ನಡೆದಿರುವುದು ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಬಿ.ಜೆ.ಪಿ.ಯ ರಾಷ್ಟ್ರೀಯ ನಾಯಕರುಗಳು, ಪ್ರಧಾನಮಂತ್ರಿಗಳು, ಗೃಹಸಚಿವರು ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರುಗಳು ವಿವಿಧ ಮುಖಂಡರುಗಳು 550ಕ್ಕೂ ಹೆಚ್ಚು ಸಭೆಗಳನ್ನು, ರ್ಯಾಲಿಗಳನ್ನು ನಡೆಸಿ ಪ್ರಸ್ತಾಪಿಸಿರುವುದೆಲ್ಲಾ ಧರ್ಮದ ವಿಚಾರ, ಜಾತಿಯ ವಿಚಾರ ಮತ್ತು ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾಪಿಸಬೇಕಾಗಿರುವ ರಾಷ್ಟ್ರೀಯ ಭದ್ರತೆ ಮತ್ತು ಇತರೆ ರಾಷ್ಟ್ರಕ್ಕೆ ಸಂಬಂಧಪಟ್ಟಂತಹ ವಿಚಾರಗಳನ್ನಷ್ಟೆ ಪ್ರಸ್ತಾಪ ಮಾಡಿರುತ್ತಾರೆ.
ಇನ್ನು ಬಹುತೇತ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳ ಮಾತುಗಳೆ ಇದಾಗಿತ್ತು. ಪ್ರಣಾಳಿಕೆಗಳಲ್ಲೂ ರಾಜ್ಯದ ಪ್ರಾದೇಶಿಕ ವಿಚಾರಗಳಿಗೆ ಆದ್ಯತೆಗಳಿರಲಿಲ್ಲ. ಯಾರೂ ಸಹ ಕನ್ನಡ ಭಾಷೆಯ ಬೆಳವಣಿಗೆಯ ವಿಚಾರವನ್ನು ಪ್ರಸ್ತಾಪಿಸಿರುವುದಿಲ್ಲ. ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರವನ್ನು ಪ್ರಸ್ತಾಪಿಸಿರುವುದಿಲ್ಲ. ಕರ್ನಾಟಕದ ಅನ್ಯರಾಜ್ಯಗಳೊಂದಿಗೆ ಗಡಿಸಮಸ್ಯೆಗೆ ತಮ್ಮ ನಿಲುವೇನ್ನುಂಬುದನ್ನು ಸ್ಪಷ್ಟಪಡಿಸಲೇ ಇಲ್ಲ.
ಕರ್ನಾಟಕ ರಾಜ್ಯದ ಬೇರೆ ಬೇರೆ ರಾಜ್ಯಗಳೊಂದಿಗೆ ಇರುವ ನದಿ ನೀರಿನ ಹಂಚಿಕೆಯ ವಿಚಾರದಲ್ಲೂ ನಿಲುವುಗಳೇನು ಎಂಬುದನ್ನು ಸ್ಪಷ್ಟಪಡಿಸಲೇ ಇಲ್ಲ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಉನ್ನತೀಕರಣಕ್ಕೆ ಯೋಜನೆಗಳು ಎಲ್ಲಿಯೂ ಕಾಣಲಿಲ್ಲ. ಈ ರೀತಿಯಲ್ಲಿ ನಮ್ಮ ಪ್ರಾದೇಶಿಕ ವಿಚಾರಗಳಿಗೆ ಗಮನವನ್ನು ನೀಡದೆ ಚುನಾವಣೆಯನ್ನು ಒಂದು ರೀತಿಯಲ್ಲಿ ಲೋಕಸಭಾ ಚುನಾವಣಾ ಮಾಧರಿಯಲ್ಲಿಯೇ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಕೇಂದ್ರ, ರಾಜ್ಯ ಸಂಬಂಧಗಳ ಬಗ್ಗೆ ಬಿ.ಜೆ.ಪಿ.ಯವರಿಗೆ ಸ್ಪಷ್ಟತೆಯೇ ಇಲ್ಲ. ಒಕ್ಕೂಟ ವ್ಯವಸ್ಥೆಯ ವಿಚಾರದಲ್ಲಿ ಅವರ ಹೇಳಿಕೆಗಳು ಅವರುಗಳ ಗುಣಮಟ್ಟವನ್ನು ತೋರಿಸುತ್ತದೆ. ಸಂಪನ್ಮೂಲಗಳ ಹಂಚಿಕೆಯಲ್ಲಿ ಯೋಜನೆಗಳಿಗೆ ಕೇಂದ್ರದ ಪಾಲುನೀಡುವ ವಿಚಾರದಲ್ಲಿ ಪಾಳೇಗಾರಿಕೆಯ ಮಾತುಗಳು ಕೇಳಿ ಬಂದಿರುತ್ತದೆ.
ಯಾವುದೇ ಕೇಂದ್ರ ಸರ್ಕಾರವು ಯಾವುದೇ ರಾಜ್ಯಕ್ಕೆ ತನ್ನ ಪಾಲಿನ ಹಣವನ್ನು ನೀಡಬೇಕಾದುದ್ದು ಅದರ ಕರ್ತವ್ಯವೇ ಹೊರತು ಕೃಪೆಯಲ್ಲ. ಪ್ರತಿಯೊಂದು ರಾಜ್ಯವು ಕೇಂದ್ರ ಸರ್ಕಾರಕ್ಕೆ ತನ್ನದೇ ಆದ ರೀತಿಯಲ್ಲಿ ಹಣವನ್ನು ಸಂಗ್ರಹಿಸಿಕೊಡುತ್ತದೆ. ಕೇಂದ್ರ ಕೊಡುವುದು ರಾಜ್ಯಗಳು ಕೊಟ್ಟ ತೆರಿಗೆಯ ಒಂದಷ್ಟು ಪಾಲುಗಳನ್ನು ಮಾತ್ರ. ಪ್ರತಿಯೊಂದು ರಾಜ್ಯದಲ್ಲಿರುವ ಪ್ರತಿಯೊಬ್ಬ ನಾಗರೀಕರು ಕಟ್ಟುವ ಆದಾಯ ತೆರಿಗೆಯು ಸಹ ಕೇಂದ್ರದ ಖಜಾನೆಯನ್ನು ತುಂಬಿಸುತ್ತದೆ. ಕೇಂದ್ರದ ಖಜಾನೆ ಒಂದು ಪಕ್ಷದ ಸ್ವತ್ತು ಅಲ್ಲ ಅಥವಾ ಒಂದು ಪಕ್ಷದ ಕಛೇರಿಯ ಭಾಗವಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ವಿಚಾರಗಳಲ್ಲಿ ಸ್ಪಷ್ಟತೆ ಮೂಡಲೇಬೇಕಾಗಿದೆ. ಇಲ್ಲದಿದ್ದರೆ ಕೇಂದ್ರದ ಯಜಮಾನಿಕೆಯ ಪ್ರವೃತ್ತಿ ಮುಂದುವರೆಯುತ್ತಲೇ ಇರುತ್ತದೆ.
– ಕೆ.ಎಸ್.ನಾಗರಾಜ್, ಬೆಂಗಳೂರು




