ಹಾಲು ಉತ್ಪನ್ನಗಳ ಬೆಲೆ ಏರಿಕೆ: ಚುನಾವಣೆ ಮುನ್ನ ಮತದಾರರ ನಾಡಿ ಪರೀಕ್ಷೆ

3 years ago

ಬೆಂಗಳೂರು: ಪಶು ಆಹಾರ ಬೆಲೆ ಹೆಚ್ಚಳ ಆರ್ಥಿಕ ನಷ್ಟ ಹಾಗೂ ಪೈಪೋಟಿ ಸನ್ನಿವೇಶ ನಿರ್ವಹಿಸುವ ಸಲುವಾಗಿ ಕೆಎಂಎಫ್ ಹಾಲಿನ ದರ ಪರಿಷ್ಕರಣೆ ಮಾಡಿದೆ. ಹಾಲು ಮೊಸರು ಸೇರಿದಂತೆ ಎಲ್ಲಾ‌ ಉತ್ಪನ್ನಗಳ ಬೆಲೆ ಪ್ರತಿ ಲೀಟರ್ ಗೆ‌ 3 ರೂಪಾಯಿ ‌ಹೆಚ್ಚಳ ಮಾಡಲಾಗಿದೆ.

ಹಾಲು ಒಕ್ಕೂಟಗಳ ಹಲವು ದಿನಗಳ ಬೇಡಿಕೆಗೆ‌ ಸರ್ಕಾರ ಸ್ಪಂದಿಸಿದ ಹಿನ್ನೆಲೆಯಲ್ಲಿ ದರ ಹೆಚ್ಚಳಗೊಂಡಿದೆ. ಈ ಹೆಚ್ಚಳವಾದ ಹಣವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತಿವೆ. ರಾಜ್ಯದಲ್ಲಿರುವ ಬಹುತೇಕ ಹಾಲು ಒಕ್ಕೂಟ ಮಹಾಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತಿಂಗಳ ವೇತನವನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದರ ಪರಿಷ್ಕರಣೆ ಮಾಡಬೇಕೆಂದು ಮನವಿ ಸಲ್ಲಿಸಿದ್ದವು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಹಲವು ಬಾರಿ ಭೇಟಿಯಾಗಿ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಅವರು ಒಪ್ಪಿರಲಿಲ್ಲ. ಪರಿಣಾಮವಾಗಿ ಇತ್ತೀಚೆಗೆ ರಾಜ್ಯದ ಹಲವು ಕಡೆ ರೈತರು ಪ್ರತಿಭಟನೆ ನಡೆಸಿದ್ದು, 15 ದಿನದೊಳಗೆ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದರು. ಹೀಗಾಗಿ ಇದೀಗ ದರ ಪರಿಷ್ಕರಣೆಗೆ ಸಮ್ಮತಿಸಿದ್ದು ಹೊಸ ದರಗಳು ಜಾರಿಗೆ ಬಂದಿವೆ.

ಚರ್ಮಗಂಟು ರೋಗದಿಂದ 1 ಲಕ್ಷ ಲೀಟರ್, ಅತಿವೃಷ್ಟಿಯಿಂದಾಗಿ 3 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕುಂಠಿತವಾಗಿದ್ದು, ಖಾಸಗಿ ಕಂಪನಿಗಳು ರಾಜ್ಯದಲ್ಲಿ ಹಾಲು ಸಂಗ್ರಹವಾಗಿ ನೆರೆ ರಾಜ್ಯದಲ್ಲಿ ಮಾರಾಟ ಮಾಡುತ್ತಿವೆ. ಈ ಪೈಪೋಟಿಯಿಂದ ಆರ್ಥಿಕ ಹೊರೆಯಾಗುತ್ತಿತ್ತು. ರೈತರು ಕೂಡ ನಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಹೈನುರಾಸುಗಳ ನಿರ್ವಹಣೆ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಶು ಆಹಾರ ಉತ್ಪಾದನಗೆ ಬಳಸುವ ಮೆಕ್ಕೆಜೋಳ, ಹಕ್ಕಿ, ತವಡು, ಇಂಡಿ, ಖನಿಜ ಪದಾರ್ಥಗಳ ಬೆಲೆ ಶೇ.30ಕ್ಕಿಂತಲೂ ಹೆಚ್ಚಾಗಿದೆ.

ಪಶು ಆಹಾರ ಉತ್ಪಾದನಗೆ ತಗಲುವ ವೆಚ್ಚ ಎರಡು ವರ್ಷದ ಹಿಂದೆ ಕೆ.ಜಿ.ಗೆ 18 ರೂ. ಇದ್ದದ್ದು, ಪ್ರಸ್ತುತ 23ಕ್ಕೆ ಏರಿಕೆಯಾಗಿದೆ. ಪ್ರತಿನಿತ್ಯ ಹಾಲು ನೀಡುತ್ತಿರುವ 10 ಲಕ್ಷ ರೈತರಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. 1ರಿಂದ 3 ಹಸುಗಳನ್ನು ಹೊಂದಿದ್ದು, ಹೈನುಗಾರಿಕೆ ಲಾಭವಾಗುತ್ತಿಲ್ಲ ಎಂದು ಹಸುಗಳನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಕೆಎಂಎಫ್ ಕಳವಳ ವ್ಯಕ್ತಪಡಿಸಿದೆ.

ಹೆಚ್ಚಳ ಮಾಡಿರುವ ಮೊತ್ತವನ್ನ ಅತಿವೃಷ್ಟಿ ಮತ್ತು ಚರ್ಮದಂಟು ರೋಗದ ಸಮಸ್ಯೆಯಿಂದ ಸಮಸ್ಯೆಗೊಳಗಾಗಿರುವ ರೈತರಿಗೆ ಸಹಾಯಹಸ್ತ ನೀಡಲು ತೀರ್ಮಾನಿಸಲಾಗಿದೆ ಎಂದು ಕೆಎಂಎಫ್ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ವಾಸ್ತವವಾಗಿ ರಾಜ್ಯ ಮತ್ತು ಬಿಜೆಪಿ ಅಧಿಕಾರದಲ್ಲಿ ಇರುವ ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಹಾಲಿನ ಉತ್ಪಾದನೆ ಕುಸಿಯಲು ಕಾರಣವಾಯಿತು ಎಂದು ಪಶುವೈದ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದರ ಪರಿಷ್ಕರಣೆ ಹಳೆ ದರ ಹೊಸ ದರ

ಟೋನ್ಡ್ ಹಾಲು ( 37 ) 40

ಹೋಮಜೈನ್ಡ್ ಟೋನ್ಡ್ ಹಾಲು (38 ) 41

ಹೋಮಜೈನ್ಡ್ ಹಸುವಿನ ಹಾಲು (42 ) 45

ಸ್ಪೆಷಲ್ ಹಾಲು ( 43) 46

ಶುಭಂ ಹಾಲು( 43 ) 46

ಹೋಮಜೈನ್ಡ್ ಸ್ಟಾಂಡೈಸ್ಡರ್ ಹಾಲು (44) 47

ಸಮೃದ್ದಿ ಹಾಲು (48 )51

ಸಂತೃಪ್ತಿ ಹಾಲು( 50 )53

ಡಬಲ್ ಟೋನ್ಡ್ ಹಾಲು (36 )39

ಮೊಸರು ಪ್ರತಿ ಕೆ.ಜಿಗೆ (45 )48

Leave a Reply