ಈ ಸ್ವತ್ತು ತಂತ್ರಾಂಶದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ ಸೇವೆ ರದ್ದುಪಡಿಸಲು ಪ್ರಿಯಾಂಕ್ ಖರ್ಗೆ ಸೂಚನೆ

2 years ago

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ನೀಡಲಾಗುತ್ತಿರುವ ಈ ಸ್ವತ್ತು ತಂತ್ರಾಂಶದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರದ ಸೇವೆ ರದ್ದುಪಡಿಸಲು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ನೂತನ ತಂತ್ರಜ್ಞಾನ ಅಳವಡಿಸಿ ಈ ಸ್ವತ್ತು ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದರಿಂದ ಈ ಸ್ವತ್ತು ವಿತರಣೆ ಕಾರ್ಯ ಮತ್ತೆ ಕೆಲವು ದಿನಗಳ ಕಾಲ ವಿಳಂಬವಾಗುವ ಸಾಧ್ಯತೆಗಳಿವೆ.

ಗ್ರಾಮ ಪಂಚಾಯತಿಗಳು ವಿತರಿಸುತ್ತಿರುವ ಇ-ಸ್ವತ್ತು ದಾಖಲೆ ಪಡೆಯುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸಭೆ ನಂತರ ಸುದ್ದಿಗಾರರಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಆಸ್ತಿಗಳ ಈ ಸ್ವತ್ತು ದಾಖಲೆ ಪತ್ರ ನೀಡುವ ವಿಷಯಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಅಳವಡಿಸಿರುವ ಕೇಂದ್ರ ಸರ್ಕಾರದ ಎನ್.ಐ.ಸಿ ಸೇವೆಯನ್ನು ರದ್ದುಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು.

ಗ್ರಾಮೀಣ ರೈತರ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕಿದ್ದ ಇ-ಸ್ವತ್ತು ಕಾರ್ಯಕ್ರಮ ಕಳೆದ ಎಂಟು ತಿಂಗಳಿಂದ ಒಂದಲ್ಲ ಒಂದು ಕಾರಣಕ್ಕೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ವಿಳಂಬವಿಲ್ಲದೆ ಹಾಗೂ ಭ್ರಷ್ಟಾಚಾರರಹಿತವಾಗಿ ಇ-ಸ್ವತ್ತು ದಾಖಲೆಗಳನ್ನು ನೀಡುವಂತೆ ಮಾರ್ಪಾಡುಗಳನ್ನು ತರಬೇಕು ಎಂದು ತಾಕೀತು ಮಾಡಿರುವುದಾಗಿ ಹೇಳಿದರು. 

ತಂತ್ರಜ್ಞಾನ ಕೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಕೇಂದ್ರ ಸರ್ಕಾರದ ಎನ್.ಐ.ಸಿ ಸಂಸ್ಥೆ ತಂತ್ರಜ್ಞಾನ ಅಳವಡಿಕೆಯಲ್ಲಿ ಇನ್ನೂ ಬಹಳಷ್ಟು ಹಿಂದೆ ಇದೆ. ಇದರಿಂದ ನಮ್ಮ ಗ್ರಾಮೀಣ ರೈತರು ತೊಂದರೆಗೊಳಗಾಗಿದ್ದಾರೆ ಎಂದರು.

ಇ-ಸ್ವತ್ತು ನೀಡಿಕೆಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಮತ್ತಿತರ ಕಾರಣಗಳು ಇಡೀ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬದಲಾವಣೆಗೆ ತೀರ್ಮಾನಿಸಲಾಗಿದೆ ಎಂದರು.

Leave a Reply