ನೆಟ್ ಇಲ್ಲದೆ ಕೆಲಸ ನಿರ್ವಹಿಸುವ ಕಂಪ್ಯೂಟರ್ ಅಭಿವೃದ್ಧಿಪಡಿಸಿದ ಕಿಯೋನಿಕ್ಸ್

7 months ago

ಬೆಂಗಳೂರು: ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ ಕೆಲಸ ಮಾಡುವಂತೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅತ್ಯಂತ ಪುಟ್ಟ ಕಂಪ್ಯೂಟರ್ ಒಂದನ್ನು ರಾಜ್ಯ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಕಿಯೋನಿಕ್ಸ್ ಅಭಿವೃದ್ಧಿಪಡಿಸಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ‌ ಸಹಯೋಗದಲ್ಲಿ ವಿನ್ಯಾಸ ರೂಪಿಸಿ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಒಳಗೊಂಡ ಪುಟ್ಟ ಗಾತ್ರದ ಮತ್ತು ಅಗ್ಗದ ವೈಯಕ್ತಿಕ ಕಂಪ್ಯೂಟರ್‌ ಇದಾಗಿದೆ.

ಇದು ರಾಜ್ಯದಲ್ಲಿನ ಡಿಜಿಟಲ್‌ ಲಭ್ಯತೆಯ ಅಂತರವನ್ನು ನಿವಾರಿಸುವ ಗುರಿ ಹೊಂದಿದೆ. ಸ್ಮಾರ್ಟ್‌ ಫೋನ್‌ಗಳ ಬಳಕೆ ವ್ಯಾಪಕವಾಗಿದ್ದರೂ,  ಶೈಕ್ಷಣಿಕ ಉದ್ದೇಶ, ಕೋಡಿಂಗ್, ಆನ್‌ಲೈನ್ ತರಗತಿಗಳು ಮತ್ತು ಹೈಬ್ರಿಡ್ ಕಲಿಕೆಗೆ ಕಂಪ್ಯೂಟರ್‌ಗಳು ಅಗತ್ಯ ಎಂಬುದನ್ನು ಅಧ್ಯಯನಗಳು ತಿಳಿಸಿವೆ.

ಸೂಕ್ತ  ಸಾಧನಗಳ ಲಭ್ಯತೆ ಕೊರತೆಯಿಂದ ಶೇಕಡ 60ಕ್ಕಿಂತ ಹೆಚ್ಚು  ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಶಾಲೆ – ಕಾಲೇಜ್‌ ತೊರೆಯಲು ಇದು ಕೂಡ  ನೇರವಾಗಿ ಕೊಡುಗೆ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ಜ್ಞಾನ ಆಧಾರಿತ (ಕೆ), ಮಿತವ್ಯಯ (ಇ) ಮತ್ತು ಮುಕ್ತ-ಕಂಪ್ಯೂಟಿಂಗ್ (ಓಪನ್‌ ಸೋರ್ಸ್‌)  ಕೆಇಒ  ಎಂಬ ಹೆಸರಿನ ಪುಟ್ಟ ಕಂಪ್ಯೂಟರ್ ಈ ಸವಾಲಿಗೆ ಕರ್ನಾಟಕದ ಉತ್ತರವಾಗಿದೆ.

ಲಿನಕ್ಸ್ ಆಧಾರಿತ ಆಪರೇಟಿಂಗ್‌ ಸಿಸ್ಟಮ್‌ (ಒಎಸ್‌) ಹೊಂದಿರುವ ಓಪನ್-ಸೋರ್ಸ್ ಆರ್‌ಐಎಸ್‌ಸಿ-ವಿ  ಪ್ರೊಸೆಸರ್‌ನಲ್ಲಿ ನಿರ್ಮಿಸಿರುವ ʼಕೆಇಒʼ ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕಂಪ್ಯೂಟಿಂಗ್ ಬಳಕೆಯ ಅನುಭವ  ನೀಡಲಿದೆ.

ಇದು 4ಜಿ, ವೈ-ಫೈ, ಈಥರ್ನೆಟ್, ಯುಎಸ್‌ಬಿ- ಎ ಮತ್ತು ಯುಎಸ್‌ಬಿ – ಸಿ ಪೋರ್ಟ್‌ಗಳು, ಎಚ್‌ಡಿಎಂಐ ಮತ್ತು ಆಡಿಯೊ ಜ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ.

ಆನ್-ಡಿವೈಸ್ ಎಐ ಕೋರ್ ಒಳಗೊಂಡಿದೆ. ಇದು ಇಂಟರ್ನೆಟ್ ಲಭ್ಯ ಇರದಿದ್ದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸಲು  ಎಐ   ಅನುವು ಮಾಡಿಕೊಡುತ್ತದೆ. ಇದು ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕರ್ನಾಟಕ ಡಿಎಸ್‌ಇಆರ್‌ಟಿ ಪಠ್ಯಕ್ರಮದಲ್ಲಿ ತರಬೇತಿ ಪಡೆದ ಎಐ ಏಜೆಂಟ್ ಬುದ್ಧ (BUDDH) ಜೊತೆಗೆ ಬರುತ್ತದೆ.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಕೆಇಒ ಅನ್ನು ಔಪಚಾರಿಕವಾಗಿ ಅನಾವರಣಗೊಳಿಸಲಿದ್ದಾರೆ. ಬಿಡುಗಡೆಯ ನಂತರ, ಇದನ್ನು ಶೃಂಗಸಭೆಯ ಉದ್ದಕ್ಕೂ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಮಂತ್ರಿ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ಇದು ವಿದ್ಯಾರ್ಥಿಗಳು, ನವೋದ್ಯಮಿಗಳು, ಉದ್ಯಮ ಮುಖಂಡರು ಮತ್ತು ಸಂದರ್ಶಕರು ಇದನ್ನು ಬಳಸಲು ಮತ್ತು ರಾಜ್ಯದಾದ್ಯಂತ ಸಾಮೂಹಿಕ ಬಳಕೆಗೆ ಕೈಗೆಟುಕುವ ಕೃತಕ ಜಾಣ್ಮೆಯ  ಕಾಂಪ್ಯಾಕ್ಟ್‌ ಕಂಪ್ಯೂಟರ್‌ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡಲಿದೆ ಎಂದಿದ್ದಾರೆ.

ಕೆಇಒ ಡಿಜಿಟಲ್ ಅಂತರ ಕಡಿಮೆ ಮಾಡುವುದಕ್ಕೆ ಕರ್ನಾಟಕದ ಪ್ರಾಯೋಗಿಕ ಉತ್ತರವಾಗಿದೆ. ಇದು ಐಷಾರಾಮಿ ಸಾಧನವಲ್ಲ; ಇದು ಎಲ್ಲರಿಗೂ ಲಭ್ಯವಾಗುವ ಅಗ್ಗದ ಸಾಧನವಾಗಿದೆ.   ಪ್ರತಿಯೊಬ್ಬ ವಿದ್ಯಾರ್ಥಿ,  ಸಣ್ಣ ವ್ಯಾಪಾರಿ ಮತ್ತು ಪ್ರತಿ ಮನೆಯು ಡಿಜಿಟಲ್ ಆರ್ಥಿಕತೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದರು.

Leave a Reply