ತಾರಕಕ್ಕೇರಿದ ಕಾಂಗ್ರೆಸ್ – ಬಿಜೆಪಿ ನಾಯಕರ ವಾಕ್ ಸಮರ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ತೀವ್ರ ಸ್ವರೂಪ ಪಡೆದುಕೊಂಡಿದ್ದು ಪ್ರಚಾರದ ಅಖಾಡದಲ್ಲಿ ಆರೋಪ- ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಇದಕ್ಕೆ ಇದೀಗ ವಿಷಸರ್ಪ ಮತ್ತು ವಿಷಕನ್ಯೆ ಎಂಬ ವಿಶೇಷಣಗಳು ಸೇರಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ ಸಮರ ತಾರಕ್ಕೆರಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪರ ಗದಗಿನಲ್ಲಿ ಪ್ರಚಾರ ಕೈಗೊಂಡಿದ್ದ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷಸರ್ಪ ಎಂದು ಕರೆದು ಆನಂತರ ಸ್ಪಷ್ಟನೆ ನೀಡುವ ಮೂಲಕ ವಿವಾದ ತಣ್ಣಗಾಗುವಂತೆ ಮಾಡಲು ಪ್ರಯತ್ನ ನಡೆಸಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಕರೆಯುವ ಮೂಲಕ ಬಿಜೆಪಿ ನಾಯಕ ಬಸನಗೌಡ ಪಾಟೀಲ ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆ ಹೇಳಿಕೆ ನೀಡಿರುವ ಖರ್ಗೆ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕರನ್ನು ಕೆರಳುವಂತೆ ಮಾಡಿದೆ.

ಪಕ್ಷದಿಂದ ಉಚ್ಚಾಟಿಸಿ: ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಹೇಳಿಕೆ ಮೂಲಕ ಇಡೀ ಸ್ತ್ರೀ ಕುಲವನ್ನೇ ಅವಮಾನಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ತಕ್ಷಣ ಉಚ್ಛಾಟಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,’ಯತ್ನಾಳ ಅವರು ಭಾರತದ ಎಲ್ಲ ಮಗಿಳೆಯರನ್ನು ಅವಮಾನಿಸಿದ್ದಾರೆ. ಈ ಘಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಶದ ಕ್ಷಮೆ ಕೋರಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಕ್ಷಣವೇ ಯತ್ನಾಳ ಅವರನ್ನು ಉಚ್ಛಾಟಿಸಬೇಕು’ ಎಂದು ಒತ್ತಾಯಿಸಿದರು.

ಸೋನಿಯಾ ಅವರು ಈ ದೇಶದ ಅಖಂಡತೆ ಮತ್ತು ಸಮಗ್ರತೆಗಾಗಿ ಅತ್ತೆ ಹಾಗೂ ಗಂಡನನ್ನು ಕಳೆದುಕೊಂಡರು. ಎರಡು ಬಾರಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವ ಅವಕಾಶ ಸಿಕ್ಕರೂ ಡಾ.ಮನಮೋಹನ್ ಸಿಂಗ್ ಅವರಂತಹ ಶ್ರೇಷ್ಠ ಆರ್ಥಿಕ ತಜ್ಞನಿಗೆ ಅವಕಾಶ ಕಲ್ಪಿಸಿದರು. ಅಂತಹ ಧೀಮಂತ ಮಹಿಳೆಯ ಕುರಿತು ಯತ್ನಾಳ ಕೀಳುಮಟ್ಟದ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದರು.

ಯತ್ನಾಳ ನಿನ್ನ ಹೇಳಿಕೆಗೆ ಈ ರಾಜ್ಯದ ಜನರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಗೆ ಪ್ರತಿಕ್ರಿಯಿಸುತ್ತಾರೋ ನನಗಂತೂ ಗೊತ್ತಿಲ್ಲ’ ಎಂದು ಏಕವಚನದಲ್ಲೇ ಎಚ್ಚರಿಕೆ ನೀಡಿದರು.

ತಕ್ಕ ಪಾಠ: ಈ ನಡುವೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯ್ಯುವ ಮೂಲಕ ಜನರ ಭಾವನೆ ಕೆರಳಿಸುತ್ತಿದ್ದಾರೆ. ದೇಶದ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2007ರ ಗುಜರಾತ್ ಚುನಾವಣೆ ವೇಳೆ ಸೋನಿಯಾಗಾಂಧಿ ಮೋದಿ ಅವರಿಗೆ ಮೌತ್ ಕಾ ಸೌದಾಗಾರ್(ಸಾವಿನ ವ್ಯಾಪಾರಿ) ಎಂದು ಹೇಳಿದ್ದರು. 2014ರಲ್ಲಿ ಮಣಿಶಂಕರ ಅವರು ಚಾಯವಾಲಾ ಎಂದು ಕರೆದಿದ್ದರು. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷದ ಹಾವು ಎಂದು‌ ಟೀಕಿಸಿದ್ದಾರೆ. ಮೋದಿ ಅವರನ್ನು ಟೀಕಿಸಿದಾಗಲೆಲ್ಲ ಮತಗಳು ಜಾಸ್ತಿ ಬಂದಿವೆ. ಕಾಂಗ್ರೆಸ್ ಮುಖಂಡರು ಹತಾಶರಾಗಿ ತಮ್ಮ ನೂರು ವರ್ಷದ ಸಂಸ್ಕೃತಿ ಗಾಳಿಗೆ ತೂರಿ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ನಾಯಕರು ಇನ್ನೂ ಗತಕಾಲದ ಅಧಿಕಾರದ ಮದದಲ್ಲಿಯೇ ಮೆರೆಯುತ್ತಿದ್ದಾರೆ. ಜನರನ್ನು ಗುಲಾಮರು ಎಂದು ತಿಳಿದು, ವೋಟ್ ಬ್ಯಾಂಕ್ ಮಾಡಿಕೊಂಡವರು. ತಾವು ಏನೇ ಹೇಳಿದರೂ, ಏನೇ ಮಾಡಿದರೂ ನಡೆಯುತ್ತದೆ‌ ಎಂದು ಭಾವಿಸಿದ್ದಾರೆ. ಸಿದ್ದರಾಮಯ್ಯ, ಖರ್ಗೆ ನಲವತ್ತು, ಐವತ್ತು ವರ್ಷಗಳಿಂದ‌ ರಾಜಕೀಯ ಜೀವನದಲ್ಲಿ ಇದ್ದಾರೆ. ಕೊನೆಯ ಹಂತದಲ್ಲಾದರೂ ಗೌರವ ಪೂರ್ವಕವಾಗಿ ನಡೆದುಕೊಂಡರೆ ಅವರಿಗೆ ಶೋಭೆ. ಇಲ್ಲದಿದ್ದರೆ ಇಷ್ಟು ವರ್ಷ ಏನು ಮಾಡಿದ್ದೀರಿ ಎಂದು ಜನ ಪ್ರಶ್ನಿಸುತ್ತಾರೆ’ ಎಂದು ಎಚ್ವರಿಕೆ ನೀಡಿದರು.

Leave a Reply