ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಹೆಚ್ಚಳದಲ್ಲಿ ಸಂಶೋಧನೆ ಆಗಲಿ: ಜಗದೀಪ ಧನಕರ್

2 years ago

ಧಾರವಾಡ: ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಿದ್ದು, ಮೌಲ್ಯವರ್ಧಿತ ಆಹಾರ ಉತ್ಪನ್ನಗಳ  ಹೆಚ್ಚಳಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳಾಗಬೇಕು ಮತ್ತು ಸಿ.ಎಸ್.ಆರ್, ಐ.ಸಿ.ಎ.ಆರ್ ನಿಧಿಗಳ ಬಳಕೆಗೆ ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಆದ್ಯತೆ ನೀಡಬೇಕೆಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯ ಅಮೃತ ಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲಬು, ರೈತರ ತಲಾ ಆದಾಯವನ್ನೂ ಇನ್ನು ಎಂಟುಪಟ್ಟು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುವಾಗುವಂತೆ ಕೃಷಿಯಲ್ಲಿ ಸಾಂಪ್ರದಾಯಿಕತೆ ಉಳಿಸಿಕೊಂಡು ಆಧುನಿಕತೆ ಅಳವಡಿಸಿಕೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಕೃಷಿಗೆ ಭಾರತ ಸರಕಾರ ಮೊದಲಿನಿಂದಲೂ ಆದ್ಯತೆ ನೀಡಿದೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಜೊತೆಗೆ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಅನುಸಂಧಾನ ಸೇರಿಸಿ, ಮಹತ್ವಪೂರ್ಣಗೊಳಿಸಿದ್ದಾರೆ. ರೈತರ ಹೊಲಗಳು ಸಮೃದ್ಧ ಬೆಳೆಗಳಿಂದ ಬೆಳೆದಾಗ ಮಾತ್ರ ದೇಶವು ಹೊಳೆಯುತ್ತದೆ. ಎಲ್ಲ ಸಂಶೋಧನೆಗಳು ಪ್ರಯೋಗಾಲಯದಿಂದ ನೇರವಾಗಿ ರೈತರ ತೋಟಗಳಿಗೆ ತಲುಪಬೇಕು. ತಜ್ಞರು, ಸಂಶೋಧಕರ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಅಂದಾಗ ಕೃಷಿ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯಗಳ ಸೇವೆ ಸಾರ್ಥಕವಾಗುತ್ತದೆ ಎಂದರು.  

ಧಾರವಾಡ ಕೃಷಿ ವಿಶ್ವವಿದ್ಯಾಲಯ, ಮಾದರಿ ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗಳಿಸಿದೆ. ಇಲ್ಲಿನ ಸಂಶೋಧನೆಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಇದು ನಮಗೆಲ್ಲ ಹೆಮ್ಮೆ ಮತ್ತು ಗೌರವ ತಂದಿದೆ ಎಂದರು.

Leave a Reply