ಶಿವಾಜಿನಗರ: ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ನ್ಯಾಯ ದೇಗುಲ ಹೈಕೋರ್ಟ್ ಸೇರಿದಂತೆ ಹಲವು ಪ್ರಮುಖ ತಾಣಗಳನ್ನು ಒಳಗೊಂಡಿರುವ ಶಿವಾಜಿನಗರ ಕ್ಷೇತ್ರ ಅಲ್ಪಸಂಖ್ಯಾತರ ಭದ್ರಕೋಟೆ ಎನ್ನಲಾಗಿದೆ. ಆದರೂ ಇಲ್ಲಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎರಡು ಬಾರಿ ಆಯ್ಕೆಯಾಗಿದ್ದು ವಿಶೇಷ.
ಕ್ಷೇತ್ರ ಪುನರ್ ವಿಂಗಡಣೆ ನಂತರ ಜಯಮಹಲ್ ಕ್ಷೇತ್ರ ಕಣ್ಮರೆಯಾಗಿ ಅಲ್ಲಿಂದ ಆಯ್ಕೆಯಾಗುತ್ತಿದ್ದ ರೋಷನ್ ಬೇಗ್ ಶಿವಾಜಿನಗರಕ್ಕೆ ಬಂದರೆ, ಕಟ್ಟಾ ಸುಬ್ರಮಣ್ಯ ನಾಯ್ಡು ನೆರೆಯ ಹೆಬ್ಬಾಳಕ್ಕೆ ತೆರಳಿದರು.
ಅಲ್ಪಸಂಖ್ಯಾತರು ತೆಲುಗು ಮತ್ತು ತಮಿಳು ಭಾಷೆಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯುವನಾಯಕ ರಿಜ್ವಾನ್ ಹರ್ಷದ್ ಮರು ಆಯ್ಕೆ ಬಯಸಿದರೆ, ಬಿಬಿಎಂಪಿ ಸದಸ್ಯ ಚಂದ್ರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಾಂತ್ರಿಕ ಕಾರಣಗಳಿಂದ ಜೆಡಿಎಸ್ ನ ಅಭ್ಯರ್ಥಿಯ ನಾಮಪತ್ರ ರದ್ದುಗೊಂಡಿದ್ದು ಆಮ್ ಆದ್ಮಿಯಿಂದ ಕಣಕ್ಕಿಳಿದಿರುವ ಉದ್ಯಮಿ ಪ್ರಕಾಶ್ ನೆಡುಂಗಡಿ ಎರಡೂ ಪಕ್ಷಗಳಿಗೆ ಸ್ಪರ್ಧೆ ಒಡ್ಡಿದ್ದಾರೆ.
ಐಎಂಎ ಹಗರಣದ ಸುಳಿಯಲ್ಲಿ ಸಿಲುಕಿದ ಮಾಜಿ ಸಚಿವ ರೋಶನ್ ಬೇಗ್ ಕಾಂಗ್ರೆಸ್ ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಲ್ಲಿ ಗುರುತಿಸಿಕೊಂಡರು. ಈ ಬಾರಿ ತಮಗೆ ಅಥವಾ ತಮ್ಮ ಪುತ್ರನಿಗೆ ಟಿಕೆಟ್ ಕೊಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದರು. ಆದರೆ ಬಿಜೆಪಿಯಿಂದ ಅಂತಹ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಇದೆ ಮೊದಲ ಬಾರಿಗೆ ರೋಷನ್ ಬೇಗ್ ಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ. ಕೊನೆಯ ಕ್ಷಣದಲ್ಲಿ ಇವರು ಯಾರ ಪರ ನಿಲ್ಲುತ್ತಾರೋ ಅವರಿಗೆ ಗೆಲುವಿನ ಅವಕಾಶ ಹೆಚ್ಚು. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ನೇರಾ ನೇರ ಸ್ಪರ್ಧೆ ಇರುವಂತೆ ಕಂಡುಬಂದರೂ ಅಮ್ ಆದ್ಮಿ ಪಾರ್ಟಿ ಮಾಡುತ್ತಿರುವ ಸದ್ದಿಲ್ಲದ ಪ್ರಚಾರ ತಂತ್ರ ಕುತೂಹಲ ಮೂಡಿಸಿದ್ದು, ಫಲಿತಾಂಶದ ಚಿತ್ರಣ ಬದಲಾಯಿಸುವ ಸಾಧ್ಯತೆ ಇದೆ.



