ಸಾರ್ವಜನಿಕ ಸಂಪರ್ಕ ವಿಭಾಗ ಮತ್ತಷ್ಟು ಕ್ರಿಯಾಶೀಲವಾಗಬೇಕು

2 years ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಾಮಾನ್ಯವಾಗಿ ನಿಯೋಜನೆಗೊಂಡಿರುತ್ತಾರೆ. ಸಾರ್ವಜನಿಕ ಸಂಪರ್ಕ ವಿಭಾಗ ಆಸ್ಪತ್ರೆಗಳಲ್ಲಿ ಮತ್ತಷ್ಟು ಕ್ರಿಯಾಶೀಲವಾಗಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯವಾಗಿ ಬರುವುದು ಗ್ರಾಮೀಣ ಪ್ರದೇಶದ ಜನರು ಮತ್ತು ಬಡವರು ಇವರುಗಳಿಗೆ ಆಸ್ಪತ್ರೆಗಳಲ್ಲಿ ಇರುವಂತಹ ವ್ಯವಸ್ಥೆ ಮತ್ತು ವಿವಿಧ ಯೋಜನೆಗಳ ಪರಿಚಯ ಇರುವುದಿಲ್ಲ.

ಬಹಳಷ್ಟು ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಅವರ ಜೊತೆಯಲ್ಲಿ ಬಂದಂತಹ ಸಹಾಯಕರು ಎಲ್ಲಿ ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿ ಇಲ್ಲದೆ ಕಷ್ಟ ಪಡುತ್ತಿರುತ್ತಾರೆ. ತಿಳುವಳಿಕೆ ಇರುವ ಜನ ಎಲ್ಲವನ್ನು ನಿಭಾಯಿಸುತ್ತಾರೆ. ಅಷ್ಟಾಗಿ ತಿಳುವಳಿಕೆ ಇಲ್ಲದೆ ಇರುವ ಜನ ಅಕ್ಕಪಕ್ಕದ ರೋಗಿಗಳ ಜೊತೆ ಬಂದಿರುವ ಜನರನ್ನು ಕೇಳಿ ತಮಗೆ ಬೇಕಾದಂತಹ ವಿವರಗಳನ್ನು ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮತ್ತಷ್ಟು ಕ್ರಿಯಾಶೀಲರಾಗಬೇಕಾಗಿದೆ. ಒಂದಷ್ಟು ಜನ ಸ್ವಯಂಸೇವಕರನ್ನ ನೇಮಕ ಮಾಡಿಕೊಂಡು ಅವರಿಗೆ ತಿಳುವಳಿಕೆ ಕೊಟ್ಟರೆ ಅವರ ಮೂಲಕವೂ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಗ್ಗಿನ ವೇಳೆಯಲ್ಲಿ ಒತ್ತಡ ಹೆಚ್ಚು ಇರುವ ಸಂದರ್ಭದಲ್ಲಿ ಇವರ ಮೂಲಕ ಸೇವೆಯನ್ನ ಪಡೆಯಬಹುದು. ಈ ನಿಟ್ಟಿನಲ್ಲಿ ಕೇವಲ ಸಾರ್ವಜನಿಕ ಸಂಪರ್ಕ ಅಧಿಕಾರಿ ಹುದ್ದೆಯ ಜೊತೆಗೆ ಸಾರ್ವಜನಿಕ ಸಂಪರ್ಕ ಕಾರ್ಯಕರ್ತರು ಎಂಬ ಹೊಸದಾದಂತಹ ಪಡೆಯನ್ನ ತರಬೇತಿಗೊಳಿಸುವಂತಹ ಆಲೋಚನೆಯನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಭಾಗದವರು ಆಲೋಚಿಸಬೇಕಾಗಿದೆ.

ಸಾರ್ವಜನಿಕರು ಮಾಹಿತಿಯ ಕೊರತೆಯಿಂದ ಅನುಭವಿಸುವ ತೊಂದರೆಯನ್ನು ಖುದ್ದು ಅನುಭವ ಪಡೆಯಬೇಕಾದರೆ ಬೆಳಗ್ಗೆಯ ವೇಳೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ, ಮಿಂಟೋ ಕಣ್ಣಿನ ಆಸ್ಪತ್ರೆ, ಬೋರಿಂಗ್ ಆಸ್ಪತ್ರೆ, ಜಯದೇವ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಕೆ ಸಿ ಜನರಲ್ ಆಸ್ಪತ್ರೆ, ಕ್ಷಯ ರೋಗದ ಆಸ್ಪತ್ರೆ, ವಿಶೇಷವಾಗಿ ನಿಮಾನ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟರೆ ಅಲ್ಲಿನ ಪರಿಸ್ಥಿತಿ ಅರಿವಾಗುತ್ತದೆ. ಆದುದರಿಂದ ರಾಜ್ಯ ಸರ್ಕಾರ ಮತ್ತು ಆಸ್ಪತ್ರೆಗಳಲ್ಲಿನ ಅಧಿಕಾರಿಗಳು ಈ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ.

ಪರಿಚಯವಿರುವವರು ಮತ್ತು ಪ್ರಭಾವ ಬೀರುವವರು ಹೇಗೋ ತಮ್ಮ ಕಡೆಯವರಿಗೆ ಸೂಕ್ತ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಸಿಕೊಳ್ಳುತ್ತಾರೆ. ಪರಿಚಯವಿಲ್ಲದವರು ಮತ್ತು ಪ್ರಭಾವಿಗಳಲ್ಲದವರು ಸಾಮಾನ್ಯರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

  • ಕೆಎಸ್ ನಾಗರಾಜ್, ಬೆಂಗಳೂರು

Leave a Reply