ಪಂಪನ ಹೆಸರನ್ನು ತೆಗೆಯಲು ಹೊರಟವರನ್ನು ಹೊರದಬ್ಬಿ: ಜಗದೀಶ್ ಕೊಪ್ಪ

4 years ago

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿರುವ ಈ ಮನುಷ್ಯನಿಗೆ ಕನ್ನಡವನ್ನು ಹೇಗೆ ಮತ್ತು ಯಾವ ಆಯಾಮಗಳಲ್ಲಿ ಉಳಿಸಬೇಕೆಂಬ ಕನಿಷ್ಟ ಸಾಮನ್ಯ ಪ್ರಜ್ಞೆಯೂ ಇಲ್ಲವಾಗಿದೆ.

ಕನ್ನಡದ ಅಸ್ಮಿತೆ ಎಂಬಂತೆ ಇರುವ *ಮಹಾಕವಿ ಪಂಪನ* ಹೆಸರನ್ನು ತೆಗೆದು ಹಾಕಿ ಕಚೇರಿಯ ಮುಂಭಾಗದ ರಸ್ತೆಗೆ ಕ.ಸಾ.ಪ. ಎಂದು ಹೆಸರಿಡಲು ಹೊರಟಿದ್ದಾನೆ.

ಇಷ್ಟು ಮಾತ್ರವಲ್ಲದೇ ರಸ್ತೆಯ ಕಾಂಪೌಂಡ್ ಗೋಡೆಗಳಿಗೆ ಹಳದಿ, ಕೆಂಪು ಬಣ್ಣ ಬಳಿದು, ಅಲ್ಲಿ ದೀಪಾಲಂಕಾರ ಮಾಡುವ ಯೋಜನೆ ಇದೆಯಂತೆ. ಇದು ಕನ್ನಡ ಸಾಹಿತ್ಯ ಪರಿಷತ್ತು ಮಾಡುವ ಕೆಲಸವೆ?

ಅಧಿಕಾರಕ್ಕೆ ಬಂದು ವರ್ಷವಾಯಿತು. ಕನ್ನಡ ಅಭಿವೃದ್ಧಿ ಕುರಿತಂತೆ ಏನು ಕಿಸಿದಿದ್ದಾನೆ ಕೇಳಿ ನೋಡಿ. ಗಡಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಶಾಲೆಗಳು ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಕುಸಿದು ಬೀಳುತ್ತಿವೆ.

ಕನ್ನಡಿಗ ಪೋಷಕರು ತಮ್ಮ ಮಕ್ಕಳನ್ನು ವಿಧಿಯಿಲ್ಲದೆ ಮರಾಠಿ, ತೆಲುಗು ಮತ್ತು ತಮಿಳು ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರ ತನ್ನ ಪಾಲಿನ ಕೋಟ್ಯಾಂತರ ರೂಪಾಯಿ ಹಣವನ್ನು ಖಾಸಾಗಿ ಶಿಕ್ಷಣ ಸಂಸ್ಥೆಯ ಮಾಲಿಕರಿಗೆ ವಿತರಣೆ ಮಾಡುತ್ತಿದೆ.

ಸರ್ಕಾರಿ ಕನ್ನಡ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರಿಲ್ಲ. ಕಾಂಪೌಂಡ್ ಮತ್ತು ಗೋಡೆ ಹಾಗೂ ಛಾವಣಿಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಅವುಗಳನ್ನು ಅಭಿವೃದ್ಧಿ ಪಡಿಸಿದರೆ ಇವರಿಗೆ ಕಮಿಷನ್ ದೊರೆಯುವುದಿಲ್ಲ.

ಖಾನಾಪುರ, ಅಥಣಿ, ನಿಪ್ಪಾಣಿ, ಬೀದರ್ ಜಿಲ್ಲೆಯ ತಾಲ್ಲೂಕುಗಳು, ಕೋಲಾರ, ತುಮಕೂರು ಜಿಲ್ಲೆಯ *ಗಡಿ ಪ್ರದೇಶದ ಸರ್ಕಾರಿ ಶಾಲೆಗಳನ್ನು ನೋಡಿದರೆ ಕಣ್ಣಲ್ಲಿ ನೀರು ಬರುವುದಿಲ್ಲ ರಕ್ತ ಬರುತ್ತದೆ.

ಸಾಹಿತ್ಯ ಸಮ್ಮೇಳನ ಎಂಬ ಯಲ್ಲಮ್ಮನ ಜಾತ್ರೆ ಮಾಡಿ ಮೂರು ದಿನ ಭೋರಿ ಭೋಜನ ಅಂತಾ ಇಪ್ಪತ್ತು ಕೋಟಿ ಖರ್ಚು ಮಾಡಿ ಬಂದರೆ ಕನ್ನಡ ಉದ್ಧಾರವಾಗುವುದಿಲ್ಲ.

ಸರ್ಕಾರದ ಮೇಲೆ ಒತ್ತಡ ಹೇರಿ ಸಚಿವ ಸ್ಥಾನ ಮಾನ ಪಡೆದ ವ್ಯಕ್ತಿಯಾಗಿದ್ದಾನೆ.

ನವ್ಯ ಆದಿಕವಿ ಪಂಪನ ಹೆಸರನ್ನು ತೆಗೆಯಲು ಹೊರಟರೇ ಈತನನ್ನು ಅಲ್ಲಿಂದ ಹೊರದಬ್ಬಲು ಎಲ್ಲಾ ಕನ್ನಡಿಗರು ಸಾಮೂಹಿಕವಾಗಿ ಹೋರಾಡಬೇಕಿದೆ.
ದಯವಿಟ್ಟು ಎಲ್ಲರೂ ಕೈ ಜೋಡಿಸಿ.

– ಜಗದೀಶ್ ಕೊಪ್ಪ, ಪತ್ರಕರ್ತರು

Leave a Reply