ಕೋಲಾರದಲ್ಲಿ 85 ಸೇರಿ ರಾಜ್ಯದ ಬಹುತೇಕ ಕಡೆ ಅಕ್ರಮ ಕಲ್ಲುಗಣಿ
ಅಕ್ರಮ ಕಲ್ಲುಗಣಿಗಳಿಂದ 6000 ಕೋಟಿ ರೂ ದಂಡ ಬಾಕಿ
ಅಕ್ರಮ ಕಲ್ಲುಗಣಿಗಾರಿಕೆಗಳ ವಿರುದ್ಧ 3 ವರ್ಷದಲ್ಲಿ 485 ಕೇಸ್
ಬಾಕಿ ದಂಡ ವಸೂಲಿಗೆ ಕ್ರಮ!
ಬೆಳಗಾವಿ: ರಾಜ್ಯಾದ್ಯಂತ ಬಹತೇಕ ಕಲ್ಲುಗಣಿಗಾರಿಕೆಗಳು ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದು, 6,000 ಕೋಟಿ ರೂ. ದಂಡ ಬಾಕಿ ಉಳಿಸಿಕೊಂಡಿವೆ. ಶೀಘ್ರದಲ್ಲಿ ಬಾಕಿ ದಂಡ ವಸೂಲಿ ಮಾಡಲಾಗುವುದು ಹಾಗೂ ಸಕ್ರಮ ಕಲ್ಲುಗಣಿಗಾರಿಕೆ ಕಾನೂನು ಪಾರದರ್ಶಕತೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕೋಲಾರದಲ್ಲಿ ಎಷ್ಟು ಅಕ್ರಮ ಕಲ್ಲುಗಣಿಗಾರಿಕೆಗಳಿವೆ? ಈ ಕಲ್ಲುಗಣಿಗಾರಿಕೆಗಳಿಂದ ಸಂಗ್ರಹಿಸಿದ ದಂಡದ ಮೊತ್ತ ಎಷ್ಟು? ಎಂಬ ಕುರಿತ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಬೈರೇಗೌಡ, ಕೋಲಾರದಲ್ಲಿ ಒಟ್ಟು 85 ಕಡೆಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಆದರೆ, ಇಲ್ಲಿ ಗಣಿಗಾರಿಕೆ ನಡೆಸುತ್ತಿರುವವರೆಲ್ಲರೂ ದಲಿತ ಸಮಾಜಕ್ಕೆ ಸೇರಿದವರು ಮತ್ತು ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಸುವವರಲ್ಲ. ಕಳೆದ 50 ವರ್ಷಗಳಿಂದ ಆ ಭಾಗದಲ್ಲಿ ಬಂಡೆ, ಚಪ್ಪಡಿ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸದ ಬಗ್ಗೆ ತಕ್ಷಣಕ್ಕೆ ಮತ್ತೇನನ್ನೋ ಅರ್ಥೈಸುವುದು ಬೇಡ ಎಂದರು.
ಕೋಲಾರದಲ್ಲಿ ಎಲ್ಲಾ ಕಲ್ಲು ಗಣಿಗಾರಿಕೆಗಳಲ್ಲೂ ಸರ್ಕಾರದಿಂದ ಪರವಾನಗಿ ಪಡೆದಿರುವುದಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸಲಾಗಿದೆ. ಹೀಗಾಗಿ ೧೨ ಕೋಟಿ ರೂ. ರಾಜಸ್ವ ಹಣವೂ ಸೇರಿ ಒಟ್ಟು 125 ಕೋಟಿ ರೂ. ದಂಡ ವಿಧಿಸಲಾಗಿದೆ. ಇದಲ್ಲದೆ, ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ನಿಯಮ ಮೀರಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಳೆದ ಮೂರು ವರ್ಷದಲ್ಲಿ ಅಧೀಕೃತ ಪರವಾನಗಿ ಇಲ್ಲದೆ ಕಲ್ಲು ಸಾಗಾಣೆ ಮಾಡಿದ ಆರೋಪದ ಮೇಲೆ 485 ಪ್ರಕರಣಗಳನ್ನು ದಾಖಲಿಸಿದ್ದು, 2060 ಕೋಟಿ ರೂ. ದಂಡ ವಿಧಿಸಲಾಗಿದೆ. ಈವರೆಗೆ ಒಟ್ಟಾರೆಯಾಗಿ ಅಕ್ರಮ ಕಲ್ಲುಗಣಿಗಳಿಂದ ರಾಜ್ಯಕ್ಕೆ ಒಟ್ಟು 6,000 ಕೋಟಿ ರೂ. ದಂಡ ಬಾಕಿ ಇದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪರಿಷತ್ ಗೆ ಮಾಹಿತಿ ನೀಡಿದರು.
ಕಳೆದ ಸರ್ಕಾರಗಳು ಜನರಿಗೆ ಜಲ್ಲಿ ಮತ್ತು ಕಲ್ಲುಗಳು ಅಗತ್ಯ ಇದೆ ಎಂಬ ಕಾರಣಕ್ಕೆ ದಂಡ ವಸೂಲಿಗೆ ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರೂ ಸಹ ಜನರ ಅವಶ್ಯಕತೆಗೆ ತಕ್ಕಂತೆ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಇಂತಹ ಬಾಕಿ ಹಣ ವಸೂಲಾತಿಗೆ ಕ್ರಮ ತೆಗೆದುಕೊಳ್ಳುವ ಸಂಬಂಧ ಈವರೆಗೆ ಎರಡು ಬಾರಿ ಕ್ಯಾಬಿನೆಟ್ ಉಪ ಸಮಿತಿ ಸಭೆ ನಡೆಸಿ ಚರ್ಚಿಸಿದೆ ಎಂದರು.
ಈ ಸಭೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವವರಿಗೆ ಒನ್ ಟೈಮ್ ಸೆಟಲ್ಮೆಂಟ್ ನೀಡುವ ಬಗ್ಗೆ ಚರ್ಚಿಸಲಾಗಿದೆ. ಪರವಾನಗಿ ಪಡೆದ ಕ್ವಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದರೆ 1:1 ರ ಅನುಪಾತ ಹಾಗೂ ಪರವಾನಗಿ ಪ್ರದೇಶ ಮೀರಿ ಒತ್ತುವರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದ್ದರೆ 1:2ರ ಅನುಪಾತದಲ್ಲಿ ದಂಡ ವಿಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಈವರೆಗೆ ದಂಡ ವಸೂಲಿಯಾಗಿಲ್ಲ. ಮುಂದಿನ ತಿಂಗಳು ಮತ್ತೊಂದು ಸಭೆ ನಡೆಸಿ ದಂಡ ವಸೂಲಾತಿ ಹಾಗೂ ಗಣಿಗಾರಿಕೆಗಳನ್ನು ಕಾನೂನು ಪಾರದರ್ಶಕತೆಯ ಅಡಿಯಲ್ಲಿ ತರಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.




