ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳ ಅಂತರದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ 11 ಜನರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಜೀವ ಹಾನಿ ತಪ್ಪಿಸಲು ಅಗತ್ಯ ಮತ್ತು ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ 500 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವನ್ಯ ಜೀವಿಗಳ ಹಾವಳಿ ತಡೆಗಟ್ಟುವ ಸಂಬಂಧ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅರಣ್ಯ ಘಟಕದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಮತ್ತು ವನ್ಯ ಜೀವಿ ಸಂಘರ್ಷ ಇಂದು ನಿನ್ನೆಯದೇನಲ್ಲ. ಹಿಂದಿನಿಂದ ನಡೆಯುತ್ತಿದೆ. ಆದರೆ, ಅರಣ್ಯ ಪ್ರದೇಶ ಕಡಿಮೆ ಆಗುತ್ತಿದ್ದು, ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.
ಆನೆಗಳು ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳಿಗೆ 500 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗುವುದು. ಆನೆ ಕಾರಿಡಾರ್ ಗಳಲ್ಲಿ ರಸ್ತೆ, ರೈಲು, ವಿದ್ಯುತ್ ಕಂಬ, ನೀರಿನ ಕೊಳವೆ ಅಳವಡಿಕೆಗಾಗಿ ಕೆಲವು ಭಾಗ ಬಳಕೆಯಾಗಿದೆ. ಆದರೆ, ಖಾಸಗಿಯವರಿಂದ ಒತ್ತುವರಿ ಆಗಿದ್ದರೆ ಇದನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ, ಆನೆ ಕಾರಿಡಾರ್ ರಕ್ಷಿಸಲಾಗುವುದು ಎಂದು ಹೇಳಿದರು
ಈ ಬಾರಿ ವಾಡಿಕೆಗಿಂತ ಬಹಳ ಕಡಿಮೆ ಮಳೆ ಆಗಿದ್ದು, ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಸಮಸ್ಯೆಯಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ವನ್ಯಜೀವಿಗಳಿಗೆ ಸೂಕ್ತ ಆಹಾರ ದೊರಕುವಂತೆ ಮಾಡುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಅರಣ್ಯದೊಳಗೆ ಅಥವಾ ಅರಣ್ಯದ ಅಂಚಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಅಂತಹ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅರಣ್ಯಾಧಿಕಾರಿಗಳ ಲೋಪ ಕಂಡುಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.
ರಾಜ್ಯದಲ್ಲಿ ಆನೆಗಳ ದಾಳಿಯಿಂದಲೇ ಅಧಿಕ ಸಾವು ಸಂಭವಿಸುತ್ತಿದೆ. ಕಳೆದ ಐದೂವರೆ ವರ್ಷದಲ್ಲಿ 148 ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. 2018-19ರಲ್ಲಿ 13 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದರೆ, 2019-20ರಲ್ಲಿ 30, 2020-21ರಲ್ಲಿ 26, 2021-22ರಲ್ಲಿ 28, 2022-23ರಲ್ಲಿ 30 ಹಾಗೂ 3.09.2023ರವರೆಗೆ 21 ಅಮೂಲ್ಯ ಜೀವ ಹಾನಿ ಆಗಿದೆ. ಇದು ಅತ್ಯಂತ ಆತಂಕದ ವಿಚಾರ ಎಂದು ವಿವರಿಸಿದರು.
ಸೂಕ್ತ ಪರಿಹಾರ: ವನ್ಯ ಮೃಗಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜೊತೆಗೆ 4 ವರ್ಷಗಳ ಕಾಲ 4 ಸಾವಿರ ರೂ. ಪಿಂಚಣಿಯನ್ನೂ ನೀಡಲಾಗುತ್ತಿದೆ. ನಾವು ನೀಡುವ ಪರಿಹಾರದಿಂದ ಜೀವ ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಕ್ಕೆ ಆಸರೆ ಆಗುತ್ತದೆ ಎಂದು ತಿಳಿಸಿದರು.
ಹೊರ ಬಾರದಂತೆ ಮನವಿ: ಆನೆಗಳು ನಾಡಿಗೆ ಬಂದಾಗ, ಅರಣ್ಯ ಇಲಾಖೆಯವರು ಸಾಮಾಜಿಕ ತಾಣಗಳು, ಮಾಧ್ಯಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಆದರೂ ಕೆಲವರು ಮನೆಯಿಂದ ಹೊರಬಂದು ತಮ್ಮ ಜೀವ ಕಳೆದುಕೊಂಡಿದ್ದಾರೆ. ಆನೆಗಳ ಸಂಚಾರದ ಬಗ್ಗೆ ಮಾಹಿತಿ ಇದ್ದಾಗ, ಯಾರೂ ಕಾಡಿನ ಅಂಚಿಗೆ, ತೋಟಗಳಿಗೆ ಹೋಗಬಾರದು ಎಂದು ಮನವಿ ಮಾಡಿದರು.



