ಎಚ್.ಅನಿಲ್ ಗೌಡ ವಿರುದ್ಧ ಇಡಿ ಜಾರಿ ಮಾಡಿರುವ ಸಮನ್ಸ್ ಗೆ ತಡೆ

7 months ago

ಬೆಂಗಳೂರು: ಅಕ್ರಮ ಬೆಟ್ಟಿಂಗ್ ಪ್ರಕರಣ ಸಂಬಂಧ ಶಾಸಕ ವೀರೇಂದ್ರ ಅವರ ಗೆಳೆಯ, ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರ, ವಕೀಲ ಎಚ್.ಅನಿಲ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಜಾರಿ ಮಾಡಿರುವ ಸಮನ್ಸ್ ಗೆ ತಡೆ ನೀಡಿದ ಹೈಕೋರ್ಟ್, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ.

ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್ ಮತ್ತು ತನಿಖೆಗೆ ತಡೆ ನೀಡಲು ನಿರ್ದೇಶಿಸುವಂತೆ ಕೋರಿ ವಕೀಲ ಅನಿಲ್ ಗೌಡ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ವಕೀಲರಿಗೆ ಸಮನ್ಸ್ ನೀಡಿದ ವಿಚಾರ ಸಂಬಂಧ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅನಿಲ್ ಗೌಡ ಅವರು ಮಧ್ಯಂತರ ರಕ್ಷಣೆಗೆ ಅರ್ಹರಾಗಿದ್ದು, ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ಗೆ ತಡೆ ನೀಡಲಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ವಿಚಾರ ನಿರ್ಧಾರವಾಗುವವರೆಗೆ ಜಾರಿ ನಿರ್ದೇಶನಾಲಯ ಅನಿಲ್ ಗೌಡ ವಿರುದ್ಧ ಪಿಎಂಎಲ್ಎ ಕಾಯ್ದೆ ಸೆಕ್ಷನ್ 50 ಅನ್ನು ಅನ್ವಯಿಸುವುದು ಮತ್ತು ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲರು, ಅನಿಲ್ ಗೌಡ ವೃತ್ತಿಯಲ್ಲಿ ಒಬ್ಬ ವಕೀಲ. ಕೆ.ಸಿ.ವೀರೇಂದ್ರ ಅವರಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲನಾಗಿ ವೀರೇಂದ್ರಗೆ ಸಲಹೆ ನೀಡಿದ್ದಾರೆ. ವೀರೇಂದ್ರ ಅವರ ಕಂಪನಿಗಳಲ್ಲಿ ಹೂಡಿಕೆ ಮಾತ್ರ ಮಾಡಿದ್ದಾರೆಯೇ ಹೊರತು ಕಂಪನಿಯ ದೈನಂದಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಇಡಿ ಅಧಿಕಾರ ವ್ಯಾಪ್ತಿ ಮೀರಿ, ರಾಜಕೀಯಪ್ರೇರಿತ ಮತ್ತು ದುರುದ್ದೇಶದಿಂದ ಅನಿಲ್ ಗೌಡಗೆ ಸಮನ್ಸ್ ಜಾರಿ ಮಾಡಿ ದಾಖಲೆಗಳನ್ನು ಕೇಳಿದೆ. ಇಡಿ ಅಧಿಕಾರಿಯ ವ್ಯಾಪ್ತಿಯು ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ವೀರೇಂದ್ರ ಅವರಿಗೆ ವಕೀಲನಾಗಿ ಸಲಹೆ ನೀಡಿರುವುದರಿಂದ ಅವರನ್ನು ವಿಚಾರಣೆಗೊಳಪಡಿಸದಂತೆ ಇ.ಡಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಜಾರಿ ನಿರ್ದೇಶನಾಲಯದ ಪರ ವಕೀಲರು, ಕ್ಯಾಸಲ್ ರಾಕ್ ಸಂಸ್ಥೆಯಲ್ಲಿ ವೀರೇಂದ್ರ ಪಪ್ಪಿ ಅವರು ಶೇ.35ರಷ್ಟು ಷೇರು, ಅನಿಲ್ ಗೌಡ ಶೇ.15ರಷ್ಟು ಷೇರು ಹೊಂದಿದ್ದಾರೆ. ಅನಿಲ್ ಗೌಡರಿಂದ ಜಪ್ತಿ ಮಾಡಿರುವ ಲ್ಯಾಪ್ಟಾಪ್ನಲ್ಲಿ ಶೇ.5ರಷ್ಟು ಲಾಭಾಂಶ ಅಂದರೆ 29 ಕೋಟಿ ರೂಪಾಯಿಯನ್ನು ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಅನಿಲ್ ಗೌಡ ಅವರು ವೀರೇಂದ್ರ ಜೊತೆ ಉದ್ಯಮ ನಡೆಸುತ್ತಿದ್ದರು ಎಂಬುದಕ್ಕೆ ಇಮೇಲ್ ಸಂದೇಶಗಳು ಸಾಕ್ಷಿ ಒದಗಿಸುತ್ತದೆ. ಅನಿಲ್ ಗೌಡ ಎಲ್ಎಲ್ಬಿ ಕಲಿಯುತ್ತಿರಬಹುದು. 2022ರಲ್ಲಿ ಅನಿಲ್ ಗೌಡ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದಾರೆ. ಇಂದು ಕಾನೂನಿನ ಪ್ರಕಾರ ಅನಿಲ್ ಗೌಡ ವಕೀಲರಾಗಿರಬಹುದು. ಆದರೆ, ಲೀಗಲ್ ಸರ್ವೀಸ್ ನೀಡಿರುವುದಕ್ಕಾಗಿ ಅನಿಲ್ ಗೌಡರಿಗೆ ಸಮನ್ಸ್ ನೀಡಲಾಗಿಲ್ಲ. ಉದ್ಯಮದಲ್ಲಿ ಪಾಲುದಾರರಾಗಿರುವುದರಿಂದ ಅವರ ಹೇಳಿಕೆ ದಾಖಲಿಸಲು ಸಮನ್ಸ್ ನೀಡಲಾಗಿದೆ ಎಂದು ವಿವರಣೆ ನೀಡಿದ್ದರು. ವಾದ-ಪ್ರತಿವಾದ ಆಲಿಸಿರುವ ನ್ಯಾಯಪೀಠ ಮೇಲಿನ ಆದೇಶ ನೀಡಿದೆ. 

Leave a Reply