ಹಣಕಾಸು ವಿಷಯಗಳ ಬಗ್ಗೆ ಪ್ರಕ್ರಿಯೆ

8 months ago

112. ವಾರ್ಷಿಕ ಹಣಕಾಸು ವಿವರ ಪತ್ರ:- (1) ರಾಷ್ಟ್ರಪತಿಯು, ಪ್ರತಿ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಅಂದಾಜು ಜಮೆಗಳ ಮತ್ತು ವೆಚ್ಚದ ವಿವರಣೆಯನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಇಡುವಂತೆ ಮಾಡತಕ್ಕದ್ದು; ಈ ಭಾಗದಲ್ಲಿ ಅದನ್ನು “ವಾರ್ಷಿಕ ಹಣಕಾಸು ವಿವರಪತ್ರ” ಎಂದು ಉಲ್ಲೇಖಿಸಲಾಗಿದೆ. (2) ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ಅಡಕವಾಗಿರುವ ವೆಚ್ಚದ ಅಂದಾಜುಗಳಲ್ಲಿ,- (ಎ) ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚವೆಂದು ಈ ಸಂವಿಧಾನದಲ್ಲಿ ವಿವರಿಸಿರುವ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು; ಮತ್ತು (ಬಿ) ಭಾರತದ ಸಂಚಿತ ನಿಧಿಯಿಂದ ಖರ್ಚು ಮಾಡಬೇಕೆಂದು ಉದ್ದೇಶಿಸಿರುವ ಇತರ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು ಮತ್ತು ರಾಜಸ್ವ ಲೆಕ್ಕಕ್ಕೆ ಖರ್ಚು ಬೀಳುವ ವೆಚ್ಚವನ್ನು ಇತರ ವೆಚ್ಚದಿಂದ ಪ್ರತ್ಯೇಕಿಸಿ ತೋರಿಸತಕ್ಕದ್ದು. (3) ಈ ಕೆಳಕಂಡ ವೆಚ್ಚವು ಭಾರತದ ಸಂಚಿತ ನಿಧಿಗೆ ಖರ್ಚು ಹಾಕಿದ ವೆಚ್ಚವಾಗಿರತಕ್ಕದ್ದು:- (ಎ) ರಾಷ್ಟ್ರಪತಿಯ ಉಪಲಬ್ಧಿಗಳು ಮತ್ತು ಭತ್ಯೆಗಳು ಹಾಗೂ ಅವನ ಪದಕ್ಕೆ ಸಂಬಂಧಪಟ್ಟ ಇತರ ವೆಚ್ಚ; (ಬಿ) ರಾಜ್ಯಸಭೆಯ ಸಭಾಪತಿಯ ಮತ್ತು ಉಪಸಭಾಪತಿಯ ಹಾಗೂ ಲೋಕಸಭೆಯ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಸಂಬಳಗಳು ಮತ್ತು ಭತ್ಯೆಗಳು; (ಸಿ) ಬಡ್ಡಿ, ಸಾಲ ತೀರುವೆ ನಿಧಿಯ ಭಾರಗಳು ಮತ್ತು ಋಣ ವಿಮೋಚನೆ ಭಾರಗಳೂ ಸೇರಿದಂತೆ ಭಾರತ ಸರ್ಕಾರವು ಹೊಣೆಯಾಗಿರುವ ಋಣಭಾರಗಳು ಮತ್ತು ಸಾಲಗಳನ್ನು ಎತ್ತುವುದಕ್ಕೆ ಮತ್ತು ಋಣ ತೀರಿಕೆ ಸೇವೆಗೆ ಮತ್ತು ಋಣವಿಮೋಚನೆಗೆ ಸಂಬಂಧಪಟ್ಟ ಇತರ ವೆಚ್ಚ: (ಡಿ) (i) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಸಂಬಳಗಳು, ಭತ್ಯೆಗಳು ಮತ್ತು ನಿವೃತ್ತಿ ವೇತನಗಳು; (ii) ಫೆಡರಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ನಿವೃತ್ತಿ ವೇತನಗಳು; (iii) ಭಾರತದ ರಾಜ್ಯಕ್ಷೇತ್ರದಲ್ಲಿ ಒಳಗೊಂಡಿರುವ ಯಾವುದೇ ಪ್ರದೇಶದ ಸಂಬಂಧದಲ್ಲಿ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುತ್ತಿರುವ ಅಥವಾ [ಡೊಮಿನಿಯನ್ ಆಫ್ ಇಂಡಿಯಾದ ಗವರ್ನರನ ಪ್ರಾಂತದಲ್ಲಿ] (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೇ ಪ್ರಕರಣದ ಮೂಲಕ ಹಾಗೂ ಅನುಸೂಚಿಯ ಮೇರೆಗೆ, “ಮೊದಲನೆಯ ಅನುಸೂಚಿಯ (ಎ) ಭಾಗದಲ್ಲಿ ನಿರ್ದಿಷ್ಟಪಡಿಸಿರುವ ಒಂದು ರಾಜ್ಯದ ಸಂವಾದಿ ಪ್ರಾಂತ” ಎಂಬುದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.)  