ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ‍್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಅನರ್ಹರಿಗೆ ಪಿಎಚ್.ಡಿ ಸೀಟು ಹಂಚಲಾಗಿದೆ ಎಂದು ಕವಿ ಮತ್ತು ಶಿಕ್ಷಕ ವೀರಣ್ಣ ಮಡಿವಾಳರ ಆರೋಪಿಸಿದ್ದಾರೆ. ವಿವಿ ಕರೆದ ಪಿಎಚ್.ಡಿ ಅಡ್ಮಿಷನ್ ಗೆ ಅರ್ಜಿ ಹಾಕಿ ಸೀಟು ಪಡೆಯುವಲ್ಲಿ ವಿಫಲವಾಗಿರುವ ಅವರು ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರ್ಹತೆ ಇದ್ದಾಗಿಯೂ ಮತ್ತೊಂದು ವಿಶ್ವವಿದ್ಯಾಲಯ ನನಗೆ ಪಿಹೆಚ್‌ಡಿ ಪ್ರವೇಶ ನೀಡದೆ ವಂಚಿಸಿತು…. ಈಗ್ಗೆ ಕೆಲವು ದಿನಗಳಿಂದ ತುಂಬಾ ನೊಂದಿದ್ದೇನೆ. ಈ ನೋವು ಒಂದು ಹಂತಕ್ಕೆ ನನ್ನದೂ ಹೌದು, ನನ್ನಂಥ ಅನೇಕ ಅಮಾಯಕರದ್ದೂ ಹೌದು ಎಂದು ಅವರು ಹೇಳಿದ್ದಾರೆ.

ನಾನು ಕೆಸೆಟ್ ಪಾಸ್ ಮಾಡಿದ್ದೇನೆ. ಹಲವು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದೇನೆ. ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ಪದ್ಯಗಳು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ, ನನ್ನ ಪದ್ಯಗಳ ಬಗ್ಗೆಯೂ ಅಲ್ಲಲ್ಲಿ ಅಧ್ಯಯನಗಳಲ್ಲಿ ದಾಖಲಾಗಿವೆ. ಇನ್ನೂ ಏನೆಲ್ಲ ಅರ್ಹತೆಗಳಿದ್ದಾಗಿಯೂ ರಾಣಿ ಚನ್ನಮ್ಮ ವಿವಿ ನನಗೆ ಪಿಹೆಚ್‌ಡಿ ಗೆ ಪ್ರವೇಶ ನೀಡದೆ ನಿರಾಕರಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿರುವ ಪೋಸ್ಟ್ ನಲ್ಲಿ “ಇಲ್ಲಿ ಎರಡು ಲಿಸ್ಟ್ ಗಳಿವೆ. ಒಂದರಲ್ಲಿ ಈಗ ಪ್ರವೇಶಕ್ಕೆ ಅರ್ಹರಾದವರ ಪಟ್ಟಿ ಮತ್ತೊಂದು ನನ್ನ ಹೆಸರಿರುವ ಮೆರಿಟ್ ಪಟ್ಟಿ. ಸಂದರ್ಶನದಲ್ಲೂ ಸಹ ಎಲ್ಲರೂ ನನ್ನ ತಿಳುವಳಿಕೆ ಆಸಕ್ತಿಯನ್ನ ಮೆಚ್ಚಿ ಹೊಗಳಿದರು. ಈ ಲಿಸ್ಟ್ ಬಿಟ್ಟ ನಂತರವೂ ಹೋಗಿ ಸಂದರ್ಶನ ಮಾಡಿದವರನ್ನ ಭೇಟಿ ಮಾಡಿದಾಗ ಅವರೂ ನಿಮಗೆ ಸಿಗಬೇಕಿತ್ತು ಅಂತ ಹೇಳಿದರೆ ಹೊರತು ನನಗೆ ಯಾಕೆ ಸೀಟ್ ಸಿಗಲಿಲ್ಲ ಎಂಬುದಕ್ಕೆ ಕಾರಣ ಹೇಳಲಿಲ್ಲ” ಎಂದು ಹೇಳಿದ್ದಾರೆ.
