ಬೆಂಗಳೂರು: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ಗ್ರಹಚಾರ ಸರಿಯಿಲ್ಲ ಎಂಬಂತೆ ಕಾಣುತ್ತಿದೆ. ತಮ್ಮದೇ ಪಕ್ಷದ ಕಾರ್ಯಕರ್ತೆ ಅವರ ವಿರುದ್ಧ ಕಿರುಕುಳ ಆರೋಪ ಪ್ರಕರಣ ದಾಖಲಿಸಿರುವ ಬೆನ್ನಲ್ಲೇ ಇದೀಗ ಇವರ ವಿರುದ್ಧ ಚುನಾವಣಾ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೋರಿಸಲಾಗಿದೆ.ಈ ಹಿನ್ನೆಲೆ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶ್ರೀನಿವಾಸ್ ಅವರು ಚುನಾವಣೆಯ ಕಾರ್ಯತಂತ್ರ ಕುರಿತಂತೆ ಪಂಚತಾರಾ ಹೋಟೆಲ್ ಒಂದರಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದರು. ಸಭೆ ನಡೆಸುತ್ತಿದ್ದರುವ ಸ್ಥಳದಲ್ಲಿ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಸಭೆ ನಡೆಸುತಿದ್ದ ಸ್ಥಳಕ್ಕೆ ಏಕಾಏಕಿ ಧಾವಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಸಭೆಗೆ ಅಡ್ಡಿಪಡಿಸಿದ್ದಾರೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಶ್ರೀನಿವಾಸ್ ಅಧಿಕಾರಿಗಳ ಜೊತೆ ಕೆಲಕಾಲ ವಾಗ್ವಾದ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಬಿ.ವಿ ಶ್ರೀನಿವಾಸ್ ಅವರು ಚುನಾವಣಾ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ದಾಳಿ ವೇಳೆ ಸಹಕರಿಸದೇ ಎಸ್ಟಿಎಫ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ
ಕಾಂಗ್ರೆಸ್ ಪಕ್ಷದ ಯುವ ಘಟಕದ ರಾಷ್ಟ್ರಾಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ನಿವಾಸವನ್ನು ಹುಡುಕಿಕೊಂಡು ನಿನ್ನೆಯಷ್ಟೇ ಅಸ್ಸಾಂ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು. ಶ್ರೀನಿವಾಸ್ ಪೊಲೀಸರ ಕೈಗೆ ಸಿಗದ ಕಾರಣ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಇದರ ನಡುವೆ ಈಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶ್ರೀನಿವಾಸ್ ಕಿರುಕುಳ ನೀಡಿದ್ದಾರೆ ಎಂದು ಅಸ್ಸಾಂ ಯುವ ಕಾಂಗ್ರೆಸ್ ಅಧ್ಯಕ್ಷೆ ಅಂಕಿತಾ ಆರೋಪ ಮಾಡಿದ್ದು ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಅವರು, ಶ್ರೀನಿವಾಸ್ ಬಿ.ವಿ ಅವರು ಸತತವಾಗಿ ನನಗೆ ಕಿರುಕುಳ ನೀಡಿದ್ದಾರೆ. ಲಿಂಗ ತಾರತಮ್ಯ ಮಾಡಿದ್ದಾರೆ. ಹೆಣ್ಣು ಎಂಬ ಕಾರಣಕ್ಕೆ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಅಂಕಿತಾ ದೂರಿದ್ದಾರೆ. ನೀವು ಓಡ್ಕಾ ಕುಡಿಯುತ್ತೀರಾ ಎಂದು ವ್ಯಂಗ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಈ ಹಿನ್ನಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಗುವಾಹಟಿಯ ಐಪಿಎಸ್ ಅಧಿಕಾರಿ ಪ್ರತೀಕ್ ಬೆಂಗಳೂರಿಗೆ ಆಗಮಿಸಿದ್ದಾರೆ. ಬಸವೇಶ್ವರನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ವಿಚಾರಣೆಗೆ ಬರುವಂತೆ ಸೂಚಿಸಿ ನೋಟಿಸ್ ಅಂಟಿಸಿದ್ದಾರೆ.



