ಮಹಿಳಾ ಐಪಿಎಸ್ ಅಧಿಕಾರಿಯಿಂದ ರಸ್ತೆಯಲ್ಲಿ ರಂಪ ರಾದ್ಧಾಂತ

2 years ago

ಬೆಂಗಳೂರು: ರಸ್ತೆ ಅಪಘಾತಗಳು ನಡೆದ ಸಮಯದಲ್ಲಿ ಅಪಘಾತಕ್ಕೊಳಗಾದ ವಾಹನಗಳ ಸವಾರರು ಜಗಳವಾಡುವುದು ಸಾಮಾನ್ಯ ಸಂಗತಿ. ಇದಕ್ಕೆ ಐಪಿಎಸ್ ಅಧಿಕಾರಿಗಳು ಹೊರತಲ್ಲ.

ತಮ್ಮ ವಾಹನಕ್ಕೆ ದ್ವಿಚಕ್ರ ವಾಹನ ತಗುಲಿತು ಎಂದು ಆಕ್ರೋಶಗೊಂಡ ಮಹಿಳಾ ಐಪಿಎಸ್ ಅಧಿಕಾರಿ ರಸ್ತೆಯಲ್ಲಿ ರಂಪ ರಾದ್ಧಾಂತ ಮಾಡಿ, ಸಮೀಪದ ಪೊಲೀಸ್ ಠಾಣೆಯವರೆಗೆ ಪ್ರಕರಣ ತಲುಪಿದೆ.

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಐಪಿಎಸ್ ಅಧಿಕಾರಿ ಶೋಭಾರಾಣಿ ಪ್ರಯಾಣಿಸುತ್ತಿದ್ದ ಸರ್ಕಾರಿ ವಾಹನಕ್ಕೆ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಬಂದು ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಅಧಿಕಾರಿ ತಕ್ಷಣ ತಮ್ಮವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿ, ಆಗಿರುವ ಡ್ಯಾಮೇಜ್ ಪರಿಶೀಲಿಸಲು ಅಧಿಕಾರಿ ಚಾಲಕನಿಗೆ ಹೇಳಿದರು. ವಾಹನದಿಂದ ಕೆಳಗಿಳಿದ ಚಾಲಕ ಮತ್ತು ದ್ವಿಚಕ್ರ ವಾಹನ ಸವಾರ ಅಪಘಾತ ವಿಷಯವಾಗಿ ರಸ್ತೆಯಲ್ಲಿ ಪರಸ್ಪರ ಆರೋಪ ಮಾಡುತ್ತಾ ಕೂಗಾಡಲು ಪ್ರಾರಂಭಿಸಿದ್ದಾರೆ.

ಈ ವೇಳೆ ವಾಹನದಲ್ಲಿದ್ದ ಅಧಿಕಾರಿ ಕೆಳಗಿಳಿದು ತಮ್ಮ ಚಾಲಕನ ರಕ್ಷಣೆಗೆ ಬಂದಿದ್ದಾರೆ. ಅವರೊಂದಿಗೂ ವಾಗ್ವಾದಕ್ಕಿಳಿದ ಚಾಲಕ ಅಧಿಕಾರಿಯನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕೂಡಲೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆದರೆ ಅವರನ್ನೂ ಸವಾರ ನಿಂದಿಸಿದ್ದಾನೆ. ನಂತರ ಆರೋಪಿಯನ್ನು ಬೈಕ್ ಸಮೇತ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಕರೆತರಲಾಯಿತು.

ಐಪಿಎಸ್ ಅಧಿಕಾರಿ ಶೋಭಾರಾಣಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆತನೂ ದೂರು ಸಲ್ಲಿಸಿದ್ದಾರೆ. ಅನಂತರ ಇಬ್ಬರೂ ಪರಸ್ಪರ ಮಾತನಾಡಿ ವಿವಾದ ಬಗೆಹರಿಸಿಕೊಂಡರು ಎಂದು ವರದಿಯಾಗಿದೆ.

Leave a Reply