ಈ ಕುರಿತು ಆಯ್ಕೆ ಸಮಿತಿಯ ಚೇರ್ಮನ್ನರನ್ನ ಕೇಳಿದರೆ ನಾನು ನನ್ನ ಹಿರಿಯ ಅಧಿಕಾರಿಗಳು ಹೇಳಿದಂತೆ ಆಯ್ಕೆ ಮಾಡಿದ್ದೇನೆ ಎನ್ನುತ್ತಾರೆ. ಆಯ್ಕೆಯ ನಡಾವಳಿಗಳ ಪತ್ರ ಕೊಡಿ ಅಂದರೆ ಕೊಡುವುದಕ್ಕೆ ತಯಾರಿಲ್ಲ. ವೆಬ್ ನಲ್ಲಿದೆ ತಗೊಳ್ಳಿ ಅಂತಾರೆ. ವೆಬ್ ನಲ್ಲಿ ಹುಡುಕಿದರೆ 2018ರ ನಡಾವಳಿಗಳಿವೆ ಎಂದಿದ್ದಾರೆ.
ಈ ಲಿಸ್ಟ್ ಗಮನಿಸಿ. ಈಗ ಆಯ್ಕೆಯಾಗಿರುವವರೆಲ್ಲರೂ ನನಗಿಂತ ಕಡಿಮೆ ಮೆರಿಟ್ ನವರು. ಈ ಕುರಿತು ನನ್ನನ್ಯಾಕೆ ಆಯ್ಕೆ ಮಾಡಲಿಲ್ಲ ಎಂಬುದಕ್ಕೆ ಕಾರಣ ಕೊಡಿ ಅಂತ ಪತ್ರ ಕೊಡಲು ಹೋದರೆ ಇಂಗ್ಲಿಷ್ ಡಿಪಾರ್ಟ್ಮೆಂಟ್ ನವರು ತೆಗೆದುಕೊಳ್ಳಲಿಲ್ಲ. ರಿಜಿಸ್ಟ್ರಾರ್ ಗೆ ಕೊಡಿ ಅಂದರು. ರಿಜಿಸ್ಟ್ರಾರ್ ರನ್ನ ಭೇಟಿಯಾದ ಕಥೆ ಈಗಾಗಲೇ ಮೊನ್ನೆ ಬರೆದಿರುವೆ. ಕನಿಷ್ಠ ನನ್ನ ಅಳಲನ್ನೂ ಕೇಳಿಸಿಕೊಳ್ಳದೆ ಅವರು ನನಗೆ ಭೇಟಿಗೆ ಅವಕಾಶವನ್ನೂ ನೀಡಲಿಲ್ಲ. ನಂತರ ಇನ್ವರ್ಡ್ ನಲ್ಲಿ ನನ್ನ ಪತ್ರ ಕೊಟ್ಟೆ. ಕುಲಪತಿಗಳಿಗೂ ಪತ್ರ ಕೊಟ್ಟು ಬಂದೆ. ಯಾರಿಂದಲೂ ಉತ್ತರ ಬರಲಿಲ್ಲ ಎಂದಿದ್ದಾರೆ.
ನನ್ನ ಪರವಾಗಿ ಸಿಂಡಿಕೇಟ್ ಸದಸ್ಯರೊಬ್ಬರು ಚೇರ್ಮನ್ನರನ್ನ ಕೇಳಿದರು. ಅದಕ್ಕವರು “ನಮಗೆ ಈ ಸಾರಿ ನೆಟ್ ಆದವರನ್ನ ಮಾತ್ರ ತೆಗೆದುಕೊಳ್ಳಲು ಆದೇಶವಿದೆ. ವೀರಣ್ಣ ಚನ್ನಾಗಿ ಸಂದರ್ಶನ ಮಾಡಿದ್ದ. ಆದರೆ ಆತನಿಗೆ ನಿಯಮಗಳ ಪ್ರಕಾರ ಸೀಟು ಕೊಡಲು ಬರುವುದಿಲ್ಲ” ಎಂದರಂತೆ. ವಿಶ್ವವಿದ್ಯಾಲಯ ಇರುವುದು ಕರ್ನಾಟಕದಲ್ಲಿ, ನಾನು ಪಾಸಾಗಿರುವುದು ಕೆಸೆಟ್. ಹೀಗಿದ್ದಾಗ್ಯೂ ಕೆಸೆಟ್ ಗೆ ಮಾನ್ಯತೆ ಇಲ್ಲ ಎಂದರೆ ಇವರಿಗೆ ಏನು ಹೇಳುವುದು?! ಎಂದು ಪ್ರಶ್ನಿಸಿದ್ದಾರೆ.