ಒಳಗೊಂಡಿರುವ ಯಾವುದೇ ಪ್ರದೇಶದ ಸಂಬಂಧದಲ್ಲಿ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಯಾವುದೇ ಕಾಲದಲ್ಲಿ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುತ್ತಿದ್ದ ಯಾವುದೇ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ನಿವೃತ್ತಿವೇತನಗಳು; (ಇ) ಭಾರತದ ಲೆಕ್ಕನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕನಿಗೆ ಅಥವಾ ಅವನಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಸಂಬಳ, ಭತ್ಯೆಗಳು ಮತ್ತು ನಿವೃತ್ತಿವೇತನ; (ಎಫ್) ಯಾವುದೇ ನ್ಯಾಯಾಲಯದ ಅಥವಾ ಮಧ್ಯಸ್ಥಗಾರಿಕೆ ನ್ಯಾಯಾಧಿಕರಣದ ಯಾವುದೇ ತೀರ್ಪು, ಡಿಕ್ರಿ ಅಥವಾ ಐತೀರ್ಪು ಇವುಗಳ ಮೇರೆಗೆ ಸಂದಾಯ ಮಾಡಲೇಬೇಕಾದ ಯಾವುದೇ ಮೊಬಲಗುಗಳು; (ಜಿ) ಹಾಗೆ ಹೊರಿಸತಕ್ಕದ್ದೆಂದು ಈ ಸಂವಿಧಾನದ ಮೂಲಕ ಅಥವಾ ಸಂಸತ್ತು ಕಾನೂನಿನ ಮೂಲಕ ಘೋಷಿಸಿದ ಇತರ ಯಾವುದೇ ವೆಚ್ಚ.

113. ಅಂದಾಜುಗಳಿಗೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ಪ್ರಕ್ರಿಯೆ:- (1) ಅಂದಾಜುಗಳಲ್ಲಿ ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ ವೆಚ್ಚಕ್ಕೆ ಸಂಬಂಧಿಸಿದ ಅಂದಾಜುಗಳನ್ನು ಸಂಸತ್ತಿಗೆ ಮತಕ್ಕಾಗಿ ಒಪ್ಪಿಸತಕ್ಕದ್ದಲ್ಲ; ಆದರೆ, ಈ ಖಂಡದಲ್ಲಿ ಇರುವುದು ಯಾವುದೂ, ಅಂಥ ಅಂದಾಜುಗಳ ಪೈಕಿ ಯಾವುದೇ ಅಂದಾಜನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಚರ್ಚಿಸುವುದಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಅರ್ಥೈಸತಕ್ಕದ್ದಲ್ಲ. (2) ಸದರಿ ಅಂದಾಜುಗಳಲ್ಲಿ ಇತರ ವೆಚ್ಚಕ್ಕೆ ಸಂಬಂಧಿಸಿದ ಅಂದಾಜುಗಳನ್ನು ಅನುದಾನಗಳಿಗಾಗಿ ಬೇಡಿಕೆಯ ರೂಪದಲ್ಲಿ ಲೋಕಸಭೆಗೆ ಒಪ್ಪಿಸತಕ್ಕದ್ದು ಮತ್ತು ಲೋಕಸಭೆಯು ಯಾವುದೇ ಬೇಡಿಕೆಗೆ ಅನುಮತಿಯನ್ನು ಕೊಡಲು ಅಥವಾ ಅನುಮತಿಯನ್ನು ನಿರಾಕರಿಸಲು ಅಥವಾ ಅನುದಾನಗಳ ಬೇಡಿಕೆಯಲ್ಲಿ ನಿರ್ದಿಷ್ಟಪಡಿಸಿದ ಮೊಬಲಗನ್ನು ಕಡಿಮೆ ಮಾಡುವುದಕ್ಕೆ ಒಳಪಟ್ಟು, ಯಾವುದೇ ಬೇಡಿಕೆಗೆ ಅನುಮತಿಯನ್ನು ಕೊಡಲು ಅಧಿಕಾರವನ್ನು ಹೊಂದಿರತಕ್ಕದ್ದು. (3) ಅನುದಾನಕ್ಕೆ ಸಂಬಂಧಿಸಿದ ಯಾವುದೇ ಬೇಡಿಕೆಯನ್ನು ರಾಷ್ಟ್ರಪತಿಯ ಶಿಫಾರಸ್ಸಿನ ಹೊರತು ಮಂಡಿಸತಕ್ಕದ್ದಲ್ಲ.

