ಬಿಜೆಪಿಯವರಿಗೆ ದ್ವೇಷ ಸೃಷ್ಟಿಸಿ ಅಶಾಂತಿ ನಿರ್ಮಿಸುವುದೇ ಉದ್ದೇಶ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ಬಿಜೆಪಿಯವರಿಗೆ ಬೇರೆ ಸಮುದಾಯದವರ ಮೇಲೆ ದ್ವೇಷ ಸೃಷ್ಟಿಸಿ ಅಶಾಂತಿ ನಿರ್ಮಿಸುವುದೇ ಉದ್ದೇಶ. ಇದರಿಂದ ದೇಶಕ್ಕೆ ಉಳಿಗಾಲ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಿಂದ ಮರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಪ್ರಕರಣವನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಕೆಣಕಿ ವ್ಯವಸ್ಥೆ ಹಾಳು ಮಾಡುವುದರಿಂದ ದೇಶಕ್ಕೆ ಉಳಿಗಾಲ ಇರುವುದಿಲ್ಲ ಎಂದರು.

ಅಯೋಧ್ಯೆಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ಆಸ್ತಾ ರೈಲನ್ನು ಹೊಸಪೇಟೆಯಲ್ಲಿ ನೀರು ತುಂಬಿಸಿಕೊಳ್ಳಲು ನಿಲ್ಲಿಸಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೊಂದು ಫ್ಲಾಟ್ಫಾುರಂನಲ್ಲಿ ಬೇರೊಂದು ರೈಲು ನಿಂತಿದೆ. ಅದರಲ್ಲಿ ನಿಂತಿದ್ದ ಮುಸಲ್ಮಾನ ವ್ಯಕ್ತಿಯೊಬ್ಬ ಸ್ಕೈವಾಕ್‍ ದಾಟಿ ಆ ಕಡೆಗೆ ಹೋಗುವ ಬದಲಾಗಿ ನಿಂತಿದ್ದ ರೈಲುಗಳ ನಡುವಿನಿಂದಲೇ ಹಾದು ಹೋಗಿದ್ದಾರೆ ಎಂದರು.

ಆತನ ಗಡ್ಡದಿಂದ ಮುಸಲ್ಮಾನ್ ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ಛೇಡಿಸಿ, ಬೈದು, ಗಲಾಟೆ ಮಾಡಿದ್ದಾರೆ. ಇದರಿಂದ ಕೆರಳಿದ ಆತ ರೈಲನ್ನು ಸುಟ್ಟುಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದೆ. ರೈಲಿನಲ್ಲಿ ಅಷ್ಟೊಂದು ಜನ ಇದ್ದಾಗ ಒಬ್ಬ ವ್ಯಕ್ತಿ ಸುಟ್ಟು ಹಾಕುತ್ತೇನೆ ಎಂದು ಹೇಳಿಕೆ ನೀಡಿದ್ದಾನೆಯೋ, ಇಲ್ಲವೋ ಗೊತ್ತಿಲ್ಲ. ಪರಿಶೀಲನೆ ನಡೆಯುತ್ತಿದೆ. ಆತ ಪಾಕಿಸ್ತಾನದ ಪರವಾಗಿ ಮಾತನಾಡಿದ್ದ ಎಂದೆಲ್ಲಾ ವೈಭವೀಕರಣ ಮಾಡಿದ್ದಾರೆ ಎಂದರು.

ಆತ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾದ ಬಳಿಕ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಆತನನ್ನು ಬಂಧಿಸಿ ಬಿಟ್ಟು ಕಳುಹಿಸಿಲ್ಲ. ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆನಂತರವೂ ಆತ ಎಲ್ಲಿ ಹೋಗುತ್ತಾನೆ. ಚಲನವಲನಗಳೇನು ಎಂಬ ಬಗ್ಗೆ ನಿಗಾ ವಹಿಸಲಾಗುತ್ತದೆ ಎಂದರು.

ಕಳೆದ 75 ವರ್ಷಗಳಿಂದಲೂ ದೇಶ ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿದೆ. ಬಿಜೆಪಿಯವರು ಈವರೆಗೂ ಅಭಿವೃದ್ಧಿ ವಿಚಾರವನ್ನು ಚರ್ಚೆ ಮಾಡುತ್ತಿಲ್ಲ. ಬೇರೆ ಧರ್ಮದವರನ್ನು ದ್ವೇಷಿಸುವುದು, ಅದಕ್ಕಾಗಿ ಪ್ರಚೋದಿಸುವಂತಹ ಭಾವನಾತ್ಮಕ ವಿಚಾರಗಳನ್ನೇ ಪ್ರಸ್ತಾಪಿಸುತ್ತಿದ್ದಾರೆ. ಇದು ದೇಶಕ್ಕೆ ಒಳ್ಳೆಯದಲ್ಲ. ದ್ವೇಷ ಭಾವನೆಯನ್ನು ವ್ಯಾಪಕವಾಗಿ ಬಿತ್ತಲಾಗುತ್ತಿದೆ. 75 ವರ್ಷಗಳಿಂದಲೂ ಇಲ್ಲದೇ ಇರುವಂತಹ ಅಸಹನೀಯ ವಾತಾವರಣವನ್ನುಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದರು.

Leave a Reply