ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕೋಮುಗಲಭೆಗಳು ನಡೆದು ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲೆಯ ಸಮಸ್ತ ನಾಗರಿಕರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಮಾಧ್ಯಮ ಮಿತ್ರರಿಗೆ 75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ 500ಕ್ಕೂ ಅಧಿಕ ಸಾಮ್ರಾಜ್ಯಗಳನ್ನು ಒಗ್ಗೂಡಿಸಬೇಕಿತ್ತು. ವಿವಿಧ ಭಾಷೆ, ಧರ್ಮ, ಜಾತಿಯ ಜನರಿರುವ ಭಾರತಕ್ಕೆ ಒಂದು ಸಮಗ್ರ ಸಂವಿಧಾನದ ಅವಶ್ಯಕತೆ ಇದ್ದು, ಇದು ಸವಾಲಿನ ಕೆಲಸವಾಗಿತ್ತು. ಇಷ್ಟೊಂದು ವಿಭಿನ್ನ ರಾಷ್ಟ್ರಕಟ್ಟಲು ಸಾಧ್ಯವಾಗುತ್ತಾ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ಬಾಳುತ್ತಾರಾ? ಸಮೃದ್ಧ ಭಾರತ ನಿರ್ಮಾಣ ಸಾಧ್ಯವಾ? ಎಂದು ವಿದೇಶಿಗರು ಕುತೂಹಲದಿಂದ ನೋಡುತ್ತಿದ್ದರು ಎಂದು ಹೇಳಿದರು.
ಆಗ ಸಂವಿಧಾನದ ರಚನೆ ಮಾಡುವ ಕೆಲಸವನ್ನು ಯಾರಿಗೆ ಕೊಡಬೇಕು ಎಂದು ಚರ್ಚೆ ನಡೆದು, ಜವಾಹರ್ ಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಐರಿಷ್ ಸಂವಿಧಾನ ತಜ್ಞರನ್ನು ಸಂಪರ್ಕಿಸಲು ಆಲೋಚಿಸಿ ಮಹಾತ್ಮಾ ಗಾಂಧೀಜಿ ಅವರ ಬಳಿ ಈ ವಿಷಯ ಪ್ರಸ್ತಾಪ ಮಾಡುತ್ತಾರೆ. ಆಗ ಮಹಾತ್ಮಾಗಾಂಧೀಜಿ ಅವರು ದೇಶದ ವಿಭಿನ್ನತೆ ಕಾಪಾಡಲು ಹಾಗೂ ಸಶಕ್ತ ಸಮಾಜ ನಿರ್ಮಾಣ ಮಾಡಲು ಕೇವಲ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು ಎಂದು ಹೇಳಿದರು.
ಆಗ 7 ಜನ ತಜ್ಞರ ಸಂವಿಧಾನ ಕರಡು ಸಮತಿಯ ಅಧ್ಯಕ್ಷರನ್ನಾಗಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿದರು. ಆಗ ಬಾಬಾಸಾಹೇಬರು ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ದೇಶದ ನಾಗರಿಕರ ಮೂಲಭೂತ ಹಕ್ಕು, ಸಮಾನತೆ, ಭಾತೃತ್ವತೆ, ದೇಶಭಕ್ತಿ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು 141 ದಿನಗಳ ಕರಡನ್ನು ವಿಧಾನಸಭೆಯ ಮುಂದೆ ಇಟ್ಟರು ಎಂದರು.
