ಬೆಳಗಾವಿ: ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಜಯಪುರಕ್ಕೆ 105 ಕೋಟಿ ರೂ ಅನುದಾನ ನೀಡಿದ್ದರು. ದುರ್ದೈವ ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ರದ್ದುಮಾಡಿತ್ತು. ಯತ್ನಾಳ್ ಅವರೇ ನಿಮ್ಮ ಬಾಯಿ ಸರಿಯಿದ್ದರೆ ಸಿಎಂ ಆಗುವ ಯೋಗ್ಯತೆಯಿತ್ತು ಎಂದು ಕೆಲವರು ಹೇಳಿದ್ದರು. ನಾನ್ಯಾರಿಗೂ ಹೆದರುವುದಿಲ್ಲ, ಹೇಳಬೇಕಾದ್ದನ್ನು ನೇರವಾಗಿ ಹೇಳ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದುವರೆಗೆ ಸ್ವಪಕ್ಷೀಯರೇ ವಿರುದ್ಧವೇ ಗಂಭೀರ ಆರೋಪ ಮಾಡುತ್ತಿದ್ದ ಯತ್ನಾಳ್ ವಿಧಾನಸಭೆಯಲ್ಲಿ ಇಂದು ನಡೆದ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲೂ ತಮ್ಮ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದರು.
ಉತ್ತರ ಕರ್ನಾಟಕ ಪ್ರದೇಶದ ಸಮಸ್ಯೆಗಳ ಕುರಿತು ವಿಶೇಷ ನಿಯಮಗಳ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಿ.ಸಿ.ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಪಂಚಮಸಾಲಿ ಸಮುದಾಯವನ್ನು ಸಮಾಧಾನ ಪಡಿಸಲು ಹೊರಟಿದ್ದಾರೆ. ಇದಕ್ಕೆ ಮೇಲಿಂದ ಅನುಮತಿ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದರು.
ಸಿಎಂ ಬೊಮ್ಮಾಯಿ, ಭೈರತಿ ಬಸವರಾಜ್ ಅವರು ಹೆಚ್ಚಿನ ಅನುದಾನ ನೀಡಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ನೆರವಾದರು. ಅಧಿಕಾರದಲ್ಲಿದ್ದಾಗ ಸಹಾಯ ಮಾಡದವರು ಈಗ ಮಾಜಿಗಳಾಗಿದ್ದಾರೆ. ನಾನು ಗುರಿ ಮಾಡಿದರೆ ಅವರು ಮಾಜಿಯಾಗುವವರೆಗೆ ಬಿಡಲ್ಲ. ಆದರೆ ನನ್ನ ಗುರಿಯಾಗಿಸಿಕೊಂಡವರು ಮಾಜಿಯಾಗಿ ಮನೆಯಲ್ಲಿ ಕುಳಿತಿದ್ದಾರೆ ಎಂದು ಕಿಡಿಕಾರಿದರು.
ವಿಜಯಪುರಕ್ಕೆ ವೈದ್ಯಕೀಯ ಕಾಲೇಜು ತಪ್ಪಿಸಿ ನನ್ನನ್ನು ಗುರಿಯಾಗಿಸಿಕೊಂಡ ಸಚಿವರೊಬ್ಬರು ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಮಾತಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಕಾಗವಾಡ ಶಾಸಕ ರಾಜು ಕಾಗೆ, ನಿಮ್ಮ ಸಹಾಯಕ್ಕೆ ಬರುತ್ತೇನೆ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಯತ್ನಾಳ್, ನನ್ನ ಸಹಾಯಕ್ಕೆ ನಾನೇ ಇದ್ದೇನೆ, ಬೇರೆಯವರು ಬೇಡ. ನಾನು ಒಂಟಿ ಸಲಗ ಇದ್ದೇನೆ. ಒಂಟಿ ಸಲಗ ಆಗಿಯೇ ಹೊಡೆಯುತ್ತೇನೆ ಎಂದು ಚಟಾಕಿ ಹಾರಿಸಿದರು.
ಬಿಜೆಪಿಯವರು ನಿಮ್ಮ ಜೊತೆ ಇಲ್ವಾ ಹಾಗಾದರೆ ಎಂದು ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಕೆಣಕಿದಾಗ, ಇಲ್ಲ ಅಂತಾನೇ ತಿಳಿದುಕೊಳ್ಳಿ, ಸುಮ್ನೆ ಆರು ತಿಂಗಳಿಗೆ ಏಕೆ ಮಾತಾಡ್ತೀರಿ ಎಂದರು.
