ಎಂದು ಪ್ರಶ್ನಿಸಿದರು. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶಾಲೆ ಮಾಡುತ್ತಿದ್ದೇವೆ. ಅವರು ತೊಡುವಂತದ್ದೆಲ್ಲ ಕೇಸರಿ. ವಿವೇಕ ಅಂದರೆ ಜ್ಞಾನ ಎಂದು ಕಲಿಯಬೇಕು ವಿನಹ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಶಾಲಾ ಕೊಠಡಿಗಳಿಗೆ ಹಚ್ಚುವುದಾದರೆ ಮೂರು ಬಣ್ಣ ಹಚ್ಚಬೇಕು ಎಂಬ ಪ್ರತಿಪಕ್ಷಗಳ ವಿಚಾರವಾಗಿ ಸಿಎಂ ಏನನ್ನೂ ಪ್ರತಿಕ್ರಿಯೆ ನೀಡಲಿಲ್ಲ. ಮಕ್ಕಳನ್ನ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡುತ್ತಿದ್ದ ಜವಾಹರಲಾಲ್ ನೆಹರು ಜನ್ಮ ದಿನದಂದು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದೇವೆ. ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದವರು. ಭಾರತದ ಮೊದಲ ಪ್ರಧಾನಿಯಾಗಿದ್ದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನೆಡೆಸಿದವರು ಎಂದರು.
ಅಲಿಪ್ತ ಚಳುವಳಿ ಸಂಘದ ಮೂಲಕ ಭಾರತ ಇಂದಿಗೂ ತನ್ನ ಪ್ರಮುಖ ಪಾತ್ರವನ್ನು ವಹಿಸಿದೆ. ನೆಹರು ಅವರು ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.



