ಗೊಂದಲಗಳಿಗೆ ಅವಕಾಶವಿಲ್ಲದೆ ಸುಗಮವಾಗಿ ನಡೆದ ಪಿ.ಎಸ್.ಐ. ಪರೀಕ್ಷೆ

2 years ago

ಬೆಂಗಳೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ನಗರದ 117 ಕೇಂದ್ರಗಳಲ್ಲಿ ಮರುಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಸುಗಮವಾಗಿ ನಡೆಯಿತು.

ಈ ಹಿಂದೆ 2021ರ ಅಕ್ಟೋಬರ್ 23ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ 54 ಸಾವಿರ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು  ಬೆಂಗಳೂರಿಗೆ ಆಗಮಿಸಿದ್ದರು.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಲಿಖಿತ ಮರುಪರೀಕ್ಷೆಯ ಹೊಣೆಗಾರಿಕೆಯನ್ನು ಒಪ್ಪಿಸಿತ್ತು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ, ಅವ್ಯವಹಾರ ಚಟುವಟಿಕೆಗಳು ನಡೆಯದಂತೆ ಬಿಗಿಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. 40 ಕ್ಕೂ ಹೆಚ್ಚು ಕೆಎಸ್‍ಆರ್‍ಪಿ ಮತ್ತು ಸಿಎಆರ್ ಬೆಟಾಲಿಯನ್‍ನಲ್ಲಿನ ಪೊಲೀಸ್ ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಫ್ತಿಯಲ್ಲೂ ಪೊಲೀಸರು ಗಸ್ತಿನಲ್ಲಿದ್ದರು.

ಹಲವು ಹಂತಗಳ ತಪಾಸಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆದ ಅಭ್ಯರ್ಥಿಗಳು ಸಿಸಿ ಟಿವಿ ಮತ್ತು ಪರೀಕ್ಷಾ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಮರುಪರೀಕ್ಷೆ ನಡೆಯಿತು. ಕಳೆದ ಮೂರು ವರ್ಷಗಳಿಂದಲೂ ಪೊಲೀಸ್ ಸಮವಸ್ತ್ರ ಧರಿಸುವ ಕನಸು ಕಾಣುತ್ತಿದ್ದವರಿಗೆ ಈ ಹಿಂದಿನ ಪರೀಕ್ಷಾ ಅಕ್ರಮಗಳು ದುಃಸ್ವಪ್ನವಾಗಿ ಕಾಡಿವೆ. ಹಾಗಾಗಿ ಬಹುತೇಕರಿಗೆ ಪರೀಕ್ಷೆ ಬರೆಯುವ ಹುಮ್ಮಸ್ಸೇ ತಗ್ಗಿದಂತೆ ಕಂಡುಬಂತು.

ಕೆಲವರು ಈಗಲೂ ತಮಗೆ ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿದೆ. ಪರೀಕ್ಷಾ ಪ್ರಾಧಿಕಾರ ಮತ್ತು ಸರ್ಕಾರ ಯಾವುದೇ ಅಕ್ರಮಗಳಾಗದಂತೆ ಪಾರದರ್ಶಕ ಹಾಗೂ ಮುಕ್ತ ಪರೀಕ್ಷೆ ನಡೆಸಬಹುದೆಂಬ ನಿರೀಕ್ಷೆಗಳಿವೆ ಎಂದು ಅಭ್ಯರ್ಥಿಗಳು ಹೇಳಿಕೊಂಡರು.

Leave a Reply