ಬೆಳಗಾವಿ ಸುವರ್ಣ ಸೌಧ ನಿರ್ಮಾಣ ಅದ ಮೇಲೆ 11ನೇ ಸದನದಲ್ಲಿ ಉತ್ತರ ಕರ್ನಾಟಕದ ಚರ್ಚೆ ನಡೆಯುತ್ತಿದೆ, ಮೊದಲ ದಿನವೇ ಚರ್ಚೆಯಾಗಬೇಕಿತ್ತು, ಈವರೆಗೂ ಆಲಿಲ್ಲ. ಹಾಗಿದ್ದರೆ ಈ ಭಾಗದಲ್ಲಿ ಸದನದ ಕಲಾಪ ನಡೆಸುವ ಉದ್ದೇಶವೇನು? ಬೆಳಗಾವಿ ಸಮಸ್ಯೆ ಮಹಾರಾಷ್ಟ್ರ ಗಡಿ, ಉತ್ತರಕನ್ನಡ ಅಭಿವೃದ್ಧಿ ಚರ್ಚೆ ಆಗಬೇಕೆಂದು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಿದ್ದಾರೆ. ಆದರೆ ಲಾಭವೇನು? ಸಮಸ್ಯೆಗಳೆ ಚರ್ಚೆಯಾಗಿಲ್ಲ ಎಂದರು.
ನಾನು ಸಮಗ್ರ ಕರ್ನಾಟಕದ ಪರವಾಗಿದ್ದೇನೆ, ಕರ್ನಾಟಕ ಪ್ರತ್ಯಕತೆಗೆ ಎಂದಿಗೂ ಬೆಂಬಲ ಕೊಟ್ಟಿಲ್ಲ, ಎಲ್ಲರೂ ಒಂದಾಗಿ ಚಾಮರಾಜನಗರದಿಂದ ಬೀದರ್, ಕೋಲಾರದಿಂದ ಕೊಡಗುವರಿಗೂ ಒಂದೇ ಭಾವನೆ ಗಟ್ಟಿಗೊಳಿಸಬೇಕು. ಅಭಿವೃದ್ಧಿ ಮತ್ತು ಸ್ಥಾನಮಾನಗಳಲ್ಲಿ ಸಮಾನ ಅವಕಾಶ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು. ಅಖಂಡ ಕರ್ನಾಟಕದ ವೈಭವವನ್ನು ಉತ್ತರದಿಂದ ದಕ್ಷಿಣದವರಿಗೆ ಕವಿಗಳು ವರ್ಣಿಸಿದ್ದಾರೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗ ಹಿಂದುಳಿಯಲು ನಮ್ಮ ಭಾಗದ ಜನಪ್ರತಿನಿಧಿಗಳು ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಧ್ವನಿ ಎತ್ತಿದ್ದರೆ 100 ರೂಗಳಲ್ಲಿ 20 ರೂಗಳಾದರೂ ನಮ್ಮ ಭಾಗಕ್ಕೆ ಸಿಗುತ್ತಿತ್ತು. ಆದರೆ ಜನಪ್ರತಿನಿಧಿಗಳು ಗಂಭೀರವಾಗಿ ಕೆಲಸ ಮಾಡಲಿಲ್ಲ ಎಂದರು.
ಎಚ್.ಕೆ ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ ಬೊಮ್ಮಾಯಿ ಬಿಟ್ಟರೆ ಉಳಿದೆಲ್ಲಾ ನೀರಾವರಿ ಮಂತ್ರಿಗಳು ಹಳೆ ಮೈಸೂರು ಭಾಗದವರೇ ಹೆಚ್ಚಾಗಿದ್ದಾರೆ. ರಮೇಶ ಜಾರಕಿಹೊಳಿಯವರು ಏನಾದರೂ ಮಾಡಬೇಕೆಂದು ಹೊರಟರು. ಅವರ ವಿರುದ್ಧ ಕುತಂತ್ರ ರಾಜಕಾರಣ ಮಾಡಿ ಮುಗಿಸಿದರು. ಇಂತಹ ಹಲ್ಕಾ ರಾಜಕಾರಣ ಬೇಕಿರಲಿಲ್ಲ ಎಂದು ಕಿಡಿಕಾರಿದರು.
ಹಲ್ಕಾ ಪದ ಬಳಕೆ ಸರಿಯಲ್ಲ. ಅದನ್ನು ಹಿಂಪಡೆಯಿರಿ ಎಂದು ಸಭಾಧ್ಯಕ್ಷ ಪೀಠದಲ್ಲಿದ್ದ ರುದ್ರಪ್ಪ ಲಮಾಣಿ ಸಲಹೆ ನೀಡಿದರು. ನೀವು ಬೇಕಾದರೆ ಕಡತದಿಂದ ತೆಗೆಯಿರಿ ನಾನು ಹಿಂಪಡೆದುಕೊಳ್ಳುವುದಿಲ್ಲ ಎಂದು ಯತ್ನಾಳ್ ಹಠ ಮಾಡಿದರು.
