ಗಲಾಟೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆ

1 year ago

ಬಳ್ಳಾರಿ: ನಗರದ ಈದ್ಗಾ ಮೈದಾನದ ಹತ್ತಿರ ಮಹಾನಗರ ಪಾಲಿಕೆಯಿಂದ ಪರವಾನಿಗೆ ಪಡೆದು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಒಡೆದು ಗಲಾಟೆ ನಡೆಸಿದ್ದ 6 ಆರೋಪಿಗಳಿಗೆ ಶಿಕ್ಷೆ ವಿಧಿಸಿ ಇಲ್ಲಿನ 2ನೇ ಅಧಿಕ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸಣ್ಣ ಹನುಮಗೌಡ ಆದೇಶಿಸಿದ್ದಾರೆ.

2013ರ ಆಗಸ್ಟ್ 08ರಂದು 09 ಮಂದಿ ಆರೋಪಿಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು, ಅತಿಕ್ರಮ ಪ್ರವೇಶ ಮಾಡಿ,  ಜೆಸಿಬಿಯಿಂದ ಸುತ್ತಲೂ ಕಟ್ಟಿದ ಕಾಂಪೌಂಡ್ ಗೋಡೆಯನ್ನು ಒಡೆದು ಹಾಕುತ್ತಿರುವಾಗ ತಡೆಯಲು ಹೋದಾಗ ಸಾಕ್ಷಿದಾರರನ್ನು ಮೈಕೈಗೆ ಮತ್ತು ಕಪಾಳಕ್ಕೆ ಹೊಡಿಬಡಿ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದರು. ನಂತರ ಆರೋಪಿಗಳೆಲ್ಲರೂ ಸೇರಿ ಪ್ರಾಣಬೆದರಿಕೆ ಹಾಕಿ ಕಾಂಪೌಂಡ್ ಗೋಡೆ ಒಡೆದು ಸುಮಾರು ರೂ.15,00,000 ನಷ್ಟ ಉಂಟುಮಾಡಿದ್ದರು. ಈ ಕುರಿತು ಆರೋಪಿಗಳ ವಿರುದ್ಧ ಕೌಲ್ಬಜಾರ್ ಠಾಣೆ ತನಿಖಾಧಿಕಾರಿ ಸಾಕ್ಷ್ಯಾಗಳನ್ನು ಸಂಗ್ರಹಿಸಿ ದೋಷಾರೋಪಣ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 10 ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು, ಪ್ರಕರಣದ ಸಾಕ್ಷ್ಯ ವಿಚಾರಣೆಯಾದ ನಂತರ ನ್ಯಾಯಾಲಯ ಆರೋಪಿತರ ವಿರುದ್ಧ ಕಲಂ: 143, 147, 447, 427, 323, 504, 506 149 ಭಾದಂಸಂ ಅಡಿ ಆರೋಪ ಸಾಬೀತಾಗಿದ್ದು, ಆರೋಪಿಗಳಾದ ಖಾಜಿ ಗುಲಾಮ್ ಗೌಸ್ ಸಿದ್ಧಿಕ, ಕೆ.ಎಂ.ರಿಜ್ವಾನ ಓಮರ ಸಾಬ, ಮೊಹಮ್ಮದ್ ಆಯಜ ಸಾಬ, ಬಿ.ಎಸ್.ಅಹಮ್ಮದ್ ಸಾಬ್, ಮಹಮ್ಮದ್ ಗೌಸ್ ಪೀರ್, ಅತೀಕ್ ಅಹ್ಮದ್ ಸೇರಿದಂತೆ ಒಟ್ಟು 09 ಮಂದಿ ಆರೋಪಿಗಳು ಭಾಗಿಯಾಗಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನುಳಿದ ಆರು ಜನರಿಗೆ ಶಿಕ್ಷೆ ವಿಧಿಸಿದೆ.

ಕಲಂ: 143 ಭಾ.ದಂ.ಸಂ. ಅಡಿಯಲ್ಲಿ ಅಪರಾಧಕ್ಕೆ ಪ್ರತಿಯೊಬ್ಬ ಆರೋಪಿಗೆ 1 ತಿಂಗಳು ಸಾದಾ ಕಾರಾಗೃಹವಾಸ, ಕಲಂ: 147 ಭಾ.ದಂ.ಸಂ. ಅಡಿಯಲ್ಲಿ ಅಪರಾಧಕ್ಕೆ ಪ್ರತಿಯೊಬ್ಬ ಆರೋಪಿಗೆ 6 ತಿಂಗಳು ಸಾದಾ ಕಾರಾಗೃಹವಾಸ, ಕಲಂ: 323 ಭಾ.ದಂ.ಸಂ, ಅಡಿಯಲ್ಲಿ ಅಪರಾಧಕ್ಕೆ ಪ್ರತಿಯೊಬ್ಬ ಆರೋಪಿಗೆ 3 ತಿಂಗಳು ಸಾದಾ ಕಾರಾಗೃಹವಾಸ ಮತ್ತು ತಲಾ ರೂ.500 ದಂಡ, ಕಲಂ: 427 ಭಾ.ದಂ.ಸಂ. ಅಡಿಯಲ್ಲಿ ಅಪರಾಧ ಪ್ರತಿಯೊಬ್ಬ ಆರೋಪಿಗೆ 6 ತಿಂಗಳು ಸಾದಾ ಕಾರಾಗೃಹವಾಸ ಮತ್ತು ತಲಾ ರೂ.5000, ಕಲಂ: 447 ಭಾ.ದಂ.ಸಂ. ಅಡಿಯಲ್ಲಿ ಅಪರಾಧ ಪ್ರತಿಯೊಬ್ಬ ಆರೋಪಿಗೆ ತಿಂಗಳು ಸಾದಾ ಕಾರಾಗೃಹವಾಸ, ಕಲಂ: 504 ಭಾ.ದಂ.ಸಂ. ಅಡಿಯಲ್ಲಿ ಅಪರಾಧಕ್ಕೆ ಪ್ರತಿಯೊಬ್ಬ ಆರೋಪಿಗಳಿಗೆ 6 ತಿಂಗಳ ಸಾದಾ ಕಾರಾಗೃಹವಾಸ, ಕಲಂ: 506 ಭಾ.ದಂ.ಸಂ. ಅಡಿಯಲ್ಲಿ ಪ್ರತಿಯೊಬ್ಬ ಆರೋಪಿಗಳಿಗೆ 6 ತಿಂಗಳ ಸಾದಾ ಜೈಲುವಾಸ ವಿಧಿಸಲಾಗಿದೆ. ಆರೋಪಿಗಳು ಮೇಲಿನ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.

ಪ್ರಕರಣದ ನೊಂದ ವ್ಯಕ್ತಿ ಮೆಹೆಬೂಬ ಭಾಷಾ ಎಂ.ಎಸ್ ಅವರಿಗೆ ಪರಿಹಾರ ರೂಪವಾಗಿ ಆರೋಪಿಗಳಿಂದ ವಸೂಲಿ ಮಾಡಲಾದ ಹಣದ ಪೈಕಿ ರೂ. 20,000 ಕೊಡಬೇಕೆಂದು ಆದೇಶಿಸಲಾಗಿದೆ. ಪ್ರಕರಣದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಪಿ.ವಿರೇಶ್ ಕುಮಾರ್ ಮತ್ತು ಮುರ್ತುಜ ಸಾಬ ವಾದ ಮಂಡಿಸಿದ್ದರು.

Leave a Reply