ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು: ಸಿದ್ದರಾಮಯ್ಯ

1 year ago

ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು: ಸಿ.ಎಂ.ಸೂಚನೆ

ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ, ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಇದಕ್ಕೆ ಪರಸ್ಪರ ಹೊಂದಾಣಿಕೆಯಿಂದ ಮೂರೂ ಇಲಾಖೆಗಳು ಕಾರ್ಯ ನಿರ್ವಹಿಸಿ: ಸಿ.ಎಂ.ಸ್ಪಷ್ಟ ಸೂಚನೆ

ನಿಯಮ ಪಾಲಿಸದ,  ರೆವಿನ್ಯೂ ಬಡಾವಣೆಗಳಿಗೆ ಬ್ರೇಕ್ ಹಾಕುವ ಅತ್ಯಗತ್ಯವಿದೆ: ಸಭೆಯಲ್ಲಿ ನಿರ್ಣಯ

ಒಂದೇ ಸೈಟನ್ನು ಹಲವರಿಗೆ ಮಾರುವ ವಂಚನೆಗೆ ಸಂಪೂರ್ಣ ಬ್ರೇಕ್ ಹಾಕಲೇಬೇಕು: ಸಿ.ಎಂ ಕಡಕ್ ಸೂಚನೆ

ನಕಲಿ ದಾಖಲೆಗಳ ಪರಿಶೀಲಿಸದೆ ಆಸ್ತಿ ನೋಂದಣಿ: ಸಿ.ಎಂ.ಆಕ್ರೋಶ

ಕೆಲವು ಅಧಿಕಾರಿಗಳೂ ಇದರ ಪರವಾಗಿದ್ದಾರೆ. ಇದೆಲ್ಲಕ್ಕೂ ಕಡಿವಾಣ ಅಗತ್ಯ: ಸಿ.ಎಂ

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಇತರೆ ಮುಖ್ಯಾಂಶಗಳು ಹಾಗೂ ಮುಖ್ಯಮಂತ್ರಿ ಅವರು ನೀಡಿದ ಸೂಚನೆಗಳು:

• ಬಿಬಿಎಂಪಿಯಲ್ಲಿ ಸುಮಾರು 15 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿರುವುದಿಲ್ಲ. ಇದರಿಂದ ತೆರಿಗೆಯೂ ಕಟ್ಟದ ಕಾರಣ ಸಾವಿರಾರು ಕೋಟಿ ರೂ. ತೆರಿಗೆ ಪ್ರತೀ ವರ್ಷ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ.

• ಸ್ಥಳೀಯ ಸಂಸ್ಥೆಗಳಲ್ಲಿ ಅಂದಾಜು 30 ಲಕ್ಷ ಆಸ್ತಿಗಳಿಗೆ ಖಾತೆಗಳು ಇರುವುದಿಲ್ಲ‌,

• ಗ್ರಾಮ ಪಂಚಾಯತ್‌ಗಳಲ್ಲಿ ಅಂದಾಜು 90 ಲಕ್ಷ ಆಸ್ತಿಗಳು ಖಾತಾ ದಾಖಲೆಗಳನ್ನು ಹೊಂದಿರುವುದಿಲ್ಲ.

• ಖಾತೆಯಿಲ್ಲದೆ, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಇದು  ಸ್ಥಳೀಯ ಸಂಸ್ಥೆಗಳು ಮತ್ತು ನೋಂದಣಿ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.

• ಸ್ಥಳೀಯ ಸಂಸ್ಥೆಗಳು ಖಾತಾ ನೀಡಿರುವ ಆಸ್ತಿಗಳನ್ನು ಮಾತ್ರ ನೋಂದಣಿ ಇಲಾಖೆಯಡಿ ನೋಂದಣಿ ಮಾಡಬೇಕು. ಸ್ಥಳೀಯ ಸಂಸ್ಥೆಗಳು ನೀಡಿರುವ  ಖಾತಾ ದಾಖಲೆಗಳ ಡಾಟಾಬೇಸ್‌ ಕಂಪ್ಯೂಟರ್‌ನಲ್ಲಿ ಇರಬೇಕು. ಈ ಡಾಟಾ ಬೇಸ್‌ ಆಧರಿಸಿ ನೋಂದಣಿ ಪ್ರಕ್ರಿಯೆ ಮಾಡಬೇಕು.

• ನೋಂದಣಿ ಪ್ರಕ್ರಿಯೆ ಇಂಟಿಗ್ರೇಷನ್‌ ಆದ ಮೇಲೆ ಅಕ್ರಮಗಳ ಮೇಲೆ ಕಡಿವಾಣ ಸಾಧ್ಯವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒನ್ ಟೈಮ್‌ ಪರಿಹಾರ ನೀಡುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.

