ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ. ಯಾವ ಸಮಯದಲ್ಲಿ ಏನಾಗಲಿದೆಯೋ ಗೊತ್ತಾಗುತ್ತಿಲ್ಲ. ಆದರೆ ಮುಂಬರುವ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭವಿಷ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರಲ್ಲಿ ಸಾಕಷ್ಟು ಗೊಂದಲದ ವಾತಾವರಣವಿದೆ. ಆ ಗೊಂದಲ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ಸರ್ಕಾರ ಯಾವಾಗ ಬೇಕಾದರೂ ಏನು ಬೇಕಾದರೂ ಆಗುವಂತಹ ವಾತಾವರಣವಿದೆ. ಅಂತ ವಾತಾವರಣ ನಮ್ಮಲ್ಲಿಲ್ಲ, ಕಾಂಗ್ರೆಸ್ ನಲ್ಲಿ ಅಂತ ವಾತಾವರಣ ನಿರ್ಮಾಣವಾಗಿದೆ ಎಂದರು.
ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ಲೋಕಸಭೆ ಚುನಾವಣೆ ನಂತರ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ-ಜೆಡಿಎಸ್ ನಾಯಕರು ಕನಸು ಕಾಣುತ್ತಿದ್ದಾರೆ. ಅದು ಎಂದಿಗೂ ಈಡೇರುವುದಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ನಡೆಸಿದರೂ ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಪತನ ಮಾಡಲು ಮತ್ತು ಹೊಸ ಸರ್ಕಾರ ರಚಿಸಲು ಬಿಜೆಪಿ-ಜೆಡಿಎಸ್ಗೆ 50 ಶಾಸಕರು ಬೇಕು. ನಮ್ಮ ಪಕ್ಷದಿಂದ ಅಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಸಿಲುಕಿ ಪಕ್ಷಾಂತರ ಮಾಡುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರ ಪತನವಾಗಲಿದೆ ಎಂಬ ಭ್ರಮೆಯಲ್ಲಿಯೇ ಇರಲಿ. ರಾಜ್ಯದ ಜನ ಅವರ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ 135 ಸ್ಥಾನ ಗೆಲ್ಲಿಸಿದ್ದಾರೆ. ಇದನ್ನು ಮರೆತು ಪದೇ ಪದೇ ಸರ್ಕಾರ ಪತನಗೊಳ್ಳುತ್ತದೆ ಎಂಬ ಭಾವನೆ ಬಿತ್ತಲು ಯತ್ನಿಸುತ್ತಿದ್ದಾರೆ. ಅದು ಯಶಸ್ವಿಯಾಗುವುದಿಲ್ಲ ಎಂದರು.
ಶೋಭಾ ಕರಂದ್ಲಾಜೆಯವರು ವಾಪಸ್ ಹೋಗಬೇಕೆಂದು ಅವರ ಕ್ಷೇತ್ರದಲ್ಲಿಯೇ ಜನ ಪ್ರತಿಭಟನೆ ಮಾಡುತ್ತಿದ್ದಾರೆ.ಅವರ ಪಕ್ಷದವರೇ ವಿರೋಧ ಮಾಡುತ್ತಿದ್ದಾರೆ. ಅವರು ನಮ್ಮ ಸರ್ಕಾರವನ್ನು ಪತನಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಮೊದಲು ಶೋಭಕ್ಕ ತಮ್ಮ ಟಿಕೆಟ್ ಅನ್ನು ಗಟ್ಟಿ ಮಾಡಿಕೊಳ್ಳಲಿ, ಅನಂತರ ಸರ್ಕಾರ ರಚಿಸಲು 50 ಮಂದಿ ಶಾಸಕರನ್ನು ಎಲ್ಲಿಂದ ಕರೆತರುತ್ತಾರೆ ಎಂದು ಹೇಳಲಿ ಎಂದು ಸವಾಲೆಸೆದರು.