ಎಲ್ಲಾ ಅಭಿವೃದ್ಧಿಯೂ ಬೆಂಗಳೂರು ಕೇಂದ್ರೀಕೃತವಾಗಿದೆ. ಬಿಜಾಪುರ, ಬೀದರ್ ಗಳಿಂದ ಬರುವ ಹುಡುಗರು 12-15 ಸಾವಿರಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದಾರೆ. ಒಂದು ಕೊಠಡಿಯಲ್ಲಿ 4-5 ಜನ ಇದ್ದುಕೊಂಡು, ತಲಾ 3 ಸಾವಿರ ರೂಪಾಯಿ ಬಾಡಿಗೆ ಹಂಚಿಕೊಳ್ಳುತ್ತಿದ್ದಾರೆ. ಶನಿವಾರ ಬಟ್ಟೆ ಒಗೆದು, ಒಂದು ಸಿನಿಮಾ ನೋಡಿದರೆ 12 ಸಾವಿರ ಆಗುತ್ತೆ. ಇನ್ನೂ ಆರ್ಥಿಕವಾಗಿ ಉದ್ಧಾರವಾಗುವುದು ಹೇಗೆ ಎಂದರು.
ನೆರೆಯ ಮಹಾರಾಷ್ಟ್ರದಲ್ಲಿ 3-4 ನಗರಗಳನ್ನು ನಿರ್ಮಾಣ ಮಾಡಿದ್ದಾರೆ. ಮುಂಬೈ, ಪುಣೆ ಸೇರಿ ಪ್ರತಿ ಜೆಲ್ಲೆಯಲ್ಲೂ ಕೈಗಾರಿಕೆ ಮಾಡಲಾಗುತ್ತಿದೆ. ನಾಗ್ಪುರ ಎಂದು ಮಾಡಿ, ವರ್ಷಕ್ಕೆ ಎರಡು ಬಾರಿ ಅಧಿವೇಶನ ನಡೆಸುತ್ತಾರೆ. ಇಲ್ಲಿ 10 ದಿನವೂ ಅಧಿವೇಶನ ನಡೆಯುವುದಿಲ್ಲ ಎಂದರು.
ಆರ್. ಅಶೋಕ್ ಅವರು ವಿಪಕ್ಷ ನಾಯಕರಾಗಿದ್ದಾರೆ, ನಮಗೆ ಬೇಜಾರಿಲ್ಲ, ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಉತ್ತರ ಕರ್ನಾಟಕದ ಜನರಿಗೆ ಗೊತ್ತಾಗಿದೆ. ಯತ್ನಾಳ್ ಬಾಯಿ ಸರಿಯಿದ್ದರೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ನನ್ನ ಬಾಯಿ ಸರಿ ಇರಲಿ ಬಿಡಲಿ ಆದರೆ ವಿಜಯಪುರದಲ್ಲಿ ಒಂದು ರಸ್ತೆ ಸರಿ ಇರಲಿಲ್ಲ. ನಾನು ಹೋರಾಟ ಮಾಡಿ ಕುಮಾರಸ್ವಾಮಿಯವರಿಂದ 1500 ಕೋಟಿ ಪಡೆದುಕೊಂಡಿದ್ದೆ. ನಾವು ಜನರ ಸಲುವಾಗಿ ಮಾತನಾಡಲೇಬೇಕು ಎಂದರು.
