ಬಿಜೆಪಿ ಪರ ನಾಳೆಯಿಂದ ಪ್ರಧಾನಿ ನರೇಂದ್ರ ಮೋದಿ ಪ್ರಚಾರ

3 years ago

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಇದೀಗ ರಾಜ್ಯದಲ್ಲೆಡೆ ಪ್ರಧಾನಿ ಮೋದಿ ಪರವಾದ ಅಲೆಯನ್ನು ವಿಜೃಂಭಿಸಿ ಮತ ಗಳಿಸಲು ಲೆಕ್ಕಾಚಾರ ಹಾಕಿದೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ, ಬಿಜೆಪಿ ಪರವಾಗಿ ನಾಳೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಣಕಹಳೆ ಮೊಳಗಿಸಲಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಅತಿ ಉದ್ದವಾದ ರೋಡ್ ಶೋ ನಡೆಸುವ ಮೂಲಕ ಮತದಾರರ ಮನ ಗೆಲ್ಲುವ ಲೆಕ್ಕಾಚಾರ ಹಾಕಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಚಂದನಕೇರಾ ಕ್ರಾಸ್‍ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ಈ ಕಾರ್ಯಕ್ರಮದಲ್ಲಿ ಔರಾದ್, ಭಾಲ್ಕಿ, ಬಸವಕಲ್ಯಾಣ, ಬೀದರ್, ಹುಮನಾಬಾದ್, ಬೀದರ್ ದಕ್ಷಿಣ, ಆಳಂದ, ಚಿಂಚೋಳಿ ಹೀಗೆ ಎಂಟು ವಿಧಾನಸಭಾ ಕ್ಷೇತ್ರಗಳ ಜನರು ಭಾಗವಹಿಸುತ್ತಾರೆ.
ನಂತರ ವಿಜಯಪುರ ಮತ್ತು ಕುಡಚಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

ಬಳಿಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದು. ಈ ರೋಡ್ ಶೋ ಸುಮಾರು 18 ಕಿಲೋಮೀಟರ್ ಉದ್ದ ನಡೆಯಲಿದೆ, ಇದರಲ್ಲಿ ಬೆಂಗಳೂರು ಉತ್ತರದ ಮೂರು ವಿಧಾನಸಭಾ ಕ್ಷೇತ್ರಗಳನ್ನು ಸುಮಾರು 45 ನಿಮಿಷಗಳಲ್ಲಿ ಕ್ರಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾನುವಾರ ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಮಧ್ಯಾಹ್ನ ಚನ್ನಪಟ್ಟಣದಲ್ಲಿ ಎರಡನೇ ಸಾರ್ವಜನಿಕ ಸಭೆ, ಸಂಜೆ 5 ಗಂಟೆಗೆ ಬೇಲೂರಿನಲ್ಲಿ ಮೂರನೇ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ.

ಇದಾದ ನಂತರ ಮೈಸೂರು ನಗರದಲ್ಲಿಯೂ ರೋಡ್ ಶೋ ನಡೆಸಬಹುದು. ಇದಾದ ನಂತರ ಮೇ 2ರಂದು ಚಿತ್ರದುರ್ಗ, ವಿಜಯನಗರ, ಸಿಂಧನೂರು ಮತ್ತು ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಮೇ3 ರಂದು ಮೂಡುಬಿದಿರೆ, ಕಾರವಾರ ಮತ್ತು ಕಿತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

Leave a Reply