ಬೆಂಗಳೂರು: ರಾಜ್ಯದಲ್ಲಿ ಇದೇ ಸೆ. 22ರಿಂದ ಅರಂಭವಾಗಿ 16 ದಿನಗಳ ಕಾಲ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯನ್ನು ವೈಜ್ಞಾನಿಕವಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಈ ಬಾರಿ ಕ್ಷಿಪ್ರ ಸಮಯದಲ್ಲಿ ಜಾತಿ ಗಣತಿ ನಡೆಸಲು ತಂತ್ರಜ್ಞಾನ ಬಳಕೆ ಮಾಡಲಾಗಿದ್ದು,1.75 ಲಕ್ಷ ಗಣತಿದಾರರ ಮೂಲಕ, ತಂತ್ರಜ್ಞಾನ ಬಳಸಿಕೊಂಡು ಕರಾರುವಾಕ್ ಹಾಗೂ ಜಾಗ್ರತೆಯಿಂದ ಸಮೀಕ್ಷೆ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7ರ ವರೆಗೆ ರಾಜ್ಯಾದ್ಯಂತ ಮತ್ತೆ ಜಾತಿ ಗಣತಿಯನ್ನು ಪೂರ್ಣಗೊಳಿಸಿ, ಡಿಸೆಂಬರ್ ವೇಳೆಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ.
60 ವಿವಿಧ ಪ್ರಶ್ನೆಗಳ ಮೂಲಕ ಗಣತಿದಾರರು ಸಮೀಕ್ಷೆ ನಡೆಸಲಿದ್ದಾರೆ. ಮೊಬೈಲ್ ಆ್ಯಪ್ ಬಳಸಿ, ಗಣತಿದಾರರು ಮಾಹಿತಿ ಎಂಟ್ರಿ ಮಾಡಲಿದ್ದಾರೆ. ಮನೆ, ಮನೆಗಳ ಸಮೀಕ್ಷೆ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದೆ.
ಮನೆ ಗುರುತಿಸುವುದು ಹೇಗೆ?: ಸಮೀಕ್ಷೆ ನಡೆಸಲು ಸಮೀಕ್ಷಾ ಬ್ಲಾಕಿನ ಭೌಗೋಳಿಕ ವ್ಯಾಪ್ತಿಯನ್ನು ನಿರ್ಧರಿಸಬೇಕಾಗಿದೆ. ಈ ಬಾರಿ ಸಮೀಕ್ಷೆಯಲ್ಲಿ ಮನೆಗಳಿಗೆ ಎಸ್ಕಾಂಗಳು ಒದಗಿಸಿರುವ ವಿದ್ಯುತ್ ಸಂಪರ್ಕದ ಆರ್.ಆರ್. ಮೀಟರ್ಗಳ ಆಧಾರದ ಮೇಲೆ ಸಮೀಕ್ಷಾ ಬ್ಲಾಕಿನ ವ್ಯಾಪ್ತಿಯನ್ನು ನಿರ್ಧರಿಸಲಾಗುತ್ತದೆ. ಸಮೀಕ್ಷಾ ಸಮಯದಲ್ಲಿ ಎಲ್ಲಾ ಮನೆಗಳು, ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಒಳಪಡಿಸಲು ಸಮೀಕ್ಷಾ ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆ ಗುರುತಿಸುವುದರ ಜೊತೆಗೆ, ವಸತಿ ರಹಿತ ಕುಟುಂಬಗಳು, ವ್ಯಕ್ತಿಗಳು ವಾಸಿಸುತ್ತಿರುವ ಸ್ಥಳ, ಪ್ರದೇಶಗಳನ್ನು ಗುರುತಿಸುವುದು ಅಗತ್ಯವಾಗಿದೆ.
ವಿನೂತನ ಪದ್ಧತಿ ಜಾರಿಗೆ: 2014-15ರಲ್ಲಿ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಮನೆಗಳನ್ನು ಗುರುತಿಸುವುದಕ್ಕಾಗಿ 2011ರ ಜನಗಣತಿ ಬ್ಲಾಕ್‌ಗಳನ್ನು ಸಮೀಕ್ಷಾ ಘಟಕವಾಗಿ ಪರಿಗಣಿಸಲಾಗಿತ್ತು. ಜನಗಣತಿ ಪ್ರಕ್ರಿಯೆಯಲ್ಲಿ ತಯಾರಿಸಿದ ಬ್ಲಾಕ್ ಲೇಔಟ್ ನಕ್ಷೆ ಹಾಗೂ ಸಂಕ್ಷಿಪ್ತ ಮನೆಪಟ್ಟಿಗಳ ಆಧಾರದ ಮೇಲೆ ಸಮೀಕ್ಷಕರು ಮನೆ-ಮನೆಗೆ ಭೇಟಿ ನೀಡಿ, ರಾಜ್ಯದ ಎಲ್ಲಾ ಕುಟುಂಬಗಳ/ಜನರ ಸಮೀಕ್ಷೆಯನ್ನು ನಿರ್ವಹಿಸಿದ್ದರು. ಆದರೆ 2011ರಲ್ಲಿ ತಯಾರಿಸಲಾದ ನಕ್ಷೆ ಮತ್ತು ಮನೆಪಟ್ಟಿಗಳು ಬಹಳ ಹಳೆಯದಾಗಿದ್ದು, ಅವು ಇಂದಿನ ವಾಸ್ತವಿಕ ಚಿತ್ರಣವನ್ನು ಪ್ರತಿಬಿಂಬಿಸದಿರುವ ಕಾರಣ ಪ್ರಸ್ತುತ ಸಮೀಕ್ಷೆಗಾಗಿ ಒಂದು ವಿನೂತನ ಪದ್ಧತಿಯನ್ನು ಅನ್ವೇಷಿಸಲಾಗಿದೆ.
