ಡೆಂಗ್ಯೂ ನಿಯಂತ್ರಣಕ್ಕಾಗಿ ಹಮ್ಮಿಕೊಳ್ಳುವ ಚಟುವಟಿಕೆಗಳಿಗೆ ಸಾರ್ವಜನಿಕರು ಕೈ ಜೋಡಿಸಿ

1 year ago

ಶಾಸಕ ನಾರಾ ಭರತ್ ರೆಡ್ಡಿ ಕರೆ

ಬಳ್ಳಾರಿ: ಈಡೀಸ್ ಸೊಳ್ಳೆಯು ಕಚ್ಚುವಿಕೆಯಿಂದ ಹರಡುವ ಡೆಂಗ್ಯೂ ರೋಗ ನಿಯಂತ್ರಿಸಲು ಆರೋಗ್ಯ ಇಲಾಖೆ ಕೈಗೊಳ್ಳುವ ಚಟುವಟಿಕೆಗಳಿಗೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕರೆನೀಡಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗದ ಮೂಲಕ ಜಿಲ್ಲೆಯಾದ್ಯಂತ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ದಿನ ಅಂಗವಾಗಿ ಬಳ್ಳಾರಿ ನಗರದ ಗಾಂಧಿನಗರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ತಂಡ ಮನೆ ಮನೆಗೆ ಭೇಟಿ ನೀಡಿ ಡೆಂಗ್ಯೂ ಹರಡುವ ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಮಾಡುವ ಕಾರ್ಯವನ್ನು ಸಾರ್ವಜನಿಕರಿಗೆ ಮನವೊಲಿಸಿ ಯಶಸ್ವಿಯಾಗಿ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಸಹ ಬಳಕೆಗಾಗಿ ನೀರು ತುಂಬುವ ಈ ಎಲ್ಲಾ ಪರಿಕರಗಳನ್ನು ವಾರಕ್ಕೊಮ್ಮೆ ತೊಳೆದು ಒಣಗಿಸಬೇಕು. ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚಿ ಹಾಗೂ ಅನಗತ್ಯವಾಗಿ ನೀರು ನಿಲ್ಲುವ ಪರಿಕರಗಳನ್ನು ವಾರಕ್ಕೊಮ್ಮೆ ಪರೀಕ್ಷಿಸಿ ಸೊಳ್ಳೆ ಮರಿ ಉಂಟಾಗದಂತೆ ತಡೆಯುವ ಮೂಲಕ ಸಮುದಾಯದ ಆರೋಗ್ಯ ಕಾಪಾಡುವ ಇಲಾಖೆಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರ ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ಕಾಯ್ದೆಗೆ ಒಳಪಡಿಸಿದ್ದು, ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಲಕ್ಷ್ಯ ವಹಿಸಿದರೆ 200 ರೂ. ಗಳಿಂದ 2000 ರೂ.ಗಳ ವರೆಗೆ ದಂಡ ವಿಧಿಸುವ ಕಾನೂನು ಅನುಷ್ಠಾನ ಮಾಡಿದ್ದು, ಪ್ರತಿಯೊಬ್ಬರ ಸಹಭಾಗಿತ್ವದೊಂದಿಗೆ ಸೊಳ್ಳೆಗಳ ನಿಯಂತ್ರಣ ಅವಶ್ಯಕತೆಯಿದೆ ಎಂದರು.

ಸಾರ್ವಜನಿಕರು ಡೆಂಗ್ಯೂ ಕಾಯಿಲೆಗೆ ಕಂಡುಬರುವ ಲಕ್ಷಣಗಳಾದ ಜ್ವರ, ಕಣ್ಣು ಕೆಂಪಾಗುವಿಕೆ, ಕಣ್ಣಿನ ಹಿಂಭಾಗದಲ್ಲಿ ನೋವು, ವಾಂತಿ, ಕಾರಣವಿಲ್ಲದೇ ಮೈ ತುರಿಕೆ, ತಲೆನೋವು, ಗಂಧೆಗಳು, ಕೀಲುಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು ಕಂಡುಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ತಪ್ಪದೇ ಭೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಅಗತ್ಯ ಔಷದೋಪಚಾರ ಕೈಗೊಳ್ಳಬೇಕು. ಹೆಚ್ಚು ದಿನಗಳ ಕಾಲ ನೀರು ಸಂಗ್ರಹವಿರುವ ಸ್ಥಳಗಳಲ್ಲಿ ಗಪ್ಪಿ ಮತ್ತು ಗಾಂಬೋಷಿಯ ಮೀನುಗಳನ್ನು ಬಿಡಲು ಅವಕಾಶವಿದ್ದು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮೀನುಗಳನ್ನು ಪಡೆದು ನೀರಿನ ತಾಣಗಳಲ್ಲಿ ಬಿಡಬಹುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್ ಅಬ್ದುಲ್ಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸೇರಿದಂತೆ ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

Leave a Reply