ಸವದತ್ತಿ ಕ್ಷೇತ್ರದ ರತ್ನ ಮಾಮನಿ ನಾಮಪತ್ರವನ್ನು ಚುನಾವಣಾ ಆಯೋಗ ಕೂಡಲೇ ತಿರಸ್ಕಾರ ಮಾಡಬೇಕು

3 years ago

ಬೆಳಗಾವಿ: ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನ ಮಾಮನಿ ಅವರ ನಾಮಪತ್ರವನ್ನು ಚುನಾವಣಾ ಆಯೋಗ ಕೂಡಲೇ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ತಪ್ಪಿದಲ್ಲಿ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಬಿಜೆಪಿ ಅಭ್ಯರ್ಥಿ ರತ್ನ ಮಾಮನಿ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಸಮಯ ಮತ್ತು ದಿನಾಂಕದ ವ್ಯತ್ಯಾಸವಾಗಿದೆ. ಇದನ್ನು ಆಯೋಗದ ಗಮನಕ್ಕೆ ತರಲಾಗಿದೆ ಈ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ರತ್ನ ಮಾಮನಿ ಅವರು ವಿಕಾಸ್ ಸಹಕಾರ ಸಂಘದಿಂದ ಸ್ಟಾಂಪ್ ಪೇಪರ್ ಅನ್ನು ಏಪ್ರಿಲ್ 20ರಂದು ರಾತ್ರಿ 7ಗಂಟೆಗೆ 28 ನಿಮಿಷಕ್ಕೆ ಖರೀದಿ ಮಾಡಿದ್ದಾರೆ.ಅನಂತರ ಅದನ್ನು ಟೈಪ್ ಮಾಡಿ, ನೋಟರಿ ಮಾಡಿಸಲು ಕನಿಷ್ಠ ಒಂದುವರೆ ಗಂಟೆಯಾದರೂ ಬೇಕು.ಆ ಬಳಿಕವೇ ಸಲ್ಲಿಸಲು ಸಾಧ್ಯ. ಆದರೆ ಚುನಾವಣೆ ಆಯೋಗದ ವೆಬ್‍ಸೈಟ್‍ನಲ್ಲಿ ಬಿಜೆಪಿ ಅಭ್ಯರ್ಥಿ ಏಪ್ರಿಲ್ 19ರಂದು ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಸಹಕಾರ ಸಂಘಗಳಲ್ಲಿ ಸಂಜೆ 5 ಗಂಟೆ ಬಳಿಕ ಸ್ಟಾಂಪ್ ಪೇಪರ್ ಮಾರಾಟ ಮಾಡುವಂತ್ತಿಲ್ಲ. ಹಾಗೇ ನೋಡಿದರೆ ಸ್ಟಾಂಪ್ ಪೇಪರ್ ಖರೀದಿಯೇ ನಕಲಿಯಾಗಿದ್ದು ಹಗರಣವಾಗಿದೆ. 7.38 ಗಂಟೆಗೆ ಖರೀದಿಸಿದ ಸ್ಟಾಂಪ್ ಪೇಪರ್ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗ ಅಂಗೀಕರಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.

ರತ್ನ ಮಾಮನಿ ಅವರು ನಾಮಪತ್ರ ಸಲ್ಲಿಸಿರುವುದು ಏ.18ರಂದು, ಪ್ರಮಾಣ ಪತ್ರ ವೆಬ್‍ಸೈಟ್‍ಗೆ ಅಪ್‍ಲೋಡ್ ಆಗಿದ್ದ ಏ.19ರಂದು, ಸ್ಟಾಂಪ್‍ಪೇಪರ್ ಖರೀದಿಸಿದ್ದು ಏ.20ರಂದು ಇದೇಲ್ಲಾ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿಯ ನಾಮಪತ್ರ ರಕ್ಷಣೆ ಮಾಡಲು ಪ್ರಭಾವ ಬೀರಿದ್ದು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು

ಚುನಾವಣಾ ಆಯೋಗ ಯಾವುದೇ ಒತ್ತಡಕ್ಕೆ ಮಣಿಯದೇ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲಿದೆ ಎಂದು ನಾವು ಈಗಲೂ ನಂಬುತ್ತೇವೆ. ಜನರ ನಂಬಿಕೆಯೂ ಅದೇ ಆಗಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಆಯೋಗ ಕೆಲಸ ಮಾಡಬೇಕು. ಯಾವ ಕಾರಣಕ್ಕೆ ಸವದತ್ತಿ ಕ್ಷೇತ್ರದ ನಾಮಪತ್ರವನ್ನು ಅಂಗೀಕಾರ ಮಾಡಲಾಗಿದೆ ಎಂದು ಆಯೋಗ ಸಾರ್ವಜನಿಕವಾಗಿ ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದರು.

ನಾಮಪತ್ರ ಸಲ್ಲಿಸಲು 20ರಂದು 3 ಗಂಟೆ ಕೊನೆಯ ಗಡುವಾಗಿತ್ತು. ಅಷ್ಟರಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಸಾಧ್ಯವಿಲ್ಲ ಎಂಬುದು ಸ್ಟಾಂಪ್ ಪೇಪರ್ ಖರೀದಿಯ ಸಮಯ ಸ್ಪಷ್ಟ ಪಡಿಸುತ್ತಿದೆ. ಸಮಯ ಮೀರಿದ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದು ಹೇಗೆ ಎಂಬ ಬಗ್ಗೆ ಆಯೋಗ ವಿವರಣೆ ನೀಡಬೇಕಿದೆ ಎಂದು ಆಗ್ರಹಿಸಿದರು.

ಈಗಲೂ ಕಾಲಮಿಂಚಿಲ್ಲ ಆಯೋಗ ನಾಮಪತ್ರ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. ಆಯೋಗ ನಿಷ್ಟಕ್ಷಪಾತವಾಗಿ ನಡೆದುಕೊಳ್ಳದಿದ್ದರೆ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಲಿದೆ. ಈಗಲೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕು ಎಂದೇನೂ ಇಲ್ಲ. ಚುನಾವಣೆ ಮುಗಿದ ಬಳಿಕವೂ ನಾವು ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುತ್ತೇವೆ. ಆಯೋಗ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂದು ಹೈಕೋರ್ಟ್‌ ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದರು.

Leave a Reply