ಧಾರವಾಡ: ಧಾರವಾಡ ಕರ್ನಾಟಕ ಲೋಕಾಯುಕ್ತ ಪೊಲೀಸ್ ಕಚೇರಿಯ ಪೊಲೀಸ್ ಅಧಿಕಾರಿಗಳ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಡಿಸೆಂಬರ್ 13 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹುಬ್ಬಳ್ಳಿ ಹಾಗೂ ನವಲಗುಂದದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಧಾರವಾಡ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಡಿಸೆಂಬರ್ 13 ರಂದು ಹುಬ್ಬಳ್ಳಿಯ ತಾಲ್ಲೂಕು ಪಂಚಾಯತಿ ಕಾರ್ಯಾಲಯ, ಮಿನಿ ವಿಧಾನಸೌಧದಲ್ಲಿ ಹಾಗೂ ನವಲಗುಂದ ತಹಶೀಲ್ದಾರರ ಕಾರ್ಯಾಲಯದಲ್ಲಿ ಬೆಳಿಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ಅಹವಾಲು ಸ್ವೀಕರಿಸಲಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರವರು ಜಿಲ್ಲೆಯ ಸಾರ್ವಜನಿಕರಿಂದ ದೂರು ಸ್ವೀಕಾರ ಮಾಡುವವರಿದ್ದು, ಯಾವುದೇ ಸರಕಾರಿ ಅಧಿಕಾರಿ, ನೌಕರರು ಸರ್ಕಾರಿ ಸೇವೆ ಒದಗಿಸುವವಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ, ಅನಾವಶ್ಯಕ ವಿಳಂಬ ಮಾಡುತ್ತಿದ್ದಲ್ಲಿ, ಯಾವುದಾದರು ಸರ್ಕಾರಿ ಭೂಮಿಗಳ ಒತ್ತುವರಿಯಾಗಿದ್ದಲ್ಲಿ, ಕಾಮಗಾರಿಗಳಲ್ಲಿ ಅಕ್ರಮ ಅಥವಾ ಕಳಪೆ ಕಾರ್ಯ ನಡೆದಿದ್ದಲ್ಲಿ, ಆ ಬಗ್ಗೆ ದೂರು ನೀಡಬಹುದಾಗಿದೆ.
ಈ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.