ಮನೆ ಮನೆ ಪಟ್ಟಿ ಸಿದ್ಧ: ಇಂಧನ ಇಲಾಖೆ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಸರಬರಾಜು ಸಂಸ್ಥೆ (ಎಸ್ಕಾಂ) ಗಳ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕ ನೀಡಲಾಗಿರುವ ವಿದ್ಯುತ್ ಮೀಟರ್ (ಆರ್ ಆರ್ ನಂ) ಗಳ ಆಧಾರದ ಮೇಲೆ ರಾಜ್ಯದಲ್ಲಿರುವ ಎಲ್ಲಾ ಮನೆಗಳ ಪಟ್ಟಿಯನ್ನು (ವಿಳಾಸದೊಂದಿಗೆ) ಸಿದ್ಧಪಡಿಸಲಾಗಿದೆ.
ಸಾಮಾನ್ಯವಾಗಿ ಒಬ್ಬ ಮೀಟರ್ ರೀಡರ್ ಕಾರ್ಯಕ್ಷೇತ್ರದಲ್ಲಿ ಸುಮಾರು 3 ಸಾವಿರ ಮೀಟರ್‌ಗಳು (ವಿದ್ಯುತ್ ಸಂಪರ್ಕಗಳು) ಬರುತ್ತವೆ. ಅಂದರೆ ಸುಮಾರು 3 ಸಾವಿರ ಮನೆಗಳು ಅಲ್ಲಿ ಇರುತ್ತವೆ. ಒಬ್ಬ ಸಮೀಕ್ಷಾದಾರರಿಗೆ ಸುಮಾರು 150 ಮನೆಗಳ ಸಮೀಕ್ಷಾ ಕಾರ್ಯವನ್ನು ವಹಿಸಿದಲ್ಲಿ ಒಬ್ಬ ಮೀಟರ್ ರೀಡರ್ ಕಾರ್ಯವ್ಯಾಪ್ತಿಯಲ್ಲಿ 20 ಗಣತಿ ಬ್ಲಾಕ್ಗಳನ್ನು ರಚಿಸಲಾಗುತ್ತದೆ.
ಮನೆಪಟ್ಟಿ ತಯಾರಿಕೆ ಹೇಗೆ?: ಪ್ರತಿ ಮನೆಯನ್ನು ‘ಜಿಯೋಟ್ಯಾಗ್’ ಮಾಡಿ ಗಣತಿ ಬ್ಲಾಕಿನ ವ್ಯಾಪ್ತಿಯಲ್ಲಿ ಒಳಪಡಿಸಲಾಗುವುದು. ಸಮೀಕ್ಷಾದಾರರಿಗೆ ಮನೆಗಳನ್ನು ಸುಲಭವಾಗಿ ಗುರುತಿಸಿ ಮನೆ ಭೇಟಿ ನೀಡಲು ಅನುಕೂಲವಾಗುವಂತೆ ಸುಮಾರು 150 ಮನೆಗಳಿರುವ ಪ್ರದೇಶವನ್ನು ಒಂದು ಸಮೀಕ್ಷಾ ಬ್ಲಾಕ್ ಆಗಿ ವೈಜ್ಞಾನಿಕವಾಗಿ ಸೃಜಿಸಲಾಗಿದೆ.
ವಿಶಿಷ್ಟ ಮನೆ ಸಂಖ್ಯೆ: ಸಮೀಕ್ಷಾ ಬ್ಲಾಕಿನಲ್ಲಿರುವ ಪ್ರತಿಯೊಂದು ಮನೆಗೆ (ಕುಟುಂಬಕ್ಕೆ) ಒಂದು ವಿಶಿಷ್ಟ ಮನೆ ಸಂಖ್ಯೆ ಯುಹೆಚ್ ಐಡಿ ಹೊಂದಿರುವ ಮನೆಪಟ್ಟಿಯನ್ನು ಒದಗಿಸಲಾಗುತ್ತಿದೆ. ಇದರಿಂದ ಯಾವುದೇ ಮನೆ ತಪ್ಪಿ ಹೋಗದಂತೆ, ಮನೆಗಳ ಸಮೀಕ್ಷೆ ಒಂದಕ್ಕಿಂತ ಹೆಚ್ಚು ಬಾರಿ ಆಗದಂತೆ ಪೂರ್ಣ ವ್ಯಾಪ್ತಿಯೊಂದಿಗೆ, ನಿಖರವಾಗಿ ಸಮೀಕ್ಷೆ ನಿರ್ವಹಿಸಲು ಸಾಧ್ಯವಾಗುತ್ತದೆ.