ನಂತರ 2 ವರ್ಷ 11 ತಿಂಗಳ ಸುದೀರ್ಘ ಚರ್ಚೆ ನಡೆಸಿ ವಿಶ್ವದ ಅತಿದೊಡ್ಡ ಸಂವಿಧಾನ ಜಾರಿಗೆ ತರಲಾಯಿತು. ಸಂವಿಧಾನವನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ ತರುವ ಅವಕಾಶ ನೀಡಲಾಯಿತು. ಹಾಗಾಗಿ ಭಾರತದ ಸಂವಿಧಾನವನ್ನು ‘ಲಿವಿಂಗ್ ಡಾಕುಮೆಂಟ್’ ಎಂದು ಕರೆಯಲಾಗುತ್ತದೆ. ಆರ್ಟಿಕಲ್ 371 (J) ಬಂದಿದ್ದು ಕೂಡಾ ತಿದ್ದುಪಡಿಯ ಅವಕಾಶ ಇದ್ದುದರಿಂದ ಸಾಧ್ಯವಾಗಿದೆ. ಸಂವಿಧಾನವು ಬುದ್ಧ ಹಾಗೂ ಬಸವಣ್ಣನವರ ತತ್ವವಾದ ಸಮಾನತೆ, ಸಮಬಾಳು ಆಧಾರದ ಮೇಲೆ ಸ್ಥಾಪಿತವಾಗಿದೆ. ದೇಶದ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಹಕ್ಕು ಒದಗಿಸುವುದೇ ಸಂವಿಧಾನದ ಆಶಯವಾಗಿದೆ. ಸಮಾಜದ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರುವುದು ಇದರ ಮೂಲ ಉದ್ದೇಶವಾಗಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ. ಕೆಲ ಸಂಘಟನೆಗಳು ಸಂವಿಧಾನದ ಕುರಿತು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ . ಈ ಸಂಘಟನೆಗಳಿಗೆ ಸಮಾನತೆ ಏಕೆ ಬೇಕಾಗಿಲ್ಲ ಎಂದು ತಿಳಿಯುತ್ತಿಲ್ಲ. ಇತ್ತೀಚಿನ ವರ್ಷಗಳಿಂದ ದೇಶದಲ್ಲಿ ವಿಚಿತ್ರ ವಾತಾವರಣ ನಿರ್ಮಾಣವಾಗಿದೆ. ನೀವು ನನ್ನ ತತ್ವವನ್ನು ವಿಚಾರವನ್ನು ಒಪ್ಪಿಲ್ಲ ಎಂದರೆ ಹಾಗೂ ನಾನು ನಿಮ್ಮ ವಿಚಾರ ಒಪ್ಪಿಲ್ಲ ಎಂದರೆ ದೇಶದ್ರೋಹಿ ಎನ್ನಲಾಗುತ್ತಿದೆ. ಇಂತಹ ಸನ್ನಿವೇಶ ಈಗ ನಿರ್ಮಾಣವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಚಾರಗಳಲ್ಲಿ ಭಿನ್ನತೆ ಇದ್ದರೂ ಅದು ಸಂವಿಧಾನ ವಿರೋಧವಲ್ಲ ಎಂದರು.
1949 ನವೆಂಬರ್ 25 ರಂದು ಡಾ. ಅಂಬೇಡ್ಕರ್ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ, ಜಾತಿಗಳ ಮಧ್ಯೆ ಜಗಳ ಹಚ್ಚುವವರು, ದೇಶದ ಆರ್ಥಿಕತೆಗೆ, ಸಾಮಾಜಿಕ ಹಾಗೂ ಭ್ರಾತೃತ್ವಕ್ಕೆ ಧಕ್ಕೆ ತರುವವರೇ ನಿಜವಾದ ದೇಶದ್ರೋಹಿಗಳು ಎಂದು ಅಭಿಪ್ರಾಯಪಡುತ್ತಾರೆ. ಆ ಮಾತು ಇಂದಿಗೂ ಪ್ರಸ್ತುತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ನಮ್ಮ ಆಚಾರ ವಿಚಾರಗಳಲ್ಲಿ ವಿಭಿನ್ನತೆ ಇದ್ದರೂ ಕೂಡ ನಾವೆಲ್ಲ ಒಂದೇ ವೇದಿಕೆಯ ಮೇಲೆ ಇದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ನಾವೆಲ್ಲ ಒಗ್ಗಟ್ಟಾಗಿ ನಡೆದು ದೇಶಕಟ್ಟುವ ಕೆಲಸ ಮಾಡಬೇಕು. ಯಾಕೆಂದರೆ ದೇಶ ನಡೆಯುತ್ತಿರುವುದು ಯಾವುದೇ ಧರ್ಮಗ್ರಂಥಗಳಿಂದ ಅಲ್ಲ ಬದಲಿಗೆ ಸಂವಿಧಾನದಿಂದ ಎನ್ನುವುದನ್ನು ನಾವು ಅರಿಯಬೇಕು ಎಂದರು.
ಸಂವಿಧಾನದ ಪೀಠಿಕೆ ಕುರಿತಂತೆ ಜಾಗೃತಿ ಮೂಡಿಸಲು ಜಿಲ್ಲೆಯ 261 ಗ್ರಾಮಪಂಚಾಯತಿಗಳಲ್ಲಿ ‘ಸಂವಿಧಾನ ಜಾಗೃತ ಸಮಾವೇಶ’ವನ್ನು ಆಯೋಜಿಸಲಾಗಿದೆ. ಸಮಾನತೆಯ ಹರಿಕಾರ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ರೆಂದು ಸರ್ಕಾರ ಘೋಷಿಸಿದ್ದು ಸಮಾನತೆಯ ಹರಿಕಾರನಿಗೆ ನೀಡಿದ ಗೌರವಾಗಿದೆ. ಕುವೆಂಪು ಅವರು ಹೇಳಿರುವಂತೆ ನಮ್ಮ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಭ್ರಾತೃತ್ವ, ಸಮಾನತೆ ಎನ್ನುವುದು ನಮ್ಮ ಜಿಲ್ಲೆಯಿಂದಲೇ ಆರಂಭವಾಗಲಿ ಎಂದು ಆಶಿಸಿದರು.




