ಸಾವಳಗಿ: ಮನೆಗೆ ಆಧಾರವಾಗಿದ್ದ ಕುಟುಂಬದ ಮುಖ್ಯಸ್ಥರ ಕಿಡ್ನಿ ವೈಪಲ್ಯದಿಂದ ಇಡೀ ಕುಟುಂಬವೇ ಒಪ್ಪೊತ್ತಿನ ಊಟವನ್ನು ತಾಳೆ ಮಾಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಡೀ ಕುಟುಂಬವೇ ಕಣ್ಣಿರಿನಲ್ಲಿ ಕೈ ತೊಳೆಯುವ ಘಟನೆ ಸಾವಳಗಿ ಸಮೀಪದ ಕನ್ನೋಳ್ಳಿ ಗ್ರಾಮದ ನಿವಾಸಿಗಳಾದ ಗುರುಪಾದ ಹರಿಜನ ಉರ್ಪ ಶಿಂಘೆ ಹಾಗೂ ಸುರೇಖಾ ಹರಿಜನ ಎಂಬ ಕಡುಬಡವ ಕುಟುಂಬದಲ್ಲಿ ನಡದಿದೆ.
ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರಕ್ಕೆ ಗುಳೆ ಹೋಗುವ ಈ ಕುಟುಂಬವೂ ಕೋವಿಡ್-19ರ ಕಾಲಘಟ್ಟದಲ್ಲಿ ಎರಡು ಭಾರಿ ಲಾಕಡೌನ್ ಸಂಧರ್ಭದಲ್ಲಿ ಕೆಲಸವಿಲ್ಲದೆ ಪರದಾಡಿ ಮತ್ತಷ್ಟು ತತ್ತರಿಸಿ ಹೋಗಿದೆ. ಕೂಲಿಯನ್ನು ನಂಬಿ ಜೀವನ ಸಾಗಿಸುವ ಈ ಕುಟುಂಬದಲ್ಲಿ ದಂಪತಿ ಸೇರಿ ಎರಡು ಹೆಣ್ಣುಮಕಳಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಇದ್ದ ಒಂದು ಗಂಡು ಮಗು ಕಾಮಾಲೆಯಿಂದ ತೀರಿ ಹೋಗಿದೆ. ಇದರ ನೆನಪು ಮಾಸುವ ಮುನ್ನವೇ ಕುಟುಂಬದ ಜವಾಬ್ದಾರಿ ನೋಡುತ್ತಿದ್ದ ಕುಟುಂಬದ ಮುಖ್ಯಸ್ಥ ಗುರುಪಾದ ಉರ್ಪ ಹರಿಜನ ಅವರಿಗೆ ಒಂದು ತಿಂಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಜಮಖಂಡಿ ತಾಲ್ಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಎರಡು ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ವಿಷಯ ಇಡೀ ಕುಟುಂಬಕ್ಕೆ ಆಘಾತ ತಂದಿದೆ.
ಇವರನ್ನು ಹೆಚ್ಚಿನ ಚಿಕೆತ್ಸೆಗಾಗಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಗೆ ಕಳುಹಿಸಿದಾಗ ಅವರು ನಮ್ಮಲ್ಲಿ ಚಿಕಿತ್ಸೆ ಪಡೆಯುವುದಕ್ಕಿಂತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೋರಿಸಿ ಎನ್ನುತ್ತಿದ್ದಾರೆ. ನಮಗೆ ಬೆಂಗಳೂರು ದೊಡ್ಡ ನಗರ, ಅಲ್ಲಿ ಸರಿಯಾಗಿ ಯಾರೂ ಪರಿಚಯವಿಲ್ಲ ಮತ್ತು ಬೆಂಗಳೂರಿಗೆ ಹೋಗಲು ಹಣವೂ ಇಲ್ಲ ಎಂದು ಕಣ್ಣಿರು ಸುರಿಸಿದರು.
ಇನ್ನೂ 30ರ ಹರೆಯದ ಗುರುಪಾದ ಅವರ ಕುಟುಂಬದ ಹಣಕಾಸಿನ ಪರಿಸ್ಥಿತಿ ನೋಡಿದಾಗ 15 ವರ್ಷಗಳ ಹಿಂದೆ ಗ್ರಾಮ ಪಂಚಾಯತಿ ನೀಡಿದ ಮನೆ ಒಂದೇ ಇದ್ದು ಅದಕ್ಕೆ ಸುಣ್ಣಬಣ್ಣ ಮಾಡಲು ಆಗಿಲ್ಲ. ಇವರಿಗೆ ಯಾವುದೇ ರೀತಿಯ ಹೊಲ ಇಲ್ಲ, ಆಸ್ತಿಯೂ ಇಲ್ಲ, ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುವ ಈ ಕುಟುಂಬಕ್ಕೆ ಸ್ಕಾನಿಂಗ್ ಮಾಡಿಸಲು ಹಣವಿಲ್ಲದ ಪರಿಸ್ಥಿತಿಯಲ್ಲಿ ಪರರದಾಡುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಕಳೆದ 2-3 ತಿಂಗಳಿಂದ ಹೆಂಡತಿ ಕೂಲಿ ಮಾಡುವ ಮೂಲಕ ಮನೆ ನಡೆಸುತ್ತಿದ್ದಾರೆ.
ಹಿರಿಯ ಮಗಳು ಮದುವೆ ವಯಸ್ಸಿಗೆ ಬಂದಿದ್ದು, ಇಂತಹ ಸಂದರ್ಭದಲ್ಲಿ ನನ್ನ ಗಂಡನ ಪರಿಸ್ಥಿತಿ ನೋಡಲಾಗುತ್ತಿಲ್ಲ, ನಮಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ನಮ್ಮ ಹೆಸರಲ್ಲಿ ಆಸ್ತಿಯಿದ್ದರೆ ಅದನ್ನು ಮಾರಿಯಾದರು ನನ್ನ ಗಂಡನನ್ನು ಗುಣಮುಖಗೋಳಿಸುತ್ತಿದ್ದೆ ಆದರೆ ನಮಗೆ ಇರೋದು ಒಂದು ಸೂರು ಇದಕ್ಕೆ ಎಷ್ಟು ಖರ್ಚು ಆಗುತ್ತೆ ಅನ್ನುವದು ಗೊತ್ತಾಗುತ್ತಿಲ್ಲ. ಅನ್ನುತ್ತಾ ಕಣ್ಣೀರು ಸುರಿಸಿದರು.
ಸಂಬಂಧಪಟ್ಟ ಶಾಸಕರು, ಸರ್ಕಾರಿ ಅಧಿಕಾರಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಏನಾದರೂ ಮಾಡಿ ನಮ್ಮ ತಂದೆಯನ್ನು ಉಳಿಸಿ ಕೊಟ್ಟರೇ ಸಾಕು ನಮಗೆ ಯಾವುದೇ ರೀತಿಯ ದುಡ್ಡು ಬೇಕಾಗಿಲ್ಲ ಎಂದು ಪತ್ರಕರ್ತರ ಮುಂದೆ ಮಗಳು ಬಿಕ್ಕಿ ಬಿಕ್ಕಿ ಅತ್ತರು.