114. ಧನ ವಿನಿಯೋಗ ವಿಧೇಯಕಗಳು:- (1) 113ನೆಯ ಅನುಚ್ಛೇದದ ಮೇರೆಗೆ ಲೋಕಸಭೆಯು ಅನುದಾನಗಳಿಗೆ ಒಪ್ಪಿಗೆ ಕೊಟ್ಟ ತರುವಾಯ ಆದಷ್ಟು ಬೇಗನೆ, – (ಎ) ಲೋಕಸಭೆಯು ಆ ರೀತಿ ಒಪ್ಪಿಗೆ ಕೊಟ್ಟ ಅನುದಾನಗಳನ್ನು; ಮತ್ತು (ಬಿ) ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾದ, ಖರ್ಚುಹಾಕಲಾದ ಆದರೆ ಸಂಸತ್ತಿನ ಮುಂದೆ ಈ ಹಿಂದೆ ಇಡಲಾಗಿದ್ದ ವಾರ್ಷಿಕ ಹಣಕಾಸು ವಿವರ ಪತ್ರದಲ್ಲಿ ತೋರಿಸಿದ್ದ ಮೊಬಲಗಿಗೆ ಯಾವುದೇ ಸಂದರ್ಭದಲ್ಲಿ ಮೀರದಷ್ಟು ವೆಚ್ಚವನ್ನು ಭರಿಸಲು ಅಗತ್ಯವಾದ ಎಲ್ಲ ಹಣವನ್ನು ಭಾರತದ ಸಂಚಿತ ನಿಧಿಯಿಂದ ವಿನಿಯೋಗಿಸುವುದಕ್ಕೆ ಉಪಬಂಧಿಸುವ ವಿಧೇಯಕವನ್ನು ಮಂಡಿಸತಕ್ಕದ್ದು. (2) ಹಾಗೆ ಒಪ್ಪಿಗೆ ಕೊಡಲಾದ ಯಾವುದೇ ಅನುದಾನದ ಮೊಬಲಗನ್ನು ವ್ಯತ್ಯಸ್ತಗೊಳಿಸುವ ಅಥವಾ ಅದರ ಗೊತ್ತುಗುರಿಯನ್ನು ಬದಲಾಯಿಸುವ ಅಥವಾ ಭಾರತದ ಸಂಚಿತ ನಿಧಿಯ ಮೇಲೆ ಹೊರಿಸಲಾಗುವ ಯಾವುದೇ ವೆಚ್ಚದ ಮೊಬಲಗನ್ನು ವ್ಯತ್ಯಸ್ತಗೊಳಿಸುವ ಪರಿಣಾಮವುಂಟುಮಾಡುವ ಯಾವುದೇ ತಿದ್ದುಪಡಿಯನ್ನು, ಅಂಥ ಯಾವುದೇ ವಿಧೇಯಕಕ್ಕೆ ಸಂಸತ್ತಿನ ಯಾವುದೇ ಸದನದಲ್ಲಾಗಲಿ ಸೂಚಿಸತಕ್ಕದ್ದಲ್ಲ ಮತ್ತು ಈ ಖಂಡದ ಮೇರೆಗೆ ತಿದ್ದುಪಡಿಯು ಅಂಗೀಕಾರಾರ್ಹವೇ ಹೇಗೆ ಎಂಬ ವಿಷಯದಲ್ಲಿ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು. (3) 115ನೆಯ ಮತ್ತು 116ನೆಯ ಅನುಚ್ಛೇದಗಳ ಉಪಬಂಧಗಳಿಗೊಳಪಟ್ಟು, ಭಾರತದ ಸಂಚಿತ ನಿಧಿಯಿಂದ ಯಾವುದೇ ಹಣವನ್ನು ಈ ಅನುಚ್ಛೇದದ ಉಪಬಂಧಗಳಿಗನುಸಾರ ಅಂಗೀಕೃತವಾದ ಕಾನೂನಿನ ಮೂಲಕ ಮಾಡಿದ ವಿನಿಯೋಗದ ಮೇರೆಗೆ ಹೊರತು ಇತರ ರೀತಿಯಲ್ಲಿ ಹಿಂತೆಗೆದುಕೊಳ್ಳತಕ್ಕದ್ದಲ್ಲ.

