ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪರಿಶಿಷ್ಟ ಸಮುದಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ʼಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ನೇಮಿಸಿರುವುದು ಕಣ್ಣೊರೆಸುವ ತಂತ್ರʼ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಪರಿಶಿಷ್ಟರ ಕಣ್ಣೀರು ಒರೆಸುವುದಿರಲಿ, ಅವರತ್ತ ತಿರುಗಿಯೂ ನೋಡಿರಲಿಲ್ಲ ಅವರು ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ಹಿಂತಿರುಗಿ ನೋಡಿದರೆ ಉತ್ತಮ ಎಂದರು.
ಒಳ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಆಯೋಗ ನೀಡಿದ್ದ ವರದಿಯನ್ನು ತೆರೆದು ನೋಡುವ ಧೈರ್ಯವೂ ಅವರಿಗೆ ಇರಲಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ದೀಪ ಹಚ್ಚಿ, ಮಾತನಾಡದೇ ಬಂದಿದ್ದರು. ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ನಮ್ಮ ಬದ್ಧತೆ ಏನು ಎಂಬುದು ಎಲ್ಲ ಸಮುದಾಯಗಳಿಗೂ ತಿಳಿದಿದೆ. ಕಾನೂನು ಸ್ಥಾನಮಾನವೂ ನಮಗೆ ತಿಳಿದಿದೆ. ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕೆ ಇದೆ ಎಂಬುದನ್ನು ತೋರಿಸಿದ್ದೇವೆ ಎಂದು ತಿಳಿಸಿದರು.
ಪರಿಶಿಷ್ಟ ಸಮುದಾಯ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿದಾಗ ಬರೀ ದೀಪ ಹಚ್ಚಿ ಬಂದದಷ್ಟೇ ಸಿದ್ದರಾಮಯ್ಯ ಮಾಡಿದ್ದು, ಇನ್ನೊಬ್ಬರ ಬಗ್ಗೆ ಮಾತನಾಡುವ ಮೊದಲು ಅವರು ನಡೆದುಕೊಂಡ ರೀತಿ ಬಗ್ಗೆ ತಿರುಗಿ ನೋಡಿದರೆ ಒಳ್ಳೆಯದು ಎಂದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಕಾನೂನು ಏನಿದೆ? ಎಲ್ಲವೂ ನಮಗೂ ಗೊತ್ತಿದೆ. ಇಂತಹ ಪ್ರಮುಖ ವಿಚಾರಗಳಲ್ಲಿ ನಿರ್ಣಯ ತೆಗೆದುಕೊಳ್ಳುವ ದಿಟ್ಟತನ ನಮ್ಮ ಸರ್ಕಾರಕ್ಕಿದೆ. ನಮ್ಮ ಬದ್ಧತೆ ಏನು ಎಂಬುದು ಪರಿಶಿಷ್ಟ ಸಮುದಾಯಕ್ಕೆ ಗೊತ್ತಿದೆ ಎಂದರು.




