ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿ: ರುದ್ರಣ್ಣ ಹರ್ತಿಕೋಟೆ

7 months ago

ಹಾಸನ: ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ ಅವಧಿಯೊಳಗೆ ಮಾಹಿತಿ ನೀಡುವಂತೆ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಇವರ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಜಾಗೃತಿ, ಸಂವಾದ, ಸಾರ್ವಜನಿಕರೊಂದಿಗೆ ಕಾಯ್ದೆಯ ಸದ್ಬಳಕೆ ಕುರಿತು ಚರ್ಚಿಸುವ ಸಂಬಂಧ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಕಳೆದ ಅಕ್ಟೋಬರ್ 12 ಕ್ಕೆ 20 ವರ್ಷಗಳು ಪೂರ್ಣಗೊಂಡಿದ್ದು, ಅನೇಕ ಬದಲಾವಣೆಗಳು ಕೂಡ ಆಗಿದೆ. ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಸಾರ್ವಜನಿಕರಿಗೆ ಮಾಹಿತಿ ಕಲ್ಪಿಸುವುದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಿದೆ ಎಂದರು.

ಕಾರ್ಯಗಾರದ ಮೂಲ ಉದ್ದೇಶ ಬದಲಾವಣೆ, ಆಯೋಗ ಮತ್ತು ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿರುವುದನ್ನು ಪುನರ್ ಮನನ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತರಬೇತಿ ಕಾರ್ಯಾಗಾರ ನಡೆಸುವ ಮೂಲಕ ಅಧಿಕಾರಿಗಳಿಗೆ ಉತ್ತೇಜನಗೊಳಿಸಲಾಗುತ್ತಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ತರಬೇತಿ ನಡೆಸಲಾಗಿದೆ ಎಂದರು.

ಕಾಯ್ದೆ ದುರ್ಬಳಕೆ ಆಗದಂತೆ ಕಾಪಾಡುವ ಹೊಣೆಗಾರಿಕೆ ನಾಗರೀಕರ ಮೇಲಿದೆ. ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಯಮಗಳ ಬಗ್ಗೆ ಅರಿವು ಪಡೆದುಕೊಳ್ಳುವುದು ಅತ್ಯಗತ್ಯ ಎಂದರಲ್ಲದೆ, ನಮೂನೆ 6(1) ಓದಿದರೆ ಮಾಹಿತಿ ನೀಡಲು ಹಾಗೂ ಅರ್ಜಿಗಳ ವಿಲೇವಾರಿಗೆ ಸಹಾಯವಾಗುತ್ತದೆ ಎಂದರು.

ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕಾರವಾದ ಅರ್ಜಿಗಳ ವಿಲೇವಾರಿಗೆ ಉದಾಸಿನ ಮಾಡದೆ 30 ದಿನದೊಳಗೆ ಮಾಹಿತಿ ನೀಡುವಂತೆ ತಿಳಿಸಿದರಲ್ಲದೆ, ವಿಳಂಬ ಮತ್ತು ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಲು ತಿಳಿಸಿದರಲ್ಲದೆ, ಮಾಹಿತಿ ಕ್ರೂಡಿಕರಿಸಿ ನೀಡಲು ಅವಕಾಶವಿಲ್ಲ ಎಂದರು.

ಆಯೋಗದ ಮತ್ತು ನ್ಯಾಯಾಲಯದ ತೀರ್ಪುಗಳನ್ನು ಅಧ್ಯಯನ ಮಾಡಿದರೆ ಅಧಿಕಾರಿಗಳು ಮಾಹಿತಿ ನೀಡಲು ನೆರವಾಗುತ್ತದೆ. ಅರ್ಜಿದಾರರಿಗೆ ಮಾಹಿತಿ ನೀಡಲು ಎಷ್ಟು ಪುಟಗಳಿವೆ, ಎಷ್ಟು ಹಣ ಪಾವತಿ ಮಾಡಬೇಕು ಎಂದು ನಿಗದಿತ ಅವಧಿಯಲ್ಲಿ ತಿಳಿಸಿ, ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಚೇರಿಗೆ ಬರುವ ನಾಗರೀಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮಾಹಿತಿ ಹಕ್ಕು ಅಧಿನಿಯಮ ಪರಿಣಾಮವಾಗಿ ಅನುಷ್ಟಾನ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ. ಇದರಿಂದ ಅರ್ಜಿದಾರರಿಗೆ ಅನುಕೂಲವಾಗುತ್ತದೆ ಎಂದರು.

ಅರ್ಜಿದಾರರು ಬಿ.ಪಿ.ಎಲ್. ಕಾರ್ಡ್ದಾರರಾಗಿದ್ದಲ್ಲಿ ಉಚಿತ ಮಾಹಿತಿ ಪಡೆಯಲು ಕಡ್ಡಾಯವಾಗಿ ಬಿ.ಪಿ.ಎಲ್. ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಿದ್ದಲ್ಲಿ ನೂರು ಪುಟಗಳು ಉಚಿತ ಮಾಹಿತಿ ನೀಡಬಹುದು. ಎರಡು ದಾಖಲೆಗಳನ್ನು ಲಗತ್ತಿಸಿದ್ದಾರಯೇ ಎಂದು ಪರಿಶೀಲನೆ ಮಾಡಿ. ಆದಾಯ ಪ್ರಮಾಣ ಪತ್ರದ ಮೂಲ ಪ್ರತಿ ಲಗತ್ತಿಸಿರಬೇಕು ಎಂದು ತಿಳಿಸಿದರು.

ಎಲ್ಲಾ ಕಚೇರಿಗಳಲ್ಲಿ 4(1)(a) (b)  ಅನ್ನು ಕಚೇರಿ ಫಲಕಗಳಲ್ಲಿ ಪ್ರಕಟಣೆ ಮಾಡಲು ಕ್ರಮ ವಹಿಸಬೇಕು. ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆ ನಡೆಸಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಆದ್ಯತೆ ನೀಡಿ ಎಂದು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುವ ಕೆ.ಡಿ.ಪಿ.ಮತ್ತು ತ್ರೆöÊಮಾಸಿಕ ಸಭೆಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ಮಾಡಿ ಎಂದರು.

ಜಿಲ್ಲೆಯಲ್ಲಿ 1.1.2025 ರಿಂದ 10.10.2025 ವರೆಗೆ 7335 ಅರ್ಜಿಗಳು ಸಲ್ಲಿಕೆಯಾಗಿದ್ದು, 7191 ಅರ್ಜಿಗಳು ವಿಲೇವಾರಿ ಆಗಿದ್ದು, 144 ಬಾಕಿಯಿವೆ. 1059 ಅರ್ಜಿಗಳು ಪ್ರಥಮ ಮೇಲ್ಮನವಿಗೆ ಹೋಗಿದ್ದು, ಅದರಲ್ಲಿ 984 ವಿಲೆವಾರಿ ಆಗಿದ್ದು 75 ಬಾಕಿ ಇದೆ ಎಂದ ಅವರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತೃಪ್ತಿದಾಯಕವಾಗಿದೆ ಎಂದು ತಿಳಿಸಿದರು. ದ್ವಿತೀಯ ಮೇಲ್ಮನವಿಗೆ ಹಾಸನ ಜಿಲ್ಲೆಯ 307 ಪ್ರಕರಣ ಆಯೋಗದಲ್ಲಿವೆ ಎಂದರು.

ನಿಗದಿತ ಸಮಯದಲ್ಲಿ ಮಾಹಿತಿ ನೀಡದೆ ಇದ್ದಲ್ಲಿ ದಂಡ ವಿಧಿಸಲು ಹಾಗೂ ಇಲಾಖಾ ತನಿಖೆಗೆ ಆದೇಶಿಸಲು ಅವಕಾಶವಿದೆ ಎಂದು ತಿಳಿಸಿದ ಅವರು ಇದುವರೆಗೆ ಆಯೋಗದಿಂದ 10719 ಪ್ರಕರಣಗಳಿಗೆ 10.13 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ. 3084 ನೌಕರರು 2.70 ಕೋಟಿ ರೂಪಾಯಿ ದಂಡ ಪಾವತಿಸಿದ್ದಾರೆ. ಇದರಲ್ಲಿ ಜಿಲ್ಲೆಯ 217 ಅಧಿಕಾರಿಗಳಿಗೆ 18.09 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದರಲ್ಲಿ 45 ಪ್ರಕರಣಗಳಲ್ಲಿ 4.44 ಲಕ್ಷ ದಂಡ ಪಾವತಿಯಾಗಿದೆ ಎಂದರು.

ತಾವು ಅಧಿಕಾರ ಸ್ವೀಕರಿಸಿದ ಸಂದರ್ಭ ಆಯೋಗದಲ್ಲಿ 55,498 ಅರ್ಜಿಗಳು ಬಾಕಿಯಿತ್ತು, ನಿಗದಿತವಾಗಿ ವಿಚಾರಣೆ ನಡೆಸುವ ಮೂಲಕ 35,344 ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರಲ್ಲದೆ, ಆದಷ್ಟು ಬೇಗ ಅರ್ಜಿಗಳ ವಿಲೇವಾರಿಗಾಗಿ ಜಿಲ್ಲೆಗಳಿಗೂ ಹೋಗಿ ಅರ್ಜಿ ವಿಲೇವಾರಿ ಮಾಡಲು ಚರ್ಚೆ ನಡೆಯುತ್ತಿದೆ ಎಂದರು.

ಮತ್ತೊಬ್ಬ ಆಯುಕ್ತ ರಾಜಶೇಖರ್ ಎಸ್ ಮಾತನಾಡಿ, ಮಾಹಿತಿ ಪಡೆಯುವುದು ಮೂಲಭೂತ ಹಕ್ಕು. ಯಾರು ಮಾಹಿತಿ ನೀಡಲು ನಿರಾಕರಿಸುವಂತಿಲ್ಲ, ನಿಗಧಿತ ಅವಧಿಯಲ್ಲಿ ಮಾಹಿತಿ ನೀಡಿದರೆ ಅರ್ಜಿದಾರರಿಗೆ ಉಪಯೋಗವಾಗುತ್ತದೆ ಎಂದರು.

ಮಾಹಿತಿ ಹಕ್ಕು ಕಾಯ್ದೆಯಲ್ಲಿ 25 ಸೆಕ್ಷನ್‌ಗಳಿವೆ ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಿ, ಅರ್ಜಿ ತಿರಸ್ಕಾರ ಮಾಡಬಹುದಾದ ಸಂದರ್ಭದಲ್ಲಿ ಸ್ಪಷ್ಟವಾದ ಸಕಾರಣ ನೀಡಬೇಕು ಎಂದರು.

ಅಧಿಕಾರಿಗಳು ನಿರ್ದಿಷ್ಟ ಸಮಯದಲ್ಲಿ ಮಾಹಿತಿ ನೀಡಿ ಬ್ಲಾಕ್ ಮೇಲ್ ಮಾಡಲು ಅವಕಾಶ ಕಲ್ಪಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕೆಲವರು ತೊಂದರೆ ಕೊಡಲು ಮಾಹಿತಿ ಕೇಳುತ್ತಾರೆ. ನೀವು ಎಚ್ಚರವಹಿಸಿ ಮಾಹಿತಿ ನೀಡಿ ಎಂದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply