ಒಂದರ್ಧ ಗಂಟೆಯ ವಿಡಂಬನೆಯಂತಹ ಪ್ರಕಾರದಲ್ಲಿ ಮುಗಿದುಹೋಗಬಹುದಾದ ಪ್ರಸಂಗವೊಂದನ್ನು ಎಲ್ಲಿಯೂ ಬೋರ್ ಆಗದಂತೆ ಹಿಗ್ಗಿಸಿ ಸಿನಿಮಾದ ಮೂಲಕ ನಿರೂಪಿಸುವುದು ನಿರ್ದೇಶಕನ ತಾಕತ್ತು ಎಂಬ ಮಾತನ್ನು ಒಪ್ಪುವವರು ರವಿಕೆಪ್ರಸಂಗ ಸಿನಿಮಾ ನೋಡಬಹುದು.
ಕುಟುಂಬದಿಂದ, ಕುಟುಂಬಕ್ಕಾಗಿ ಕುಟುಂಬಕ್ಕೋಸ್ಕರ ಎಂಬಂತೆ ಕಟ್ಟುಬಿದ್ದು ಇಡೀ ಸಿನಿಮಾದ ಕತೆಯನ್ನು ಲಘು ಹಾಸ್ಯದ ಮೂಲಕವೇ ರೂಪಿಸಲು ಅದನ್ನೇ ಉಜ್ಜಿ ಉಜ್ಜಿ ಹೊಳೆಯುವಂತೆ ಸುಮಾರು ಎರಡೂ ಮುಕ್ಕಾಲು ಗಂಟೆಗಳ ಕಾಲ ತೆರೆಯ ಮೇಲೆ ನಿರೂಪಿಸಿರುವ ನಿರ್ದೇಶಕರ ಜಾಣತನಕ್ಕೆ ಸೈ ಎನ್ನಲೇಬೇಕು.
ಎಲ್ಲ ಪಾತ್ರಗಳ ಪ್ರವೇಶ ಮತ್ತು ನಿರ್ಗಮನಗಳನ್ನು ಬಹಳ ಗಟ್ಟಿಯಾಗಿ ಕಟ್ಟಿಕೊಟ್ಟಿರುವ ಹಾಗೂ ಪ್ರತಿ ಫ್ರೇಮನ್ನೂ ಅನನ್ಯಗೊಳಿಸುವ ಮೂಲಕ ಇದು ನಿರ್ದೇಶಕರೊಬ್ಬರ ಮೊದಲ ದೊಡ್ಡ ಮಟ್ಟದ ಪೂರ್ಣ ಪ್ರಮಾಣದ ಚಿತ್ರ ಎಂಬುದು ಗೊತ್ತಾಗದಂತೆ ನಿರೂಪಿಸುವುದರ ಹಿಂದೆ ಇರುವ ಶ್ರದ್ಧೆಯ ಕಾರಣದಿಂದ ರವಿಕೆಪ್ರಸಂಗ ಸಿನಿಮಾ ಇಷ್ಟವಾಗುತ್ತದೆ.
ಯಾವುದೇ ಸಂದರ್ಭದಲ್ಲಿಯಾದರೂ ಬಿದ್ದು ಹೋಗಬಹುದಾದಷ್ಟು ತೆಳುವಾದ ಹಾಸ್ಯ ಪ್ರಸಂಗಗಳನ್ನು ನಯವಾಗಿ ಎಚ್ಚರಿಕೆಯಿಂದ ಜೋಡಿಸಿ ದಡ ಸೇರಿಸುವ ಮೂಲಕ ಒಂದು ಪರಿಪೂರ್ಣ ಕೌಟುಂಬಿಕ ಚಿತ್ರವನ್ನಾಗಿಸಿದ್ದಾರೆ. ಈ ಚಿತ್ರವನ್ನು ಬ್ರಿಜ್ ಸಿನಿಮಾ ಎಂದು ಹೇಳಲು ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.