ವಿಶ್ವವಿದ್ಯಾಲಯಗಳು ಅಲ್ಲಿರುವ ಅನೇಕರ ಸರ್ವಾಧಿಕಾರಿ ಕೇಂದ್ರಗಳಾಗಿವೆ. ಅಲ್ಲಿ ನಡೆಯುವುದು ಅನೇಕ ಸಂದರ್ಭಗಳಲ್ಲಿ ಅಂಧಾ ದರ್ಬಾರ್. ನಮ್ಮಂಥವರ ದನಿ ಅನಾಹತ ಆರ್ತನಾದವಾಗಿ ಕರಗಿ ಹೋಗುತ್ತದೆ ಅಷ್ಟೇ. ಆಯ್ಕೆ ಲಿಸ್ಟ್ ಬಿಟ್ಟ ತಕ್ಷಣ ನನಗೆ ಅನ್ಯಾಯವಾಗಿದೆ ಅಂತ ಎರಡು ಸಾವಿರ ರೂಪಾಯಿ ಕೊಟ್ಟು ಕಾರ್ ಬಾಡಿಗೆ ಮಾಡಿಕೊಂಡು ವಿವಿಗೆ ಹೋದರೆ ನನ್ನ ಮನವಿಯನ್ನೂ ತೆಗಡದುಕೊಳ್ಳದೆ ಹಿಂದಕ್ಕೆ ಕಳಿಸಿದರು ಎಂದಿದ್ದಾರೆ.
ನನಗಿರುವ ಪರಿಸ್ಥಿತಿಯಲ್ಲಿ ಇವರೊಡನೆ ಹೋರಾಡಲು ಶಕ್ತಿ ಚೈತನ್ಯ ಸಾಲದು. ರಾಣಿ ಚನ್ನಮ್ಮ ವಿವಿಯ ಇಂಗ್ಲಿಷ್ ವಿಭಾಗದ ಚೇರ್ಮನ್ ಮತ್ತು ಆಯ್ಕೆ ಸಮಿತಿಯ ಸದಸ್ಯರೇ ನಾನು ಬದುಕಿರುವವರೆಗೂ ನಿಮ್ಮನ್ನ ಕ್ಷಮಿಸುವುದಿಲ್ಲ. ನಮಸ್ಕಾರ ಎಂದು ಅವರು ವ್ಯಂಗ್ಯವಾಗಿ ಮತ್ತು ಹತಾಷೆಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ವೀರಣ್ಣ ಮಡಿವಾಳರಂತಹ ಕವಿ, ಸಂವೇದನಾಶೀಲ ವ್ಯಕ್ತಿತ್ವದವರಿಗೆ ಉನ್ನತ ಅಧ್ಯಯನಕ್ಕೆ ಅವಕಾಶ ಸಿಗುತ್ತಿಲ್ಲ ಎಂಬುದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಇನ್ನಾದರೂ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳು ಸಂವೇದನಾಶೀಲವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕಿದೆ. ಉನ್ನತ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಸಚಿವರು, ರಾಜ್ಯದ ಎಲ್ಲ ವಿವಿಗಳ ಕುಲಪತಿಗಳು, ಅದರಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ, ಕುಲಾಧಿಪತಿಗಳಾಗಿ ವಿರಾಜಮಾನರಾಗಿರುವ ರಾಜ್ಯಪಾಲರು ಇಂತಹ ಸಮಸ್ಯೆಗಳೆಡೆಗೆ ಗಂಭೀರವಾಗಿ ಗಮನಹರಿಸಬೇಕಿದೆ. ವಿವಿಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ, ಶೋಷಣೆಯ ತಾಣಗಳಾಗಬಾರದು. ಅವುಗಳು ಉನ್ನತ ಬೌದ್ಧಿಕ ಕೇಂದ್ರಗಳಾಗಿ ಬೆಳೆಯಬೇಕು. ಇದಕ್ಕೆ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಬೇಕಲ್ಲವೇ?