115. ಪೂರಕ, ಹೆಚ್ಚುವರಿ ಅಥವಾ ಅಧಿಕ ಅನುದಾನಗಳು:- (1) ರಾಷ್ಟ್ರಪತಿಯು, – (ಎ) 114ನೆಯ ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಮಾಡಿದ ಯಾವುದೇ ಕಾನೂನಿನ ಮೂಲಕ ಚಾಲ್ತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಸೇವೆಗೆ ವೆಚ್ಚ ಮಾಡುವುದಕ್ಕಾಗಿ ಅಧಿಕೃತಗೊಳಿಸಿದ ಮೊಬಲಗು ಆ ವರ್ಷದ ಉದ್ದೇಶಗಳಿಗೆ ಸಾಕಾಗುವುದಿಲ್ಲವೆಂದು ಕಂಡುಬಂದರೆ ಅಥವಾ ಆ ಚಾಲ್ತಿ ಹಣಕಾಸು ವರ್ಷದ ವಾರ್ಷಿಕ ಹಣಕಾಸು ವಿವರ ಪತ್ರದಲ್ಲಿ ಉದ್ದೇಶಿಸಿಲ್ಲದ ಯಾವುದೇ ಹೊಸ ಸೇವೆಯ ಸಂಬಂಧದಲ್ಲಿ ಆ ವರ್ಷದಲ್ಲಿ ಪೂರಕ ಅಥವಾ ಹೆಚ್ಚುವರಿ ವೆಚ್ಚದ ಅಗತ್ಯತೆ ಉಂಟಾದರೆ; ಅಥವಾ (ಬಿ) ಯಾವುದೇ ಸೇವೆಗಾಗಿ ಹಣಕಾಸು ವರ್ಷದಲ್ಲಿ ಆ ವರ್ಷಕ್ಕೆಂದು ಕೊಡಲಾದ ಮೊಬಲಗನ್ನು ಮೀರಿದ ಯಾವುದೇ ಹಣವು ಆ ಸೇವೆಗಾಗಿ ವೆಚ್ಚವಾಗಿದ್ದರೆ ಸಂದರ್ಭಾನುಸಾರ, ಆ ವೆಚ್ಚದ ಅಂದಾಜು ಮೊಬಲಗನ್ನು ತೋರಿಸುವ ಇನ್ನೊಂದು ವಿವರಪತ್ರವನ್ನು ಸಂಸತ್ತಿನ ಉಭಯ ಸದನಗಳ ಮುಂದೆ ಇಡುವಂತೆ ಅಥವಾ ಅಂಥ ಅಧಿಕ ಮೊಬಲಗಿಗೆ ಬೇಡಿಕೆಯನ್ನು ಲೋಕಸಭೆಯ ಮುಂದೆ ಇಡುವಂತೆ ಮಾಡತಕ್ಕದ್ದು. (2) 112, 113 ಮತ್ತು 114ನೇ ಅನುಚ್ಛೇದಗಳ ಉಪಬಂಧಗಳು ವಾರ್ಷಿಕ ಹಣಕಾಸು ವಿವರಪತ್ರದ ಮತ್ತು ಆ ವಿವರಪತ್ರದಲ್ಲಿ ನಮೂದಿಸಿರುವ ವೆಚ್ಚ ಅಥವಾ ಅನುದಾನದ ಬೇಡಿಕೆ ಮತ್ತು ಅಂಥ ವೆಚ್ಚವನ್ನು ಅಥವಾ ಅನುದಾನವನ್ನು ಭರಿಸಲು ಭಾರತದ ಸಂಚಿತ ನಿಧಿಯಿಂದ ಹಣ ವಿನಿಯೋಗಿಸುವುದನ್ನು ಅಧಿಕೃತಗೊಳಿಸಲು ಮಾಡಬೇಕಾದ ಕಾನೂನಿನ ಸಂಬಂಧದಲ್ಲಿ ಪರಿಣಾಮಕಾರಿಯಾಗಿರುವಂತೆಯೇ, ಅಂಥ ಯಾವುದೇ ವಿವರಪತ್ರದ ಮತ್ತು ವೆಚ್ಚದ ಅಥವಾ ಬೇಡಿಕೆಯ ಹಾಗೂ ಅಂಥ ಬೇಡಿಕೆಗೆ ಸಂಬಂಧಿಸಿದ ಅಂಥ ವೆಚ್ಚವನ್ನು ಅಥವಾ ಅನುದಾನವನ್ನು ಭರಿಸಲು ಭಾರತದ ಸಂಚಿತ ನಿಧಿಯಿಂದ ಹಣ ವಿನಿಯೋಗಿಸುವುದನ್ನು ಅಧಿಕೃತಗೊಳಿಸುವ ಯಾವುದೇ ಕಾನೂನಿನ ಸಂಬಂಧದಲ್ಲಿಯೂ ಪರಿಣಾಮಕಾರಿಯಾಗತಕ್ಕದ್ದು.

116. ಲೇಖಾನುದಾನಗಳು, ಪತ್ತಿನ ಅನುದಾನಗಳು ಮತ್ತು ಅಸಾಧಾರಣ ಅನುದಾನಗಳು:- (1) ಈ ಅಧ್ಯಾಯದ ಈ ಹಿಂದೆ ಹೇಳಿದ ಉಪಬಂಧಗಳಲ್ಲಿ ಏನೇ ಇದ್ದಾಗ್ಯೂ, ಲೋಕಸಭೆಯು, – (ಎ) ಯಾವುದೇ ಅನುದಾನವನ್ನು ಮತಕ್ಕೆ ಹಾಕುವ ವಿಷಯದಲ್ಲಿ 113ನೆಯ ಅನುಚ್ಛೇದದಲ್ಲಿ ನಿಯಮಿಸಿದ ಕಾರ್ಯವಿಧಾನವನ್ನು ಪೂರ್ಣಗೊಳಿಸುವವರೆಗೆ ಮತ್ತು ಆ ವೆಚ್ಚದ ಸಂಬಂಧದಲ್ಲಿ 114ನೆಯ ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಕಾನೂನನ್ನು ಅಂಗೀಕರಿಸುವವರೆಗೆ ಯಾವುದೇ ಹಣಕಾಸು ವರ್ಷದ ಭಾಗಕ್ಕೆ ಅಂದಾಜು ಮಾಡಲಾದ ವೆಚ್ಚಕ್ಕೆ ಸಂಬಂಧಿಸಿದಂತೆ ಮುಂಚಿತವಾಗಿ ಅಂಥ ಅನುದಾನಕ್ಕೆ ಒಪ್ಪಿಗೆ ಕೊಡಲು; (ಬಿ) ಸೇವೆಯು ಭಾರೀ ಪ್ರಮಾಣದ್ದಾಗಿರುವ ಅಥವಾ ಅನಿಶ್ಚಿತ ಸ್ವರೂಪದ್ದಾಗಿರುವ ಕಾರಣದಿಂದ ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ಸಾಮಾನ್ಯವಾಗಿ ಕೊಡುವ ವಿವರಗಳೊಂದಿಗೆ ಆ ಬೇಡಿಕೆಯನ್ನು ನಮೂದಿಸಲು ಆಗದೆ ಇದ್ದರೆ ಭಾರತದ ಸಂಪನ್ಮೂಲಗಳಿಂದ ಅನಿರೀಕ್ಷಿತ ಬೇಡಿಕೆಯನ್ನು ಈಡೇರಿಸಲು ಅನುದಾನಕ್ಕೆ ಒಪ್ಪಿಗೆ ಕೊಡಲು; (ಸಿ) ಯಾವುದೇ ಹಣಕಾಸು ವರ್ಷದಲ್ಲಿ ಚಾಲ್ತಿಸೇವೆಗೆ ಸೇರಿಲ್ಲದ ಅಸಾಧಾರಣ ಅನುದಾನಕ್ಕೆ ಒಪ್ಪಿಗೆ ಕೊಡಲು – ಅಧಿಕಾರವನ್ನು ಹೊಂದಿರತಕ್ಕದ್ದು ಮತ್ತು ಯಾವ ಉದ್ದೇಶಗಳಿಗಾಗಿ ಸದರಿ ಅನುದಾನಗಳಿಗೆ ಒಪ್ಪಿಗೆ ಕೊಡಲಾಗಿದೆಯೋ ಆ ಉದ್ದೇಶಗಳಿಗಾಗಿ, ಭಾರತದ ಸಂಚಿತ ನಿಧಿಯಿಂದ ಹಣವನ್ನು ತೆಗೆದುಕೊಳ್ಳುವುದನ್ನು ಕಾನೂನಿನ ಮೂಲಕ ಅಧಿಕೃತಗೊಳಿಸಲು ಸಂಸತ್ತಿಗೆ ಅಧಿಕಾರವಿರತಕ್ಕದ್ದು. (2) 113 ಮತ್ತು 114ನೆಯ ಅನುಚ್ಛೇದಗಳ ಉಪಬಂಧಗಳು ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ನಮೂದಿಸಿರುವ ಯಾವುದೇ ವೆಚ್ಚಕ್ಕೆ ಸಂಬಂಧಿಸಿದಂತೆ ಅನುದಾನಕ್ಕೆ ಒಪ್ಪಿಗೆ ಕೊಡುವ ಮತ್ತು ಅಂಥ ವೆಚ್ಚವನ್ನು ಭರಿಸಲು ಭಾರತದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದನ್ನು ಅಧಿಕೃತಗೊಳಿಸಲು ಮಾಡಬೇಕಾದ ಕಾನೂನಿನ ಸಂಬಂಧದಲ್ಲಿ ಪರಿಣಾಮಕಾರಿಯಾಗಿರುವಂತೆಯೇ (1)ನೆಯ ಖಂಡದ ಮೇರೆಗೆ ಯಾವುದೇ ಅನುದಾನಕ್ಕೆ ಒಪ್ಪಿಗೆ ಕೊಡುವ ಮತ್ತು ಆ ಖಂಡದ ಮೇರೆಗೆ ಯಾವುದೇ ಕಾನೂನನ್ನು ಮಾಡುವುದರ ಸಂಬಂಧದಲ್ಲಿಯೂ ಪರಿಣಾಮಕಾರಿಯಾಗಿರತಕ್ಕದ್ದು.

