ಎಸ್.ಎಸ್.ಎಲ್.ಸಿ ಫಲಿತಾಂಶ: ನಗರ ಪ್ರದೇಶ ಹಿಂದಿಕ್ಕಿ ಮುಂದುವರೆದ ಗ್ರಾಮೀಣ ವಿದ್ಯಾರ್ಥಿಗಳು

2 years ago

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ಎಂದಿನಂತೆ ಬಾಲಕೀಯರೇ ಮೇಲಗೈ ಸಾಧಿಸಿದ್ದಾರೆ. ವಿಶೇಷವೆಂದರೆ ನಗರಪ್ರದೇಶದವರನ್ನು ಹಿಂದಿಕ್ಕಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶ ಪಡೆದಿದ್ದಾರೆ. ಕರಾವಳಿ, ಮಲೆನಾಡಿನ ಶೈಕ್ಷಣಿಕ ಜಿಲ್ಲೆಗಳು ಹಿಂದಿನ ಹಿನ್ನಡೆಯನ್ನು ಸರಿಗಟ್ಟಿ ಮುಂಚೂಣಿಗೆ ಬಂದಿವೆ. ವಿದ್ಯಾರ್ಥಿಗಳ ಶ್ರೇಯಾಂಕದಲ್ಲಿ ಸಾಕಷ್ಟು ಏರುಪೇರು ಕಂಡುಬಂದಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾಖಲೆಯ ಪ್ರಮಾಣದ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಅಚ್ಚರಿ ಮೂಡಿಸಿದರೆ, 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಕಳೆದ ವರ್ಷಕ್ಕಿಂತಲೂ ಸುಮಾರು 10ರಷ್ಟು ಕುಸಿತ ಕಂಡಿದೆ. ಈ ವರ್ಷ ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಹಾಗೂ ಇತರೆ ಅಧಿಕಾರಿಗಳು ಫಲಿತಾಂಶವನ್ನು ಪ್ರಕಟಿಸಿದರು. 2022-23ನೇ ಸಾಲಿನಲ್ಲಿ ಶೇ.83.89ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.73.40ರಷ್ಟು ಫಲಿತಾಂಶ ಬಂದಿದೆ.

ಪ್ರಸಕ್ತ ಸಾಲಿನಲ್ಲಿ 4,36,138 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 2,87,416 ಮಂದಿ ಉತ್ತೀರ್ಣರಾಗುವ ಮೂಲಕ ಶೇ.65.90ರಷ್ಟು ಫಲಿತಾಂಶ ಪಡೆದಿದ್ದಾರೆ. 4,23,829 ಬಾಲಕಿಯರು ಹಾಜರಾಗಿ 3,43,788 ಮಂದಿ ಉತ್ತೀರ್ಣರಾಗಿ ಶೇ.81.11ರಷ್ಟು ತೇರ್ಗಡೆಯಾಗಿದ್ದಾರೆ.

ನಗರದಪ್ರದೇಶದಲ್ಲಿ 4,93,900 ವಿದ್ಯಾರ್ಥಿಗಳು ಹಾಜರಾಗಿ 3,59,703 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.72.83ರಷ್ಟು ಫಲಿತಾಂಶ ಗಳಿಸಿದ್ದರೆ, ಗ್ರಾಮೀಣ ಭಾಗದಲ್ಲಿ 3,66, 067 ವಿದ್ಯಾರ್ಥಿಗಳು ಹಾಜರಾಗಿ 2,71,501 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.74.17ರಷ್ಟು ಫಲಿತಾಂಶ ಪಡೆದಿದ್ದಾರೆ.

ಪ್ರಸಕ್ತ ವರ್ಷದ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.76.91ರಷ್ಟು, ಖಾಸಗಿ ಅಭ್ಯರ್ಥಿಗಳ ಪೈಕಿ ಶೇ.10.95, ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.33.26ರಷ್ಟು ಉತ್ತೀರ್ಣರಾಗಿದ್ದಾರೆ.

