ಬೆಂಗಳೂರು: ಹೈಕಮಾಂಡ್ ಎಚ್ಚರಿಕೆಯ ನಂತರ ರಾಜ್ಯ ಕಾಂಗ್ರೆಸ್ಸಿನಲ್ಲಿ ತಣ್ಣಗಾಗಿದೆ ಎನ್ನಲಾದ ಬಣ ರಾಜಕಾರಣ ಮತ್ತೆ ಸ್ಫೋಟಿಸಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮುದಾಯದ ಬೇಡಿಕೆಗಳ ಈಡೇರಿಕೆ ಆಗ್ರಹದ ಹೆಸರಿನಲ್ಲಿ ಈ ಸಮುದಾಯದ ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ತೆರೆ ಮರೆಯಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇಂಥದೊಂದು ಶಕ್ತಿ ಪ್ರದರ್ಶನಕ್ಕೂ ಮುನ್ನ ಹೈಕಮಾಂಡ್ ಅನುಮತಿ ಪಡೆಯುವ ನಿಟ್ಟಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇವರ ಮಾತುಕತೆಯ ಬಳಿಕ ದಾವಣಗೆರೆಯ ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಸಂಸದ ತುಕಾರಾಂ ಮತ್ತು ಕೆಲವು ಶಾಸಕರ ಜೊತೆಗೂ ಪರಮೇಶ್ವರ ಚರ್ಚೆ ನಡೆಸಿದರು.
ತಮ್ಮ ಸಮುದಾಯದ ನಾಯಕರಿಗೆ ಡಿಸಿಎಂ ಹುದ್ದೆ ಬೇಕು ಎಂದು ಪಟ್ಟು ಹಿಡಿದಿರುವ ಈ ನಾಯಕರು ಒಂದು ವೇಳೆ ರಾಜ್ಯದಲ್ಲಿ ಸಿಎಮ್ ಬದಲಾವಣೆಯಾದರೆ ಈ ಹುದ್ದೆಯನ್ನು ತಮ್ಮ ಸಮುದಾಯಕ್ಕೆ ಸೇರಿದವರೊಬ್ಬರಿಗೆ ನೀಡಬೇಕು ಎಂಬ ಆಗ್ರಹವನ್ನು ಮಂಡಿಸಲು ಮುಂದಾಗಿದ್ದಾರೆ.
ಇದಕ್ಕಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಸಮುದಾಯದ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನಕ್ಕೂ ಮುನ್ನ ಸಮಾವೇಶ ನಡೆಸುವ ಮೂಲಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲಾ ಮಾತುಕತೆಗಳ ಕುರಿತು ಪ್ರತಿಕ್ರಿಯಿಸಿರುವ ಜಿ ಪರಮೇಶ್ವರ್, ಕಾಂಗ್ರೆಸ್ಸಿನಲ್ಲಿ ಯಾವುದೇ ರೀತಿಯ ಬಣ ರಾಜಕಾರಣ ಇಲ್ಲ. ತಾವು ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ತಮ್ಮ ಕುಟುಂಬದ ಸದಸ್ಯ. ತಮಗೆ ಹಿರಿಯಣ್ಣ ಇದ್ದಂತೆ. ತಾವು ಅವರನ್ನು ಆಗಿಂದಾಗ್ಗೆ ಭೇಟಿ ಮಾಡಿ ತಮ್ಮ ಕುಟುಂಬದ ವಿಚಾರಗಳ ಬಗ್ಗೆ ಮಾತುಕತೆ ನಡೆಸುವುದು ಸಾಮಾನ್ಯ. ಅದೇ ರೀತಿ ಈಗಲೂ ಮಾತನಾಡಿದ್ದೇನೆ. ಈ ಭೇಟಿಯ ಸಮಯದಲ್ಲಿ ನಮ್ಮ ಕುಟುಂಬದ ವಿಷಯ ಹೊರತುಪಡಿಸಿ ಯಾವುದೇ ರೀತಿಯ ರಾಜಕಾರಣ ಚರ್ಚೆ ಮಾಡಿಲ್ಲ ಎಂದರು.
ವರಿಷ್ಠರನ್ನು ಭೇಟಿ ಮಾಡಲು ತಾವು ಸದ್ಯದಲ್ಲಿ ದೆಹಲಿಗೆ ತೆರಳುತ್ತಿದ್ದೇನೆ. ಅವರ ಜೊತೆ ಚರ್ಚೆ ಮಾಡಲು ಹಲವು ವಿಷಯಗಳಿವೆ. ಭೇಟಿ ನಂತರ ತಾವು ಯಾವೆಲ್ಲ ವಿಷಯಗಳನ್ನು ಚರ್ಚೆ ಮಾಡಿದೆವು ಎಂಬುದನ್ನು ಬಹಿರಂಗಪಡಿಸುತ್ತೇನೆ ಎಂದರು.




