ಕಂದಾಯ ಇಲಾಖೆ ನೌಕರರು ಮಾತೃ ಹೃದಯದಿಂದ ಸ್ಪಂದಿಸಬೇಕು: ಕೃಷ್ಣ ಬೈರೇಗೌಡ

2 years ago

ಎಲ್ಲಾ ಗ್ರಾಮ ಲೆಕ್ಕಿಗರಿಗೂ ಲ್ಯಾಪ್‌ಟಾಪ್ ವಿತರಣೆ

ಬೆಂಗಳೂರು: ಕಂದಾಯ ಇಲಾಖೆ ಸಾರ್ವಜನಿಕರಿಂದ ಎಲ್ಲಾ ಹಂತದಲ್ಲೂ ಅತಿಹೆಚ್ಚು ಅವಲಂಬನೆ ಹೊಂದಿದ ಇಲಾಖೆಯಾಗಿದ್ದು, ನೌಕರರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಯೋಜನಾ ನೀಲಿನಕ್ಷೆ ಹೊಂದಿರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ 1,000 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರತಿಯೊಂದು ಮನೆಗೂ ಸಂಪರ್ಕವಿರುವ ಏಕೈಕ ಇಲಾಖೆ ಕಂದಾಯ ಇಲಾಖೆ. ಜಾತಿ-ಆದಾಯ ಪ್ರಮಾಣ ಪತ್ರದಿಂದ ಜಮೀನು ದಾಖಲೆ, ಮಾರಾಟ- ಖರೀದಿವರೆಗೆ ನೇರ ಅಥವಾ ಪರೋಕ್ಷವಾಗಿ ಜನ ಸಾಮಾನ್ಯರು ಕಂದಾಯ ಇಲಾಖೆಯನ್ನು ಅವಲಂಭಿಸಿರುತ್ತಾರೆ. ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆಯಾಗಿದ್ದು, ನೌಕರರೂ ಸಹ ಜನರಿಗೆ ಮಾತೃ ಹೃದಯದಿಂದಲೇ ಸ್ಪಂದಿಸಬೇಕು. ಎಷ್ಟೇ ಕೆಲಸದ ಒತ್ತಡ ಇದ್ದರೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಯೋಜನಾ ನೀಲಿನಕ್ಷೆ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಯಾರೂ ಊಹೆ ಮಾಡುವ ಮೊದಲೇ ನಾವು ಭವಿಷ್ಯದ ಬಗ್ಗೆ ಆಲೋಚಿಸಿ ಭೂಮಿ ಯೋಜನೆ ಅಡಿಯಲ್ಲಿ ಗಣಕೀಕೃತ ಪಹಣಿ ಮಾಡಿದ್ದೇವೆ. ಕಂದಾಯ ಇಲಾಖೆಯನ್ನು ಹಂತಹಂತವಾಗಿ ಸಂಪೂರ್ಣ ಆಧುನೀಕರಣಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 3.90 ಕೋಟಿ ಜಮೀನುದಾರರಿದ್ದು, 1.80 ಕೋಟಿ ಸರ್ವೇ ನಂಬರ್ ಇವೆ. 70 ರಿಂದ 1 ಕೋಟಿವರೆಗೆ ಹೊಸ ಸರ್ವೇ ನಂಬರ್ ಸೃಷ್ಟಿಸುವ ಅಗತ್ಯವಿದೆ. ಲಕ್ಷಾಂತರ ಜನರಿಗೆ ಜಮೀನು ಮಂಜೂರು ಮಾಡಿದ್ದೇವೆ. ಆದರೆ, ದರ್ಖಾಸ್ತು ಸರ್ವೇ ಮಾಡಿಕೊಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ರೀತಿಯ ಇಲಾಖೆಯ ಕೆಲಸಗಳೇ ಸಾಕಷ್ಟಿವೆ. ಕಂದಾಯ ಇಲಾಖೆಯಲ್ಲಿ ಎಷ್ಟು ಮಾಡಿದರೂ ಕೆಲಸ ಮುಗಿಯದು. ಆದರೂ, ಜನರ ಪರವಾಗಿ ಕೆಲಸ ಮಾಡಬೇಕಾದ ಕರ್ತವ್ಯವೂ ನಮ್ಮ ಮೇಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾ ದರ್ಶನ ಕಾರ್ಯಕ್ರಮದಲ್ಲೂ ಕಂದಾಯ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ ಎಂಬ ಬಗ್ಗೆಯೇ ಸಾಕಷ್ಟು ದೂರುಗಳು ದಾಖಲಾಗುತ್ತಿವೆ. ಇಲಾಖೆ ಕೆಲಸಗಳು ಹೊರತಾಗಿಯೂ ಜನರ ಸಮಸ್ಯೆ ಪರಿಹಾರ ಮಾಡುವ ಕೆಲಸವೇ ಹೆಚ್ಚಾಗಿ ಇರುವುದರಿಂದ ನಮಗೆ ನಿರ್ದಿಷ್ಟ ಯೋಜನೆ ಬದಲಾಗಬೇಕಿದೆ. ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ನಾವು ಅವರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕಿದೆ ಎಂದರು.

Leave a Reply