ಈ ಬಾರಿಯು ಅನುದಾನರಹಿತ ಶಾಲೆಗಳೇ ಫಲಿತಾಂಶದಲ್ಲಿ ಮುಂದಿವೆ. ಶೇ.86.46ರಷ್ಟು ಫಲಿತಾಂಶ ಗಳಿಸಿವೆ. ಸರ್ಕಾರಿ ಶಾಲೆ ಶೇ.72.46ರಷ್ಟು ಫಲಿತಾಂಶ ಗಳಿಸಿವೆ ಅನುದಾನಿತ ಶಾಲೆಗಳಿಂತಲೂ(ಶೇ.72.22) ಒಂದು ಹೆಜ್ಜೆ ಮುಂದೇ ಇದೆ.

2018ರಿಂದ-20ರ ನಡುವೆ ಕೋವಿಡ್‌ ಅವಧಿಯಲ್ಲಿ ಕಡಿಮೆ ಫಲಿತಾಂಶ ದಾಖಲಾಗಿತ್ತು. ಆ ಬಳಿಕ ಈ ವರ್ಷವೇ ಫಲಿತಾಂಶದಲ್ಲಿ ಕುಸಿತ ಕಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್‌ ಮಾತನಾಡಿ, ಈ ಬಾರಿ ಬಹುತೇಕ ಶಾಲೆಗಳಲ್ಲಿ ವೆಬ್‌ ಕಾಸ್ಟಿಂಗ್‌ ಮೂಲಕ ಪರೀಕ್ಷಾ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಸಿಸಿಟಿವಿ ಮೂಲಕ ನೇರ ನಿಗಾವಣೆ ವಹಿಸಲಾಗಿತ್ತು. ಫಲಿತಾಂಶ ಕುಸಿಯಲು ಇದು ಕಾರಣವಾಗಿರಬಹುದು ಎಂದು ಹೇಳಿದರು.

ಕಳೆದ ವರ್ಷ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹೆಚ್ಚುವರಿ ಅಂಕ(ಗ್ರೇಸ್‌ ಮಾರ್ಕ್ಸ್) ನೀಡಲಾಗಿತ್ತು. ಈ ಬಾರಿ 25ರಿಂದ 35ರಷ್ಟು ಕಡಿಮೆ ಅಂಕ ಪಡೆದವರಿಗೆ ಶೇ.20ರಷ್ಟು ಗ್ರೇಸ್‌ ಮಾರ್ಕ್ಸ್ ನೀಡಲಾಗಿದೆ. ಇಲ್ಲದೆ ಹೋಗಿದ್ದರೆ ಫಲಿತಾಂಶದಲ್ಲಿ ಇನ್ನು ಶೇ.30ರಷ್ಟು ಕುಸಿವಾಗುವ ಸಾಧ್ಯತೆ ಇತ್ತು ಎಂದರು.

ಈ ವರ್ಷಕ್ಕೆ ಮಾತ್ರ ಗ್ರೇಸ್ ಮಾರ್ಕ್ಸ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮುಂದಿನ ವರ್ಷ ಶೇ.10ರಷ್ಟೇ ಪ್ರಮಾಣವನ್ನು ಮುಂದುವರೆಸಲಾಗುವುದು ಎಂದು ರಿತೇಶ್‌ ಸಿಂಗ್‌ ಸ್ಪಷ್ಟಪಡಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಜೂನ್‌ 7ರಿಂದ 2ನೇ ಹಂತದ ಪರೀಕ್ಷೆ ನಡೆಯಲಿದ್ದು, ಆ ಸಂದರ್ಭದಲ್ಲಿ ಯಶಸ್ಸು ಗಳಿಸಲು ಅವಕಾಶಗಳಿವೆ.

