ಬೆಂಗಳೂರು: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಎಲ್ಲಾ ಹುದ್ದೆಗಳನ್ನು ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ನೇಮಕಾತಿ ಮೂಲಕ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಈಗಾಗಲೇ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆಗಳು ನಡೆದಿದೆ. ಇದಕ್ಕಿರುವ ಕಾನೂನು ತೊಡಕುಗಳನ್ನು ನಿವಾರಿಸಿ ನೇಮಕಾತಿ ಆದೇಶ ನೀಡಲಾಗುವುದು ಎಂದರು.
ಖಾಲಿ ಇರುವ 300 ಪ್ರಾಂಶುಪಾಲರ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿದೆ. ಅದರ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರ ಪದೋನ್ನತಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಅವುಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಅದನ್ನು ಪುನರಾರಂಭಿಸಲಾಗುವುದು. ಇಲಾಖೆಗೆ ಬಜೆಟ್ನಲ್ಲಿ ಶೇ. 3.5 ರಷ್ಟು ಅನುದಾನ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಅದು ಶೇ. 1.7 ಕ್ಕೆ ಕಡಿತಗೊಂಡಿದೆ. ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದರೆ ಸಮಾಜದಲ್ಲಿ ನಿರುದ್ಯೋಗ ನಿವಾರಣೆ ಸಾಧ್ಯವಾಗಲಿದೆ, ಉತ್ಪಾದಕತೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಪದವೀಧರರಿಗೆ ಉದ್ಯೋಗವಕಾಶಗಳು ದೊರೆಯದಿರುವ ಸಮಸ್ಯೆಗಳು ಗಂಭೀರವಾಗಿದೆ. ಇದನ್ನು ಸರಿಪಡಿಸಲು ಪಠ್ಯಕ್ರಮವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುವುದು. ಪದವಿಯೊಂದಿಗೆ ಹೊರಬರುವ ವಿದ್ಯಾರ್ಥಿ ಸಂಪೂರ್ಣ ಆತ್ಮವಿಶ್ವಾಸದಿಂದ ಉದ್ಯೋಗ ಪಡೆದುಕೊಳ್ಳುವ ದೃಢತೆ ಪಡೆಯಲು ಅವಕಾಶ ಆಗುವಂತ ವ್ಯವಸ್ಥೆ ರೂಪಿಸುವುದಾಗಿ ಹೇಳಿದರು.




