ಡೆಂಗ್ಯೂ, ಚಿಕನ್ ಗುನ್ಯಾ ಹರಡದಂತೆ ತೀವ್ರ ತಪಾಸಣೆ ಹಾಗೂ ಮನೆಮನೆ ಜಾಗೃತಿ ಮಾಡಿ

2 years ago

ಪ್ರತಿ ದಿನ ಎರಡು ಗ್ರಾಮ ಭೇಟಿ ನೀಡಿ, ವರದಿ ಸಲ್ಲಿಸಿ

ತಮ್ಮ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗ ಉಲ್ಭಣವಾಗದಂತೆ ಕ್ರಮವಹಿಸಿ: ಡಿಎಚ್ಓ ಡಾ.ಶಶಿ ಪಾಟೀಲ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು, ಜ್ವರ ಪ್ರಕಣಗಳು ತೀವ್ರಗತಿಯಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಡೆಂಗ್ಯೂ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಸಭೆ ಡಿಎಚ್ಓ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಹೈರಿಸ್ಕ್ ಪ್ರದೇಶಗಳನ್ನು ಗುರುತಿಸಿ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ರೋಗ ಹರಡದಂತೆ ನಿಯಮಿತವಾಗಿ ಲಾರ್ವಾ ಸಮೀಕ್ಷೆಯನ್ನು ನಡೆಸಲು, ಜಿಲ್ಲಾ ರೋಗವಾಹಕ ಆಶ್ರೀತರೋಗಗಳ ನಿಯಂತ್ರಣಾಧಿಕಾರಿಗಳಿಗೆ ಡಿಎಚ್ಓ ಸೂಚಿಸಿದರು.

ಸಂಶಯಾಸ್ಪದ ಜ್ವರ ಪ್ರಕರಣಗಳನ್ನು ಗುರುತಿಸಿ, ರಕ್ತದ ಮಾದರಿಯನ್ನು ನಿಯಮಿತವಾಗಿ ಪ್ರಯೋಗಾಲಯಕ್ಕೆ ಕಳುಹಿಸುವುದು ಮತ್ತು ಪಾಸಿಟಿವ್ ಕಂಡು ಬಂದ ಪ್ರಕರಣಗಳು ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ, ಗ್ರಾಮದಲ್ಲಿನ ಸಾರ್ವಜನಿಕರಿಗೆ, ಗ್ರಾಮಪಂಚಾಯತಿ ಸದಸ್ಯರು, ಸಿಬ್ಬಂದಿಗೆ, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಐ.ಇ.ಸಿ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಕರಪತ್ರ, ಬಿತ್ತಿಪತ್ರ ಹಾಗೂ ಬ್ಯಾನರ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗುವ ಜ್ವರಗಳ ಪ್ರಕರಣಗಳ ವರದಿಯನ್ನು ಸಂಗ್ರಹಿಸಿ, ವರದಿ ನೀಡಲು ಡಿಎಚ್ಓ ಅವರು ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶಿಸಿದರು.

ಹುಬ್ಬಳ್ಳಿ –ಧಾರವಾಡ ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಡಿಜಟಲ್ ಪ್ರಚಾರ ಫಲಕಗಳ ಮೂಲಕ ಡೆಂಗ್ಯೂ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ಕೈಕೊಳ್ಳುವಂತೆ ಐಇಸಿ ಹಾಗೂ ತಾಲೂಕು ವೈದ್ಯಾಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳು ಪ್ರತಿ ದಿನ 2 ಗ್ರಾಮಗಳಿಗೆ ಭೇಟಿ ನೀಡುವ ಕುರಿತು ಕ್ರಿಯಾಯೋಜನೆ ಸಲ್ಲಿಸಲು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಪೆರಿತ್ರಿಮ್ ಹಾಗೂ ಟೆಮೋಪಾಸ್ನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಟ್ಟುಕೊಂಡು ಅವಶ್ಯಕತೆ ಇರುವ ಗ್ರಾಮಗಳಲ್ಲಿ ಫಾಗಿಂಗ್ ಕೈಕೊಳ್ಳುವಂತೆ ಹಾಗೂ ಅಂತರ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಕೈಕೊಳ್ಳುವಂತೆ ನಿರ್ದೇಶಿಸಿದರು.

ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯತನ ತೋರಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯವರನ್ನು ನೇರ ಹೊಣೆಗಾರನ್ನಾಗಿ ಮಾಡಿ ಸೂಕ್ತ ಕ್ರಮ ಕೈಕೊಳ್ಳಲಾಗುವುದು. ಎಲ್ಲರೂ ಕ್ರಿಯಾಶೀಲವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಸಭೆಯಲ್ಲಿ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ತಿಳಿಸಿದ ಅವರು, ಡೆಂಗ್ಯೂ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಕ್ರಮಕೈಕೊಳ್ಳಲು ಸೂಚನೆ ನೀಡಿದರು.

ಜಿಲ್ಲಾ ರೋಗ ವಾಹಕ ಆಶ್ರೀತರೋಗಗಳ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಸಮೀಕ್ಷಣಾಧಿಕಾರಿಗಳು, ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

Leave a Reply