ಬಳ್ಳಾರಿ ಆಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ

2 years ago

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿಕೆ

ಬಳ್ಳಾರಿ: ಜಿಲ್ಲೆಯಲ್ಲಿ ಕೆಎಂಇಆರ್ಸಿ ಅನುದಾನದಲ್ಲಿ ರೂ.20 ಕೋಟಿ ಹೆಚ್ಚಿನ ವೆಚ್ಚದಲ್ಲಿ ಬಳ್ಳಾರಿ ಆಗ್ರೋ ಪ್ರೊಸೆಸ್ಸಿಂಗ್ ಕ್ಲಸ್ಟರ್ (ಬಿಎಪಿಸಿ) ನಿರ್ಮಾಣಕ್ಕೆ ರಾಜ್ಯ ಗಣಿ-ಪರಿಸರ ಪುನಶ್ಚೇತನ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ, ಭಾರತೀಯ ಸಂಬಾರು ಮಂಡಳಿ ಕೊಚ್ಚಿನ್ ಹಾಗೂ ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಹೋಟೆಲ್ ರಾಯಲ್ ಪೋರ್ಟ್ನಲ್ಲಿ ಏರ್ಪಡಿಸಲಾಗಿದ್ದ ಸಂಬಾರ ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯು ಮೆಣಸಿನಕಾಯಿ ಬೆಳೆಗೆ ಹೆಸರುವಾಸಿಯಾಗಿದೆ. ನಮ್ಮ ಭಾಗದ ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯ ಬಹುದಿನದ ಬೇಡಿಕೆಯಾಗಿದ್ದ ಬಿಎಪಿಸಿ (ಬಳ್ಳಾರಿ ಆಗ್ರೋ ಪ್ರೊಸೆಸಿಂಗ್ ಕ್ಲಸ್ಟರ್) ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದರು.

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಖರೀದಿದಾರರ ಮತ್ತು ಮಾರಾಟಗಾರರ ಸಹಕಾರ ಅಗತ್ಯವಿದೆ ಎಂದರು.

ಕೇರಳದ ಕೊಚ್ಚಿನ್ನ ಭಾರತೀಯ ಸಂಬಾರು ಮಂಡಳಿಯ (ಅಭಿವೃದ್ಧಿ) ನಿರ್ದೇಶಕ ಧರ್ಮೇಂದರ್ ದಾಸ್ ಮಾತನಾಡಿ, ಕರ್ನಾಟಕ ರಾಜ್ಯ ಮಸಾಲೆ ಪದಾರ್ಥಗಳ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರಫ್ತುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಕರ್ನಾಟಕ ರಾಜ್ಯ ಮೆಣಸಿನಕಾಯಿ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ ಮತ್ತು ಭಾರತದ ಮಸಾಲೆ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದರು.

ಭಾರತ ನಾನಾ ಮಸಾಲೆಗಳ ತವರು ಭೂಮಿಗೆ ಹೆಸರುವಾಸಿಯಾಗಿದೆ. 2022-23ರ ಅವಧಿಯಲ್ಲಿ ಭಾರತ 14 ಲಕ್ಷ ಮೆಟ್ರಿಕ್ ಟನ್ ಮಸಾಲೆ ಹಾಗೂ ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡಿದೆ. 2030 ರ ವೇಳೆಗೆ 10 ಶತಕೋಟಿ ಡಾಲರ್ಗಳನ್ನು ಸಾಧಿಸಲು ಭಾರತ ದೇಶವು ಮಸಾಲೆ ರಫ್ತು ಗುರಿ ಹೊಂದಿದೆ. ಅದೇರೀತಿಯಾಗಿ ದೇಶದಿಂದ ಮಸಾಲೆಗಳ ರಫ್ತು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮಾವೇಶಗಳ ಮೂಲಕ ಪರಿಚಯಿಸುತ್ತಿದೆ. ಖರೀದಿದಾರರು ಮತ್ತು ಮಾರಾಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಸಂಬಾರು ಮಂಡಳಿಯು ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಮತ್ತು ಅವರ ಕೃಷಿ ಉತ್ಪನ್ನಗಳ ಗರಿಷ್ಠ ಬೆಲೆಯನ್ನು ಪಡೆಯಲು ಖರೀದಿದಾರರೊಂದಿಗೆ ನೇರವಾಗಿ ವ್ಯಾಪಾರ ಸಂಪರ್ಕ ರಚಿಸುವ ಮೂಲಕ ರಫ್ತುಗಳನ್ನು ಬೆಂಬಲಿಸಲು ಸಾಮಾನ್ಯ ವೇದಿಕೆಯನ್ನೂ ಕಲ್ಪಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹೊರತಂದ “ಮೆಣಸಿನಕಾಯಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು”ಎಂಬ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಂತರದಲ್ಲಿ ಸಾಂಬಾರು ಪದಾರ್ಥಗಳ ಖರೀದಿದಾರ ಮತ್ತು ಮಾರಾಟಗಾರರ ಸಮಾವೇಶ ನಡೆಯಿತು. ಸಮಾವೇಶದಲ್ಲಿ ನಾನಾ ತಳಿಗಳ ಮೆಣಸಿನಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಯ ಪದಾರ್ಥಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎನ್.ಎಂ.ಯಶವಂತ್ ರಾಜ್, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಆಚಾರಿ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿ.ಜಿ.ಯಾದವ್, ಭಾರತೀಯ ಸಂಬಾರು ಮಂಡಳಿಯ (ಮಾರುಕಟ್ಟೆ) ಉಪನಿರ್ದೇಶಕ ಎಂ.ಮಣಿಕಂದನ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಇಲಾಖೆಯ ವಿಶ್ವೇಶ್ವರಯ್ಯ ಟ್ರೇಡ್ ಪ್ರ್ರಮೋಶನ್ ಸೆಂಟರ್ನ ಉಪನಿರ್ದೇಶಕ ಮನಸೂರ, ಸಕಲೇಶಪುರ ಭಾರತೀಯ ಸಂಬಾರು ಮಂಡಳಿಯ ಉಪನಿರ್ದೇಶಕ ಎಂ.ವೈ.ಹೊನ್ನುರ, ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್, ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ (ಅಭಿವೃದ್ಧಿ ಸಂಸ್ಕರಣೆ ಮತ್ತು ಹೆಚ್ಆರ್ಡಿ) ಪ್ರಧಾನ ವ್ಯವಸ್ಥಾಪಕ ಸಿದ್ಧರಾಮಯ್ಯ ಎಂ.ಬರಗಿಮಠ, ಜಿಪಂ ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎನ್.ಕೆಂಗೇಗೌಡ, ಜಿಲ್ಲಾ ಕೈಗಾರಿಕಾ ಮತ್ತು ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಸೇರಿದಂತೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹುಬ್ಬಳ್ಳಿಯ ಆಡಳಿತ ಮಂಡಳಿಯ ಸರ್ವ ಸದಸ್ಯರು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply