ಬಳ್ಳಾರಿ: ವ್ಯವಹರಿಸುವವರು ಪ್ರತಿಯೊಬ್ಬರೂ ಗ್ರಾಹಕರು. ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಮಾಹಿತಿ ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಶ್ರೀಮೇದಾ ಪದವಿಪೂರ್ವ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ “ಗ್ರಾಹಕರಿಗೋಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ” ಎಂಬ ಘೋಷವಾಕ್ಯದಡಿ ನಗರದ ಕೋಟೆ ಮುಖ್ಯ ರಸ್ತೆಯ ಶ್ರೀಮೇದಾ ಪದವಿಪೂರ್ವ ಕಾಲೇಜಿನ ಆಡಿಟೋರಿಯಂ ಹಾಲ್ನಲ್ಲಿ ಏರ್ಪಡಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಅಭಿವೃದ್ಧಿಯಾದಂತೆ ನಾವು ಅದರ ಅನುಗುಣವಾಗಿ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಗ್ರಾಹಕರು ತಾವು ಖರೀದಿಸುವ ವಸ್ತುಗಳ ಗುಣಮಟ್ಟ, ಪ್ರಮಾಣದ ಬಗ್ಗೆ ಗಮನಹರಿಸಬೇಕು ಎಂದರು.
ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು ವರ್ತಕರ ಹಾಗೂ ಗ್ರಾಹಕರ ಮಧ್ಯೆ ವಂಚನೆಯಾಗದಂತೆ ಕಾರ್ಯ ನಿರ್ವಹಿಸಲು ಅಭಿವೃದ್ಧಿ ಪಡಿಸುತ್ತಿದ್ದು, ಇದು ಸಹಕಾರಿಯಾಗಲಿದೆ ಎಂದರು.
ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಮಾನವ ರಹಿತ ಯಂತ್ರಗಳೂ ಕಾರ್ಯ ನಿರ್ವಹಿಸಬಹುದಾದಂತಹ ವಾತಾವರಣವು ಸೃಷ್ಟಿಯಾಗಲಿದೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಮಾರಕವಾಗಬಹುದು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಹಕರು ತಾವು ಕೊಂಡುಕೊಳ್ಳುವ ವಸ್ತುಗಳಲ್ಲಿ ಯಾವುದೇ ರೀತಿಯ ಮೋಸವಾದಾಗ ಮತ್ತು ತಮಗಾದ ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು, ತಮಗಿರುವ ಗ್ರಾಹಕರ ಹಕ್ಕುಗಳ ಪರವಾಗಿ ಧ್ವನಿಯೆತ್ತಿ ಕಾನೂನಾತ್ಮಕವಾಗಿ ನ್ಯಾಯ ಪಡೆದುಕೊಳ್ಳಬೇಕು ಎಂದರು.
ಅಭಿವೃದ್ಧಿ ಹೊಂದಿದ ತಂತ್ರಜ್ಞಾನದಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ಇರುವ ಗ್ರಾಹಕರ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ, ಸಾರ್ವಜನಿಕರಿಗೆ, ಗ್ರಾಹಕರಿಗೆ ಮಾಹಿತಿ ಒದಗಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ರಾವ್ ಬಹದ್ದೂರ್ ವೈ ಮಹಾಬಲೇಶ್ವರ ತಾಂತ್ರಿಕ ಇಂಜಿನಿಯರಿಂಗ್ ಮಹಾವಿದ್ಯಾಲಯದ ವಿಜ್ಞಾನ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ.ಶಿವಪ್ರಸಾದ.ಕೆ.ಎಂ ಅವರು “ಗ್ರಾಹಕರಿಗೋಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ಧಿ ಮತ್ತೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಜಗತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಕೃತಕ ಬುದ್ಧಿಮತ್ತೆಯು ಅವಲಂಬನೆಗೊಳ್ಳುತ್ತಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಉಪಯೋಗಿಸುವುದರಿಂದ ನಿಖರ ತೂಕದ ಜೊತೆಗೆ ನಿಗದಿತ ಸಮಯವನ್ನು ಉಳಿಸಬಹುದು ಎಂದರು.
ಹಿರಿಯ ವಕೀಲ ಎನ್.ಪ್ರಕಾಶ್ ಅವರು, “ಪ್ರಸ್ತುತ ದಿನಗಳಲ್ಲಿ ಗ್ರಾಹಕರ ಹಕ್ಕುಗಳ ಹಾಗೂ ಜವಾಬ್ದಾರಿಗಳು” ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಸುರಕ್ಷಿತ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಕೊಂಡುಕೊಳ್ಳುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕುಗಳ ಕುರಿತು ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಗ್ರಾಹಕರ ಕುಂದು ಕೊರತೆಯ ಸಮಸ್ಯೆಗಳನ್ನು ನಿಖರವಾದ ಮಾಹಿತಿಯೊಂದಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ಕಾನೂನಾತ್ಮಕವಾಗಿ ಪರಿಹಾರ ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಮಾರ್ಲಾ ಶಶಿಕಲಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ, ಹಿರಿಯ ವಕೀಲರಾದ ಅಂಕಲಯ್ಯ, ಶ್ರೀಮೇದಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ರಾಮಕಿರಣ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಅಮೃತಾ.ಪಿ.ಚವ್ಹಾಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಸಕೀನಾ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನ್ಯಾಯಬೆಲೆ ಅಂಗಡಿಯ ಮಾಲೀಕರು ಹಾಗೂ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ತೂಕ ಮತ್ತು ಅಳತೆ ಕುರಿತ ವಂಚನೆಯ ಜಾಗೃತಿ ಅರಿವು ಮೂಡಿಸಲಾಯಿತು.