• ಬಿಬಿಎಂಪಿಯಲ್ಲಿ ವ್ಯಾಪ್ತಿಯಲ್ಲಿ ಖಾತಾ ನೀಡಿರುವುದನ್ನು ಡಾಟಾ ಬೇಸ್‌ನಲ್ಲಿ ಹಾಕಬೇಕು. ಇದರಿಂದ ಖಾತೆ ಆದ ಆಸ್ತಿಗಳನ್ನು ಮಾತ್ರ ನೋಂದಣಿ ಮಾಡಬಹುದು. ಕಾಗದ ದಾಖಲೆಗಳ ಆಧಾರದಲ್ಲಿ ಯಾವುದೇ ಕಾರಣಕ್ಕೂ ನೋಂದಣಿಗೆ ಪರಿಗಣಿಸಬಾರದು.

• ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಭಿಯಾನದ ಮಾದರಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ನಡೆಸಲು ಸೂಚನೆ. ಫೆಬ್ರವರಿ 10ರ ಒಳಗಾಗಿ ನಿಗದಿತ ಅವಧಿಯಲ್ಲಿ ಖಾತಾ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

• ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳ ಡಿಜಿಟೈಸ್‌ ಮಾಡಲಾಗಿದೆ. ಈಗಾಗಲೇ 15 ಲಕ್ಷ ಖಾತೆಗಳನ್ನು ಡೌನ್‌ಲೋಡ್‌ ಮಾಡಲಾಗಿದೆ.

• ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳ ನಕಲಿ ಖಾತೆಗಳನ್ನು ಸೃಜಿಸಿ ವಂಚನೆಯಿಂದ ಹೆಚ್ಚು ದಸ್ತಾವೇಜುಗಳ ನೋಂದಣಿ ಮಾಡುವ ಪ್ರಕ್ರಿಯೆಗೆ ಸಂಪೂರ್ಣ ಕಡಿವಾಣ ಹಾಕಬೇಕು.

• ಇನ್ನು ಮುಂದೆ ಕಂದಾಯ ಜಮೀನಿನಲ್ಲಿ ಲೇಔಟ್‌ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಇದನ್ನು  ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ಇರುವ ಅಂತಹ ಲೇಔಟ್‌ಗಳ ಕುರಿತು ಸೂಕ್ತ ಕ್ರಮ‌ ಕೈಗೊಳ್ಳಬೇಕು.

• ನಿವೇಶನಗಳಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳಾಗಿ ಪರಿಗಣಿಸುವ ಕುರಿತು ಕ್ರಮ ಪರಿಶೀಲಿಸಬೇಕು.

• ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು  ಇನ್ನಷ್ಟು ಸರಳೀಕರಣಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ.

• ಈ ವರ್ಷ ಡಿಸೆಂಬರ್‌ ಕೊನೆಗೆ ರೂ.16,993 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ.

• ಕಂದಾಯ ಇಲಾಖೆಯಲ್ಲಿ ಸರ್ವೇ ನಂಬರ್‌ಗಳಲ್ಲಿ ನಿರ್ಮಿಸಿದ ಅನಧಿಕೃತ ಬಡಾವಣೆಗಳು/ನಿವೇಶನಗಳ ದತ್ತಾಂಶ ಮಾಹಿತಿ ಇದ್ದು, ಸದರಿ ಮಾಹಿತಿಯನ್ನು ಆಧರಿಸಿ ಒಂದೇ ಯೋಜನೆಯಲ್ಲಿ ಸದರಿ ಸ್ವತ್ತುಗಳಿಗೆ ಖಾತಾ ದಾಖಲೆಗಳನ್ನು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು.

• ಗ್ರಾಮ ಪಂಚಾಯತ್‌ಗಳಲ್ಲಿ 44 ಲಕ್ಷ ಆಸ್ತಿಗಳಿಗೆ ಮಾತ್ರ ಖಾತೆಯಿದೆ. ಇದರಿಂದ 800 ಕೋಟಿ ರೂ. ಆದಾಯ ಪ್ರತಿ ವರ್ಷ ಬರುತ್ತಿದೆ. ಆದರೆ ಸುಮಾರು 96 ಲಕ್ಷ ಆಸ್ತಿಗಳಿಗೆ ಇನ್ನೂ ಈ ಖಾತಾ ಇರುವುದಿಲ್ಲ. ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಖಾತೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಕುರಿತು ಕ್ರಮ.

Leave a Reply