ಕುಟುಂಬ ರಾಜಕಾರಣದ ನಡುವೆ ಭಿನ್ನವಾಗಿ ಕಾಣುವ ರಾಮಕೃಷ್ಣ ಹೆಗಡೆಯವರ ವ್ಯಕ್ತಿತ್ವ

2 years ago

1985ರಲ್ಲಿ ಮತ್ತು ನಂತರದ ದಿನಗಳಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು ಮನಸ್ಸು ಮಾಡಿದ್ದರೆ ತಮ್ಮ ಕುಟುಂಬದ ಸದಸ್ಯರನ್ನು ಅಥವಾ ತಮ್ಮ ಮಕ್ಕಳನ್ನು ಶಾಸಕರನ್ನಾಗಿ ಇಲ್ಲವೇ ಲೋಕಸಭಾ ಸದಸ್ಯರನ್ನಾಗಿ ಅಧಿಕಾರಕ್ಕೆ ತರಬಹುದಿತ್ತು. ಪ್ರಯತ್ನಪಟ್ಟಿದ್ದರೆ ಮಂತ್ರಿಗಳನ್ನು ಆಗಿಸಬಹುದಾಗಿತ್ತು. ಆದರೆ ಮೌಲ್ಯಮಾಧಾರಿತ ರಾಜಕಾರಣದ ವಿಚಾರಗಳಿಗೆ ಬದ್ಧರಾಗಿದ್ದ ಇವರು ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಅನುಯಾಯಿಯಾಗಿ ವಂಶಪಾರಂಪರ್ಯ ಆಡಳಿತ ಸಂಸ್ಕೃತಿಯ ವಿರೋಧಿಯಾಗಿದ್ದರು. ಅದರಂತೆಯೇ ತಾವು ಬದುಕಿರುವ ತನಕ ತಮ್ಮ ಕುಟುಂಬದ ಸದಸ್ಯರು ಯಾರು ಸಹ ರಾಜಕಾರಣಕ್ಕೆ ಬರಬಾರದೆಂಬ ಅಪ್ಪಣೆಯನ್ನು ಮಾಡಿದ್ದರು.

ಇವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ಹೆಗಡೆಯವರು ಸಹ ಮನೆಯಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಯಲ್ಲಿ ಎಂದು ಭಾಗಿಯಾಗುತ್ತಿರಲಿಲ್ಲ. ಯಾರನ್ನು ಯಾವುದೇ ಸ್ಥಾನಗಳಿಗೆ ತಮ್ಮ ಪತಿಯ ಬಳಿ ಶಿಫಾರಸು ಮಾಡುತ್ತಿರಲಿಲ್ಲ. ಅದೇ ರೀತಿ ಅವರ ಮಕ್ಕಳು ಯಾರು ಸಹ ಶ್ರೀ ರಾಮಕೃಷ್ಣ ಹೆಗಡೆಯವರು ಮನೆಯಲ್ಲಿ ಬೇರೆಬೇರೆಯವರೊಂದಿಗೆ ನಡೆಸುತ್ತಿದ್ದ ರಾಜಕೀಯ ಸಭೆ ಅಥವಾ ಚರ್ಚೆಗಳಲ್ಲಿ ಎಂದು ಕುಳಿತು ತಮ್ಮ ಅಭಿಪ್ರಾಯವನ್ನು ಹೇಳುವುದಾಗಲಿ, ಸಲಹೆಯನ್ನ ನೀಡುವುದನ್ನು ಆಗಲಿ ಮಾಡದೆ ಅವರ ಪಾಡಿಗೆ ಅವರು ಇರುತ್ತಿದ್ದರು.

ತಮ್ಮ ಮಗನ ಮೇಲೆ ಎಂಡಿ ಸೀಟು ಕೊಡಿಸುವ ಕಾರಣಕ್ಕಾಗಿ ಹಣ ಪಡೆದಿದ್ದಾರೆ ಎಂಬ ಆರೋಪವನ್ನು ಮಾಡಿದಾಗ ಅದರ ತನಿಖೆಗಾಗಿ ಆಯೋಗವನ್ನೇ ರಚಿಸಿ ತನಿಖೆಯನ್ನು ಮಾಡಿಸಿದರು. ತಮ್ಮ ಅಣ್ಣನ ಮೇಲೆ ಅಕ್ಕಿ ಸಾಗಾಣಿಕೆಯ ಆರೋಪ ಬಂದಾಗ ಅದನ್ನು ತನಿಖೆ ಮಾಡಿಸಿದರು. ಯಾವುದೇ ಹೊಸ ಸಣ್ಣ ಆರೋಪ ಬಂದರೂ ಸಹ ಅದಕ್ಕೆ ಗಂಭೀರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.

ಇವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ತಮ್ಮನ್ನು ಸೇರಿದಂತೆ ಯಾರೂ ಸಹ ತಮ್ಮ ಕಚೇರಿಗಳಲ್ಲಿ ತಮ್ಮ ಸಂಬಂಧಿಕರನ್ನ ಸಹಾಯಕರನ್ನಾಗಿ ನೇಮಿಸಿಕೊಳ್ಳಬಾರದು. ಜೊತೆಗೆ ತಮ್ಮ ಜಾತಿಯವರನ್ನು ಸಿಬ್ಬಂದಿಯ ನೆಪದಲ್ಲಿ ನೇಮಕ ಮಾಡಿಕೊಳ್ಳಬಾರದು ಎಂಬ ಆದೇಶವನ್ನು ಹೊರಡಿಸಿದ್ದರು.

ರಾಮಕೃಷ್ಣ ಹೆಗಡೆ ಅವರು ಎಂದು ಸಹ ತಮ್ಮ ಜಾತಿಯ ವಿಚಾರವನ್ನು ಮುಂದೆ ಮಾಡಿಕೊಂಡು ಮಠಗಳನ್ನು ಸುತ್ತುತ್ತಿರಲಿಲ್ಲ. ಸ್ವಾಮೀಜಿಗಳ ಕಾಲಿಗೆ ಬೀಳುತ್ತಿರಲಿಲ್ಲ. ಇವರು ಹೆಚ್ಚು ಪ್ರೀತಿಸುತ್ತಿದ್ದಿದ್ದು ಮತ್ತು ಗೌರವದಿಂದ ಕಾಣುತ್ತಿದ್ದಿದ್ದು ತುಮಕೂರಿನ ನಡೆದಾಡುವ ದೇವರು ಎಂದು ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಮಾತ್ರ.

ಶ್ರೀ ಶಿವಕುಮಾರ ಸ್ವಾಮೀಜಿಯವರ ಮಠದಲ್ಲಿ ಕೆಲವು ಆಂತರಿಕ ಘರ್ಷಣೆಗಳು ಆದಾಗ ಹಿರಿಯ ಪೊಲೀಸ್ ಅಧಿಕಾರಿಯನ್ನು ಸ್ವಾಮೀಜಿಗಳ ರಕ್ಷಣೆಗೆ ನೇಮಿಸಿ, ಸ್ವಾಮೀಜಿ ರವರ ಗೌರವಕ್ಕೆ ಮತ್ತು ಅವರ ಮಠದ ವಿಚಾರಗಳಿಗೆ ಧಕ್ಕೆ ಬಾರದಂತೆ ಕ್ರಮವನ್ನ ಜರುಗಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ಜಾತಿಯ ಪ್ರಮೋದ್ ಹೆಗಡೆಯವರನ್ನು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದಾಗಿತ್ತಾದರೂ ಜಾತಿಯ ಕಾರಣಕ್ಕಾಗಿ ಅವರನ್ನು ನೇಮಕ ಮಾಡದೆ ಹಿಂದುಳಿದ ವರ್ಗದ ಸಮಾಜಕ್ಕೆ ಸೇರಿದ ಮತ್ತೊಬ್ಬರನ್ನು ಜಿಲ್ಲಾ ಪಂಚಾಯತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.

ವಿಧಾನ ಪರಿಷತ್ತಿಗೆ ಸದಸ್ಯರನ್ನು ನಾಮಕರಣ ಮಾಡುವ ಸಂದರ್ಭದಲ್ಲಿಯೂ ತಮ್ಮ ಕುಟುಂಬದವರನ್ನಾಗಲಿ ತಮ್ಮ ಹತ್ತಿರದ ಬಂಧುಗಳನ್ನಾಗಲಿ ಎಂದು ಪರಿಗಣಿಸಲಿಲ್ಲ. ಬದಲಿಗೆ ಸಾಹಿತಿಗಳು, ಕಲಾವಿದರು, ಸಂಗೀತಗಾರರು ಮತ್ತು ಸಾಧಕರನ್ನು ಹುಡುಕಿ ನೇಮಕ ಮಾಡುತ್ತಿದ್ದರು. ಇಂತಹ ಕಾರಣಗಳಿಂದಾಗಿ ಡಾ.ಸಿದ್ದಲಿಂಗಯ್ಯನವರು ವಿಧಾನ ಪರಿಷತ್ತಿನ ಸದಸ್ಯರಾಗಲು ಸಾಧ್ಯವಾಯಿತು.

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅನುಸರಿಸಿದ ಮಾರ್ಗ ಆಯ್ಕೆಯ ಮಾನದಂಡ ಇವುಗಳನ್ನ ಗಮನಿಸಿದಾಗ ಇಂತಹ ವ್ಯವಸ್ಥೆಯಲ್ಲಿ ರಾಮಕೃಷ್ಣ ಹೆಗಡೆಯವರು ಭಿನ್ನವಾಗಿ ಮತ್ತು ಮಾದರಿಯಾಗಿ ಕಾಣುತ್ತಾರೆ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply