ಬೆಂಗಳೂರು: ನಿಯೋಜನೆ ಮೇಲೆ ಕೂಡ್ಲಿಗಿ ತಾಲೂಕು ಕಚೇರಿಯಿಂದ ಇತರೆಡೆ ತೆರಳಿರುವ ಅಧಿಕಾರಿಗಳನ್ನು ಶೀಘ್ರ ಹಿಂದಕ್ಕೆ ಕರೆಸಿಕೊಳ್ಳಿ ಎಂದು ಗುಲಬುರ್ಗಾ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೈ ಅವರಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಪತ್ರ ಬರೆದು ಆದೇಶಿಸಿದ್ದಾರೆ.
ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ತಮ್ಮ ಕೆಲಸಕ್ಕಾಗಿ ಕಚೇರಿಯಲ್ಲಿ ಜನಸಂದಣಿಯೇ ನೆರೆದಿತ್ತು. ಆದರೆ, ಜನರ ಕೆಲಸ ಮಾಡಿಕೊಡಬೇಕಾಗಿದ್ದ, ಮೊದಲ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ನಿಯೋಜನೆ ಮೇಲೆ ಇತರೆಡೆ ತೆರಳಿದ್ದರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಅಲಭ್ಯತೆಯಿಂದಾಗಿ ಜನಸಾಮಾನ್ಯರು ನಿಗದಿತ ಸಮಯದೊಳಗೆ ತಮ್ಮ ಕೆಲಸಗಳಾಗದೆ ಪರಿತಪಿಸುವಂತಾಗಿತ್ತು. ಅಲ್ಲದೆ, ಕಚೇರಿಯಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಅಧಿಕಾರಿಗಳು ಇಲ್ಲದಿರುವ ಕಾರಣ ತಾವು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಅವರು ಸಚಿವರ ಬಳಿ ದೂರಿದ್ದರು. ಈ ಬಗ್ಗೆ ತಹಶೀಲ್ದಾರರಾದ ಎಂ. ರೇಣುಕಾ ಅವರ ಬಳಿ ಸಚಿವ ಕೃಷ್ಣ ಬೈರೇಗೌಡ ಅವರು ವಿಚಾರಿಸಿದಾಗ ಸಮರ್ಪಕ ಉತ್ತರ ದೊರಕಿರಲಿಲ್ಲ.
ಹೀಗಾಗಿ ಇದೀಗ ಕಂದಾಯ ಇಲಾಖೆ ಗುಲಬುರ್ಗಾ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೈ ಅವರಿಗೆ ಪತ್ರ ಬರೆದಿರುವ ಕೃಷ್ಣ ಬೈರೇಗೌಡ, ಕೂಡ್ಲಿಗಿ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ. ಇಲ್ಲಿ ಬಹುಪಾಲು ಜನರು ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರು. ಸಾಮಾಜಿಕವಾಗಿ ದುರ್ಬಲ ವರ್ಗದವರ ಸಂಖ್ಯೆಯೂ ಈ ಭಾಗದಲ್ಲಿ ಹೆಚ್ಚು. ಇಂತಹ ತಾಲೂಕಿನಲ್ಲಿ ಜನರ ಕೆಲಸಗಳನ್ನು ಸಕಾಲದಲ್ಲಿ ನಡೆಸಿಕೊಡಬೇಕು. ಆದರೆ, ಇಲ್ಲಿಂದಲೇ 20 ಜನರನ್ನು ಬೇರೆಡೆ ನಿಯೋಜನೆಗೊಳಿಸಿರುವುದು ವಿಷಾಧನೀಯ. ಹೀಗಾಗಿ ತಾಲೂಕು ಮತ್ತು ಜಿಲ್ಲೆಯಿಂದ ಹೊರಗೆ ನಿಯೋಜನೆ (ಡೆಪ್ಯೂಟೇಶನ್) ಮೇಲೆ ತೆರಳಿರುವ ಅಧಿಕಾರಿಗಳನ್ನು ಕೂಡ್ಲಿಗಿ ತಾಲೂಕಿಗೆ ಮರಳಿ ಕಳುಹಿಸಿ ಎಂದು ಆದೇಶಿಸಿದ್ದಾರೆ.
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಕಂದಾಯ ಇಲಾಖೆಯ ತಾಲ್ಲೂಕು ಕಛೇರಿಗಳಿಗೆ ಇತ್ತೀಚೆಗೆ ಭೇಟಿ ನೀಡಿರುತ್ತೇನೆ. ಕೂಡ್ಲಿಗಿ ತಾಲ್ಲೂಕು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಬಡವರು ಇದ್ದು, ಇವರುಗಳು ಸರ್ಕಾರಿ ಸೇವೆಗಳು ಮತ್ತು ಕಛೇರಿಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಮತ್ತು ಕೆಲಸದ ಹೊರೆ ಇರುತ್ತದೆ.
ಇಂತಹ ಪರಿಸ್ಥಿತಿ ಹೊರತಾಗಿಯೂ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ಸುಮಾರು 20 ಅಧಿಕಾರಿ/ಸಿಬ್ಬಂದಿಗಳು ಕೂಡ್ಲಿಗಿ ತಾಲ್ಲೂಕುನಲ್ಲಿ ಲೀನ್ ಇದ್ದರೂ ಸಹ ನಿಯೋಜನೆ ಮೇರೆಗೆ (ಓಓಡಿ) ತಾಲ್ಲೂಕು ಬಿಟ್ಟು ಇತರೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ವಿಷಾದನೀಯ ಸಂಗತಿಯಾಗಿರುತ್ತದೆ.
ಇದರಿಂದಾಗಿ ಜನ ಸಾಮಾನ್ಯರ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಮತ್ತು ಜನ ಸಾಮಾನ್ಯರುಗಳು ತೊಂದರೆ ಅನುಭವಿಸುವಂತಾಗಿದೆ ಹಾಗೂ ಸಣ್ಣಪುಟ್ಟ ಕೆಲಸಗಳಿಗೆ ಜನರು ಪದೇ ಪದೇ ತಾಲ್ಲೂಕು ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಪರಿಣಾಮವಾಗಿ ಉಳಿದ ಸಿಬ್ಬಂದಿಯ ಮೇಲೆ ಕೆಲಸದ ಹೊರೆ ಮತ್ತು ಒತ್ತಡ ಹೆಚ್ಚಾಗಿರುತ್ತದೆ.
ಆದ್ದರಿಂದ, ಕೂಡ್ಲಿಗಿ ತಾಲ್ಲೂಕಿನಿಂದ ಬೇರೆಡೆಗೆ ನಿಯೋಜನೆ ಮೇರೆಗೆ ತೆರಳಿರುವ ಎಲ್ಲ ನೌಕರರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮೂಲಸ್ಥಾನಕ್ಕೆ ಹಿಂದಿರುಗಿಸಲು ಅವಶ್ಯಕ ಕ್ರಮವಹಿಸುವಂತೆ ಸೂಚಿಸಿದೆ. ಈ ಸಂದರ್ಭದಲ್ಲಿ ಹೊಸದಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲಾ ಕಚೇರಿಗೆ ನಿಯೋಜನೆಗೊಂಡ ಅತೀ ಅವಶ್ಯಕ ಸಿಬ್ಬಂದಿಗೆ ತಾತ್ಕಾಲಿಕ ವಿನಾಯಿತಿ ನೀಡಬಹುದು.



