ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಮನವಿ: ಸಿದ್ದರಾಮಯ್ಯ

2 years ago

ಬೆಂಗಳೂರು: ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂದು ನಾಮಕರಣ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪುಣ್ಯ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ವತ್ತುಗಳಿಗೆ ಕೆಂಪೇಗೌಡ, ರಾಯಣ್ಣ, ಬಸವಣ್ಣ, ಕುವೆಂಪು, ಕನಕದಾಸ, ಮಹಾತ್ಮಗಾಂಧಿ, ವಿವೇಕಾನಂದ ಎಲ್ಲ ಮಹಾತ್ಮರ ಆಶಯಗಳು ಸ್ಪೂರ್ಥಿಯಾಗಲಿ ಎನ್ನುವ ಕಾರಣಕ್ಕೆ ಅವರ ಹೆಸರುಗಳನ್ನು ಇಡಲಾಗುತ್ತದೆ ಎಂದರು.

ಕೆಂಪೇಗೌಡ ಪ್ರಾಧಿಕಾರ ಮಾಡಿದ್ದು ನಾವೇ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಗೆ ಶಿಫಾರಸ್ಸು ಮಾಡಿದ್ದು ಕೂಡ ನಾವೆ. ಇವರ ಆಶಯಗಳು ಎಲ್ಲರಿಗೂ ಆದರ್ಶ ಹಾಗೂ ಸ್ಪೂರ್ತಿಯಾಗಬೇಕು. ಆದರೆ ಇವರ ಆಶಯಗಳು ನಾಶ ಆಗಬೇಕು, ಸಂವಿಧಾನ ಇರಬಾರದು, ಅಸಮಾನತೆ ಮುಂದುವರೆಯಬೇಕು, ಯಾರೋ ದುಡಿದಿದ್ದನ್ನು ತಾವು ಕುಳಿತು ತಿನ್ನಬೇಕು ಎಂದು ಬಯಸುವವರು ಈಗಲೂ ನಮ್ಮ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಿದ್ದಾರೆ. ಅವರ ಬಗ್ಗೆ ತೀವ್ರ ಎಚ್ಚರದಿಂದ ಇರಬೇಕು ಎಂದರು.

ಸಮಾಜದ ಬದಲಾವಣೆಗೆ ಒಪ್ಪದ, ಸಮಾನ ಅವಕಾಶಗಳನ್ನು ಒಪ್ಪದ, ಅಸಮಾನತೆಯನ್ನು ಪೋಷಿಸಬೇಕು ಎನ್ನುವವರು ಈಗಲೂ ನಮ್ಮ ನಡುವೆಯೇ ಇದ್ದಾರೆ. ಇಂಥವರು ಬಹಳ ಅಪಾಯಕಾರಿ ಎಂದರು.

ದೇಶದ ಅವಕಾಶಗಳು ಸಮಾಜದ ಎಲ್ಲಾ ವರ್ಗದವರಿಗೆ ಹಂಚಿಕೆ ಆಗಬೇಕು, ಸಂಪತ್ತಿನ ಹಂಚಿಕೆ ಆಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಬಸವಣ್ಣನವರ ಆಶಯವೂ ಅದೇ ಆಗಿತ್ತು. ಕುವೆಂಪು ಅವರ ಆಶಯವೂ ಆಗಿತ್ತು. ಈ ಎಲ್ಲರ ಆಶಯ ರಾಯಣ್ಣನ ಹೋರಾಟದಲ್ಲೂ ಇತ್ತು ಎಂದರು.

ನಮ್ಮಲ್ಲಿ ಒಬ್ಬ ರಾಜನನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಈ ಒಡಕನ್ನು ಬಳಸಿಕೊಂಡು ಘಜ್ನಿ ಮಹಮದ್ ಮತ್ತು ಬ್ರಿಟಿಷರು, ಫ್ರೆಂಚರು ಮುಂತಾದವರು ದಾಳಿ ಮಾಡಿದರು .ನಮ್ಮವರ ಕುತಂತ್ರ-ಪಿತೂರಿಯಿಂದಲೇ ಬ್ರಿಟಿಷರು 400 ವರ್ಷ ಭಾರತ ಆಳಿದರು. ಸ್ವಾತಂತ್ರ ಪ್ರೇಮಿ, ದೇಶ ಪ್ರೇಮಿ ಸಂಗೊಳ್ಳಿರಾಯಣ್ಣನನ್ನು ನಮ್ಮವರ ಕುತಂತ್ರದಿಂದಲೇ ಬ್ರಿಟಿಷರಿಗೆ ಹಿಡಿದು ಕೊಟ್ಟರು ಎಂದರು.

ರಾಯಣ್ಣ ಕುರುಬ ಸಮುದಾಯದವರು ಎನ್ನುವ ಕಾರಣಕ್ಕೆ ನಾವು ಗೌರವಿಸುವುದಲ್ಲ, ಬದಲಿಗೆ ರಾಯಣ್ಣನ ದೇಶಪ್ರೇಮ ಮತ್ತು ತ್ಯಾಗದ ಕಾರಣದಿಂದಾಗಿ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು, ಗೌರವಿಸಬೇಕು. ಪ್ರತೀ ಮನೆಗಳಲ್ಲೂ ರಾಯಣ್ಣ ಜನಿಸಬೇಕು ಎಂದರು.

Leave a Reply