ಸಮೀಕ್ಷಕರು ಮನೆಯ ಸಮೀಕ್ಷೆ ಮಾಡಲು ಹೋದೊಡನೆ ಮಾಡಬೇಕಾದ ಮೊದಲ ಕರ್ತವ್ಯವೆಂದರೆ ಮನೆಗೆ ಈಗಾಗಲೇ ಅಂಟಿಸಲಾದ ‘ಸ್ಟಿಕರ್’ನ್ನು ಪರಿಶೀಲಿಸಿ ಅದರಲ್ಲಿ ಬರೆಯಲಾದ ಯುಹೆಚ್ ಐಡಿ ಸಂಖ್ಯೆಯನ್ನು ಗಮನಿಸಿ ಅವರು ತಲುಪಿರುವ ಮನೆ, ಸಮೀಕ್ಷೆ ಮಾಡಲು ನಿಗದಿಪಡಿಸಿರುವ ಮನೆಯೇ ಹೇಗೆಂಬುದನ್ನು ಸ್ಥಾನಿಕವಾಗಿ ಜಿಯೋ ಕೋ ಅರ್ಡಿನೇಟ್ಸ್ ಆಧಾರದ ಮೇಲೆ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು.
ಜಿಯೋಟ್ಯಾಗ್ ಬಳಕೆ: ರಾಜ್ಯದಲ್ಲಿರುವ ಪ್ರತಿಯೊಂದು ವಿದ್ಯುಚ್ಛಕ್ತಿ ಸಂಪರ್ಕ ಮೀಟರಿಗೆ ಒಂದು ವಿಶಿಷ್ಟ ಆರ್ಆರ್ ಸಂಖ್ಯೆ (ಆರ್ ಆರ್ ನಂ.) ಯನ್ನು ಎಸ್ಕಾಂಗಳು (ವಿದ್ಯುತ್ ಸರಬರಾಜು ಸಂಸ್ಥೆ) ನೀಡಿರುತ್ತವೆ. ಇವುಗಳನ್ನು ಆಧರಿಸಿಯೇ ಪರಿಶೀಲನೆ ನಡೆಸಿ, ಮೀಟರ್ ರೀಡರ್‌ಗಳು ಸಮೀಕ್ಷೆಗೆ ಒಳಪಡಿಸಬೇಕಾಗಿರುವ ಆರ್ ಆರ್ ಲಿಂಕ್ಡ್ ಮನೆಗಳನ್ನು ಪಟ್ಟಿ ಮಾಡಿದ್ದಾರೆ.
ರಾಜ್ಯದಲ್ಲಿ ಅತಿದೂರದಲ್ಲಿರುವ ಗುಡ್ಡಗಾಡು, ಅರಣ್ಯ ಹಾಗೂ ಅಂತಹ ಕೆಲವು ದುರ್ಗಮ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವ ಮನೆಗಳು ಇರುವ ಸಾಧ್ಯತೆಗಳಿವೆ. ಇದಲ್ಲದೆ, ನಗರ ಪ್ರದೇಶಗಳ ನಿಬಿಡ ಜನವಸತಿ ಇರುವ ಅಥವಾ ಸ್ಲಮ್ ಪ್ರದೇಶಗಳಲ್ಲಿ ಮನೆಗಳು ಇಕ್ಕಟ್ಟಾಗಿದ್ದು, ಪ್ರತ್ಯೇಕ ಆರ್.ಆರ್. ಸಂಖ್ಯೆ ಇಲ್ಲದೇ ಇರುವ ಸನ್ನಿವೇಶಗಳು ಇರಬಹುದು. ಅಂತಹ ಪ್ರಕರಣಗಳಲ್ಲಿ-ಅಂತಹ ಮನೆಗಳನ್ನು ಸಮೀಕ್ಷೆಯಲ್ಲಿ ಒಳಪಡಿಸುವ ಅವಕಾಶವನ್ನು ಆ್ಯಪ್ನಲ್ಲಿ ಕಲ್ಪಿಸಲಾಗಿರುತ್ತದೆ. ಅಂತಹ ಮನೆಗಳನ್ನು ಸಮೀಕ್ಷಕರು ‘ಜಿಯೋಟ್ಯಾಗ್’ ಮಾಡಿ, ಪರಿಶೀಲನೆಗಾಗಿ ಸಮೀಕ್ಷಾ ಮೇಲ್ವಿಚಾರಕರಿಗೆ ನೀಡಬೇಕು.