ಚಿತ್ರದ ಪ್ರತೀ ಚೌಕಟ್ಟು ಹಾಗೂ ಘಟನೆಗಳಿಗೂ ಕಾರ್ಯಕಾರಣ ಸಂಬಂಧವನ್ನು ಬಹಳ ಸಹಜ ಮತ್ತು ಸಾವಯವ ರೀತಿಯಲ್ಲಿ ಹೆಣೆಯಲಾಗಿದೆ. ಸೂಕ್ತ ತಾರ್ಕಿಕ ಅಂಶಗಳೂ ರುಚಿಕರವಾದ ಸಾಂಬಾರಿನೊಳಗಿನ ಉಪ್ಪಿನಂತೆ ಪರಸ್ಪರ ಸಂಬಂಧ ಹೊಂದಿವೆ. ಅಲ್ಲಿ ಕೌಟುಂಬಿಕ ತಾಕಲಾಟಗಳು, ಸಾಮಾಜಿಕ ಮತ್ತು ವೈಯಕ್ತಿಕ ಒತ್ತಡಗಳು, ಘಟನೆಯೊಂದಕ್ಕೆ ಸಮಾಜ ಪ್ರತಿಕ್ರಿಯಿಸುವ ರೀತಿ, ಮಾಧ್ಯಮ ಮತ್ತು ಕಾನೂನಿನ ದೃಷ್ಟಿಕೋನ, ಸೌಹಾರ್ದ ಎಲ್ಲವನ್ನೂ ಹದವಾಗಿ ಬೆರೆಸಿ ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
ಟೈಲರ್ ಮತ್ತು ಅವನ ಗ್ರಾಹಕಳಾದ ನಾಯಕಿಯ ನಡುವೆ ಉಂಟಾಗುವ ಸಂವಹನದ ಅಡಚಣೆಯಿಂದ ಹುಟ್ಟಿಕೊಳ್ಳುವ ಮತ್ತು ಇತರ ಅವಾಂತರಗಳಿಗೆ ಕಾರಣವಾಗುವ ಘಟನಾವಳಿಗಳನ್ನು ಸಹಜ ಮತ್ತು ಸರಾಗವಾದ ನೆಲೆಗಳಲ್ಲಿ ನಿರೂಪಿಸಲಾಗಿದೆ.
ಸ್ಥೂಲ ದೇಹಿ ನಾಯಕಿಯ ಮದುವೆ ಆಗಬೇಕೆಂಬ ಕಾರಣದಿಂದ ಆಕೆಯ ಪೋಷಕರು ತಹತಹಿಸುವ ಚಿತ್ರಣದಿಂದ ಆರಂಭವಾಗುವ ಚಿತ್ರವು ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ನಾಯಕಿಯೇ ಬಹುತೇಕ ಪ್ರತೀ ಫ್ರೇಮಿನಲ್ಲೂ ವಿಜೃಂಭಿಸಿದ್ದರೂ ಇತರ ಎಲ್ಲರ ಪಾತ್ರಗಳೂ ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಯಾವುದೇ ಅತಿರೇಕಗಳಿಲ್ಲದ ಮನೆಮಂದಿಯೆಲ್ಲಾ ನೋಡಬಹುದಾದ ಚಿತ್ರ ಎಂದು ಧಾರಾಳವಾಗಿ ಹೇಳಬಹುದು. ಈ ಕಾರಣದಿಂದ ಇಡೀ ಚಿತ್ರತಂಡ ಮತ್ತು ಅದರ ಮುಖ್ಯ ನಾವಿಕ Santhosh Kodenkeri ಅಭಿನಂದನಾರ್ಹರು.
#ವಿಸೂ: ಗೆಳೆಯ, ನಟ Hanumanth Rao Koujalgi ಅವರ ಒತ್ತಾಸೆಯ ಕಾರಣದಿಂದ ಎರಡು ಬಾರಿ ಸಿನಿಮಾ ನೋಡಿ ನಾನೊಬ್ಬ ಸಿನಿಮಾ ವಿಮರ್ಶಕನಲ್ಲ ಎಂಬ ಎಚ್ಚರಿಕೆಯಿಂದ ವಿನಯದಿಂದಲೇ ಇಷ್ಟು ಹೇಳಿದ್ದೇನೆ.
– ಕೆ.ಕರಿಸ್ವಾಮಿ, ಕವಿಗಳು




