ಬೆಂಗಳೂರು: ಇದೊಂದು ಪ್ರತಿಷ್ಟೆಗಾಗಿ ನಡೆದ ಗಲಾಟೆ. ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಸಣ್ಣ ಅಪಘಾತ ಸಂಭವಿಸಿದೆ. ನಂತರ ನಡೆದ ಕ್ಷುಲ್ಲಕ ಕಾರಣದ ವಾಗ್ವಾದ ರಾದ್ದಾಂತವಾಗಿ ಪರಿಣಮಿಸಿದೆ.
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ದರ್ಶನ್ ಎಂಬುವರು ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು ಪ್ರಿಯಾಂಕಾ ಎಂಬವವರು ಚಲಾಯಿಸುತ್ತಿದ್ದ ಟಾಟಾ ನಿಕ್ಸಾನ್ ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿದೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಇದರ ನಡುವೆ ಮಾತಿನ ಭರದಲ್ಲಿ ಪ್ರಿಯಾಂಕಾ ಅವರು ದರ್ಶನ್ ಗೆ ಮಧ್ಯ ಬೆರಳನ್ನು ತೋರಿಸಿ ಕೆಟ್ಟದಾಗಿ ವರ್ಣಿಸಿದ್ದಾರೆ. ಇದರಿಂದ ದರ್ಶನ್ ಕೋಪಗೊಂಡು ಪ್ರಿಯಾಂಕಾ ಅವರ ಕಾರ್ ಅನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ ತನ್ನ ಸ್ನೇಹಿತರಿಗೂ ಮಾಹಿತಿ ನೀಡಿ ಬರುವಂತೆ ಹೇಳಿದ್ದಾರೆ.
ಪ್ರಿಯಾಂಕಾ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದ ದರ್ಶನ್ ಮಂಗಳೂರು ಪಿಯು ಕಾಲೇಜ್ ಬಳಿ ಕಾರನ್ನು ಅಡ್ಡಗಟ್ಟಿ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕೋಪಗೊಂಡ ಪ್ರಿಯಾಂಕಾ ಅವರು ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ಅಕೆಯ ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ. ಇದನ್ನು ಲೆಕ್ಕಿಸದ ಪ್ರಿಯಾಂಕಾ ತಮ್ಮ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋಗಿದ್ದಾರೆ. ಆ ಕಾರಿನ ಬಾನೆಟ್ ಮೇಲೆ ದರ್ಶನ್ ಕುಳಿತಿದ್ದು, ಪ್ರಿಯಾಂಕಾ ಸುಮಾರು ಒಂದು ಕಿಲೋಮೀಟರ್ ವರೆಗೂ ಚಲಾಯಿಸಿಕೊಂಡು ಹೋಗಿದ್ದಾರೆ. ಜೊತೆಗೆ ತಮ್ಮ ಪತಿಗೆ ಕರೆ ಮಾಡಿದ್ದಾರೆ.
ಈ ವೇಳೆ ದರ್ಶನ್ ಸ್ನೇಹಿತರು ದ್ವಿಚಕ್ರ ವಾಹನಗಳಲ್ಲಿ ದೌಡಾಯಿಸಿ ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ ಪ್ರಿಯಾಂಕಾ ಅವರ ಕಾರಿನ ಗ್ಲಾಸುಗಳನ್ನು ಹೊಡೆದು ಹಾಕಿದ್ದಾರೆ. ಈ ವೇಳೆ ಪ್ರಿಯಾಂಕಾ ಅವರ ಪತಿ ಪ್ರಮೋದ್ ಸ್ಥಳಕ್ಕೆ ಧಾವಿಸಿದ್ದು ಗಲಾಟೆ ಜೋರಾಗಿದೆ. ದರ್ಶನ್ ಸ್ನೇಹಿತರು ಪ್ರಮೋದ್ ಮೇಲೆ ಹಲ್ಲೆ ಮಾಡಿದ್ದಾರೆ.
ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆಯ ಮಾಹಿತಿ ಪಡೆದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡು ಕಡೆಯವರನ್ನು ಠಾಣೆಗೆ ಕರೆದುಕೊಂಡು ಬಂದು ದೂರು ದಾಖಲಿಸಿಕೊಂಡಿದ್ದಾರೆ.
ಪ್ರಿಯಾಂಕಾ ಅವರು ನೀಡಿದ ದೂರು ಆಧರಿಸಿ ದರ್ಶನ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಅದೇ ರೀತಿಯಲ್ಲಿ ದರ್ಶನ್ ನೀಡಿದ ದೂರು ಆಧರಿಸಿ ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಪ್ರಕರಣ ಸಂಬಂಧ 5 ಜನರ ಬಂಧನವಾಗಿದೆ.