ಕಡಿಮೆ ಅಂಕ ಗಳಿಸಿರುವ ಅನುಮಾನಗಳಿರುವ ವಿದ್ಯಾರ್ಥಿಗಳಿಗೆ ಸ್ಕ್ಯಾನ್‌ ಪ್ರತಿ ಪಡೆಯಲು ಮರು ಎಣಿಕೆ ಮತ್ತು ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಮೇ 16ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಆನ್‌ಲೈನ್‌ ಸವಲತ್ತು ಇಲ್ಲದವರಿಗೆ ಆಫ್‌ಲೈನ್‌ನಲ್ಲಿ ಚಲನ್‌ ಮೂಲಕ ಶುಲ್ಕ ಪಾವತಿಸಲು ಒಂದು ದಿನ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.

ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರುವೌಲ್ಯಮಾಪನನಕ್ಕೆ ಮೇ 13ರಿಂದ 22ರ ನಡುವೆ ಅರ್ಜಿ ಸಲ್ಲಿಸಬಹುದಾಗಿದೆ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ಒಂದು ದಿನ ಹೆಚ್ಚುವರಿ ಕಾಲಾವಕಾಶವಿದೆ.

ಜೂ.7ರಿಂದ 14ರವರೆಗೆ ಎಸ್ಸೆಸ್ಸೆಲ್ಸಿ 2ನೇ ಹಂತದ ಪರೀಕ್ಷೆ ನಡೆಯಲಿದೆ. ಈ ಬಾರಿ ಯಶಸ್ವಿಯಾಗದಿರುವರನ್ನು ಎನ್‌ಸಿ ಎಂದು ನಮೂದಿಸಲಾಗಿದೆ. 2 ಮತ್ತು 3ನೇ ಹಂತದಲ್ಲೂ ಉತ್ತೀರ್ಣರಾಗುವಲ್ಲಿ ವಿಫಲರಾದ ವಿದ್ಯಾರ್ಥಿಗಳಿಗೆ ಮಾತ್ರ ಅನುತ್ತೀರ್ಣವೆಂದು ಉಲ್ಲೇಖಿಸುವುದಾಗಿ ಮಂಡಳಿಯ ಪರೀಕ್ಷಾ ವಿಭಾಗದ ನಿರ್ದೇಶಕ ಎಚ್‌.ಎನ್‌.ಗೋಪಾಲ ಕೃಷ್ಣ ತಿಳಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶ
ಉಡುಪಿ – 94
ದಕ್ಷಿಣಕನ್ನಡ – 92.12
ಶಿವಮೊಗ್ಗ – 98.67
ಕೊಡಗು – 88.67
ಉತ್ತರ ಕನ್ನಡ – 86.54
ಹಾಸನ – 86.28
ಮೈಸೂರು – 85.05
ಶಿರಸಿ – 84.64
ಬೆಂಗಳೂರು ಗ್ರಾಮಾಂತರ – 83.67
ಚಿಕ್ಕಮಗಳೂರು – 83.39
ವಿಜಯಪುರ – 79.82
ಬೆಂಗಳೂರು ದಕ್ಷಿಣ – 79
ಬಾಗಲಕೋಟೆ – 77.92
ಬೆಂಗಳೂರು ಉತ್ತರ – 77.08
ಹಾವೇರಿ – 75.85
ತುಮಕೂರು – 75.16
ಗದಗ – 74.76
ಚಿಕ್ಕಬಳ್ಳಾಪುರ – 73.51
ಮಂಡ್ಯ – 73.59
ಕೋಲಾರ – 73.57
ಚಿತ್ರದುರ್ಗ – 72.85
ಧಾರವಾಡ – 72.57
ದಾವಣಗೆರೆ – 77.48
ಚಾಮರಾಜನಗರ – 71.59
ಚಿಕ್ಕೋಡಿ – 69.82
ರಾಮನಗರ – 69.53
ವಿಜಯನಗರ – 65.61
ಬಳ್ಳಾರಿ – 64.90
ಬೆಳಗಾವಿ – 64.93
ಮೂಡಗೆರೆ – 62.44
ರಾಯಚೂರು – 61.2
ಕೊಪ್ಪಳ – 61.16
ಬೀದರ್‌ – 57.52
ಕಲಬುರುಗಿ – 53.04
ಯಾದಗಿರಿ – 50.59

Leave a Reply