117. ಹಣಕಾಸು ವಿಧೇಯಕಗಳ ಬಗ್ಗೆ ವಿಶೇಷ ಉಪಬಂಧಗಳು:- (1) 110ನೆಯ ಅನುಚ್ಛೇದದ (1)ನೆಯ ಖಂಡದ (ಎ) ಯಿಂದ (ಎಫ್) ವರೆಗಿನ ಉಪಖಂಡಗಳಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ವಿಷಯಗಳ ಬಗ್ಗೆ ಉಪಬಂಧ ಕಲ್ಪಿಸುವ ವಿಧೇಯಕವನ್ನು ಅಥವಾ ತಿದ್ದುಪಡಿಯನ್ನು, ರಾಷ್ಟ್ರಪತಿಯ ಶಿಫಾರಸಿನ ಹೊರತು ಮಂಡಿಸತಕ್ಕದ್ದಲ್ಲ ಅಥವಾ ಸೂಚಿಸತಕ್ಕದ್ದಲ್ಲ ಮತ್ತು ಅಂಥ ಉಪಬಂಧ ಕಲ್ಪಿಸುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸತಕ್ಕದ್ದಲ್ಲ; ಪರಂತು, ಯಾವುದೇ ತೆರಿಗೆಯನ್ನು ಕಡಿಮೆ ಮಾಡುವುದಕ್ಕೆ ಅಥವಾ ರದ್ದು ಮಾಡುವುದಕ್ಕೆ ಉಪಬಂಧ ಕಲ್ಪಿಸುವ ತಿದ್ದುಪಡಿಯನ್ನು ಮಂಡಿಸುವುದಕ್ಕಾಗಿ ಈ ಖಂಡದ ಮೇರೆಗೆ ಯಾವುದೇ ಶಿಫಾರಸಿನ ಅಗತ್ಯವಿರತಕ್ಕದ್ದಲ್ಲ.  (2) ಒಂದು ವಿಧೇಯಕವು ಅಥವಾ ತಿದ್ದುಪಡಿಯು, ಜುಲ್ಮಾನೆಗಳನ್ನು ಅಥವಾ ಇತರ ಆರ್ಥಿಕ ದಂಡಗಳನ್ನು ವಿಧಿಸುವುದಕ್ಕೆ ಅಥವಾ ಲೈಸೆನ್ಸುಗಳಿಗೆ ಅಥವಾ ಸಲ್ಲಿಸಿದ ಸೇವೆಗಳಿಗೆ ಫೀಜನ್ನು ಕೇಳುವುದಕ್ಕೆ ಅಥವಾ ಸಂದಾಯ ಮಾಡುವುದಕ್ಕೆ ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣ ಮಾತ್ರದಿಂದ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರವು ಅಥವಾ ನಿಕಾಯವು ಸ್ಥಳೀಯ ಉದ್ದೇಶಗಳಿಗಾಗಿ ಯಾವುದೇ ತೆರಿಗೆಯನ್ನು ವಿಧಿಸುವುದಕ್ಕೆ ರದ್ದು ಮಾಡುವುದಕ್ಕೆ, ಮಾಫಿ ಮಾಡುವುದಕ್ಕೆ, ಬದಲಾವಣೆ ಮಾಡುವುದಕ್ಕೆ ಅಥವಾ ವಿನಿಯಮಗೊಳಿಸುವುದಕ್ಕೆ ಅದು ಉಪಬಂಧ ಕಲ್ಪಿಸುತ್ತದೆ ಎಂಬ ಕಾರಣದಿಂದ ಆ ವಿಧೇಯಕವು ಅಥವಾ ತಿದ್ದುಪಡಿಯು ಹಿಂದೆ ಹೇಳಿದ ಯಾವುದೇ ವಿಷಯಗಳಿಗೆ ಉಪಬಂಧ ಕಲ್ಪಿಸುತ್ತದೆ ಎಂದು ಭಾವಿಸತಕ್ಕದ್ದಲ್ಲ. (3) ಯಾವ ವಿಧೇಯಕವನ್ನು ಅಧಿನಿಯಮಿತಗೊಳಿಸಿ ಜಾರಿಗೆ ತಂದರೆ, ಭಾರತದ ಸಂಚಿತ ನಿಧಿಯಿಂದ ಹಣವನ್ನು ವೆಚ್ಚ ಮಾಡಬೇಕಾಗಿ ಬರುವುದೋ ಆ ವಿಧೇಯಕವನ್ನು ಸಂಸತ್ತಿನ ಯಾವುದೇ ಸದನವು ಪರ್ಯಾಲೋಚಿಸಬೇಕೆಂದು ರಾಷ್ಟ್ರಪತಿಯು ಆ ಸದನಕ್ಕೆ ಶಿಫಾರಸ್ಸು ಮಾಡಿದ ಹೊರತು, ಆ ವಿಧೇಯಕವನ್ನು ಆ ಸದನವು ಅಂಗೀಕರಿಸತಕ್ಕದ್ದಲ್ಲ.Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 44 46

Leave a Reply