ಬೆಂಗಳೂರಿನಲ್ಲಿ ಒಂದು ಸಚಿವ ಸಂಪುಟ ಸಭೆ ನಡೆದರೆ, ಇನ್ನೊಂದು ಸಭೆ ಸುವರ್ಣ ಸೌಧದಲ್ಲಿ ನಡೆಸಬೇಕು. ವರ್ಷದಲ್ಲಿ 100 ದಿನ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಕಲಾಪ ನಡೆಸಬೇಕು. ಸುವರ್ಣ ಸೌಧಕ್ಕೆ ಕೇವಲ ಲೈಟಿಂಗ್ ಮಾಡಿದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗುವುದಿಲ್ಲ. ಎರಡನೇ ಹಂತದ ಕಾರ್ಯದರ್ಶಿ ಹುದ್ದೆಗಳನ್ನು ಇಲ್ಲಿಗೆ ಸ್ಥಳಾಂತರಿಸಿ. ಸಕ್ಕರೆ ನಿರ್ದೇಶನಾಲಯ ಇಲ್ಲಿದೆ. ಆದರೆ ಕಚೇರಿಯಲ್ಲಿ ಮೂವರು ಸಿಬ್ಬಂದಿಯಿಲ್ಲ. ಎಲ್ಲಾ ಹುದ್ದೆಗಳು ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗಕ್ಕೆ ಸಿಕ್ಕಿವೆ. ಉತ್ತರ ಕರ್ನಾಟಕ ಭಾಗಕ್ಕೆ ಭಾರೀ ಅನ್ಯಾಯವಾಗಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಸರಿಯಲ್ಲ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಆಹಾರದ ಕೊರತೆ ಇದ್ದಾಗ ಜೈ ಜವಾನ್, ಜೈ ಕಿಸಾನ್ ಎಂದು ಕರೆ ಕೊಟ್ಟ ಲಾಲ್ ಬಹುದೂರ್ ಶಾಸ್ತ್ರಿ 1964ರಲ್ಲಿ ಆಲಮಟ್ಟಿಗೆ ಶಿಲಾನ್ಯಾಸ ಮಾಡಿದ್ದರು. ಜನರ ಬದುಕು ಸುಧಾರಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹೆಚ್ಚಿಸಬೇಕು. ಉತ್ಪಾದನೆಯನ್ನು ವೃದ್ಧಿಬೇಕು. ಪ್ರತಿಯೊಂದು ರಾಜ್ಯದ ಧ್ಯೇಯವೇ ಆರ್ಥಿಕ ವರಮಾನ ಹೆಚ್ಚಿಸಿಕೊಳ್ಳುವುದು. ಎಲ್ಲ ಜನಾಂಗಗಳ, ಎಲ್ಲ ಭಾಗಗಳ ಸಮಗ್ರ ಅಭಿವೃದ್ಧಿಯಾಗಬೇಕು. ಜನರ ಆದಾಯ ಹೆಚ್ಚಾಗಬೇಕು. ಎಲ್ಲರಿಗೂ ನ್ಯಾಯ ಸಿಗಬೇಕು. ಮೈಸೂರು ಕರ್ನಾಟಕ ಉತ್ತಮ ಅಭಿವೃದ್ಧಿ ಸಾಧಿಸಿದೆ. ಮೈಸೂರು ಮಹಾರಾಜರು ನೀರಾವರಿಗೆ ಆದ್ಯತೆ ನೀಡಿದರು. ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣ ಒಡೆಯರ್ ಮಹಾರಾಜರು ಏಷ್ಯಾ ಖಂಡದಲ್ಲೇ ಮೊದಲ ವಿದ್ಯುತ್ ಘಟಕ ಸ್ಥಾಪಿಸಿದರು ಎಂದರು.
ಆದರೆ ಉತ್ತರ ಕರ್ನಾಟಕ ಭಾಗದ ದುರ್ದೈವ. ಕಲ್ಯಾಣ ಕರ್ನಾಟಕ , ಮುಂಬೈ ಕರ್ನಾಟಕದಲ್ಲಿ ನವಾಬರ ಆಡಳಿತವಿತ್ತು. ನಿಜಾಂ ಶಾಯಿ, ಆದಿಲ್ ಶಾಯಿ ಸೇರಿದಂತೆ ಹಲವು ರಾಜರು ಗೋರಿಗಳನ್ನು ಅಭಿವೃದ್ಧಿ ಪಡಿಸಿಕೊಂಡರು. ಆ ರಾಣಿ, ಈ ರಾಣಿ ಎಂದು ಗೋರಿಗಳನ್ನು ಕಟ್ಟಿಕೊಂಡರು. ಕಲಬುರಗಿ,ಹೋಗಿ , ಬೀದರ್, ವಿಜಯಪುರ ಸೇರಿದಂತೆ ಎಲ್ಲ ಕಡೆ ಗೋರಿಗಳೇ ಹೆಚ್ಚಾಗಿ ಕಾಣುತ್ತವೆ ಎಂದರು.
ಈ ಹಂತದಲ್ಲಿ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾಗ, ನಿಜಾಮರನ್ನು ಸಮರ್ಥಿಸಿಕೊಳ್ಳುವುದೇ ನಿಮ್ಮ ಉದ್ಯೋಗ ಕುಳಿತುಕೊಳ್ಳಿ ಎಂದ ಯತ್ನಾಳ್, ಆ ಭಾಗ ಅಭಿವೃದ್ಧಿಯಾಗಿದೆ, ನಮ್ಮ ಭಾಗ ಅಭಿವೃದ್ಧಿಯಾಗಿಲ್ಲ ಎಂಬ ಹೊಟ್ಟೆಕಿಚ್ಚಿಲ್ಲ. ಹಳೆ ಮೈಸೂರು ಭಾಗವನ್ನು ಆದರ್ಶವಾಗಿಟ್ಟುಕೊಂಡು ನಾವು ಬದ್ಧತೆ ಪ್ರದರ್ಶಿಸಬೇಕಿದೆ ಎಂದು ಹೇಳಿದರು.



