ಬೆಂಗಳೂರು: ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳು ನಡೆದಿದ್ದು ಇದರ ವಿರುದ್ಧ ಬಹಿರಂಗ ಸಮರಕ್ಕೆ ಅಹಿಂದ ಒಕ್ಕೂಟ ಮುಂದಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದ ಬೆನ್ನಲ್ಲೇ ಮತ್ತಷ್ಟು ಭ್ರಷ್ಟಾಚಾರ ಆರೋಪ ಪ್ರಕರಣಗಳ ಮೂಲಕ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ತಂತ್ರ ರೂಪಿಸಲಾಗಿದೆ ಎಂದು ಅಹಿಂದ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಹಲವು ಮೂಲಗಳಿಂದ ಮಾಹಿತಿ ಪಡೆದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇದೀಗ ಅಹಿಂದ ಸಂಘಟನೆ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿರುವ ಅನುಮತಿ ಕುರಿತು ಆಗಸ್ಟ್ 29 ರಂದು ಹೈಕೋರ್ಟ್ ತೀರ್ಪು ಹೊರಬೀಳಲಿದೆ. ಅದಕ್ಕೂ ಮುನ್ನವೇ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಲು ಅಹಿಂದ ಸಂಘಟನೆ ಸಿದ್ಧತೆ ನಡೆಸಿದೆ.
ಸಚಿವ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿದ ಅಹಿಂದ ಸಮುದಾಯದ ಮುಖಂಡರು ಆಗಸ್ಟ್ 27ರಂದು ಬೆಂಗಳೂರಿನಲ್ಲಿ ಬೃಹತ್ ರಾಜಭವನ ಚಲೋ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದಾರೆ.
ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಲಿರುವ ಸುಮಾರು ಎರಡು ಲಕ್ಷ ಅಹಿಂದ ಕಾರ್ಯಕರ್ತರು ರೈಲ್ವೆ ನಿಲ್ದಾಣದಿಂದ ರಾಜಭವನದವರೆಗೆ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದು, ಅಂದು ಇಡೀ ದಿನ ಬೆಂಗಳೂರಿನಲ್ಲಿ ರಸ್ತೆ ಸಂಚಾರ ಆಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
ಹಿಂದುಳಿದ ಸಮುದಾಯಕ್ಕೆ ಸೇರಿದ ಸಿಎಂ ಸಿದ್ದರಾಮಯ್ಯ ಅವರನ್ನು ಸುಳ್ಳು ಆರೋಪದ ಮೂಲಕ ಪದಚ್ಯುತಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಪ್ರಯತ್ನ ನಡೆಸಿವೆ. ಇದಕ್ಕೆ ಕೇಂದ್ರ ಸರ್ಕಾರ ಬೆನ್ನೆಲುಬಾಗಿ ನಿಂತಿದೆ ಎಂದು ಈ ಸಮಾವೇಶದ ಮೂಲಕ ಸಂದೇಶ ರವಾನಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೊದಲಿಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬಿಜೆಪಿ ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಂಬಿಸಲಾಗುವುದು. ಆನಂತರ ರಾಜ್ಯದ ಇತರೆ ಭಾಗಗಳಲ್ಲೂ ಇಂತಹದೇ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಬಿಜೆಪಿಯನ್ನು ಹಿಂದುಳಿದ ವರ್ಗಗಳ ವಿರೋಧಿ ಎಂದು ಹಣೆಪಟ್ಟಿ ಕಟ್ಟಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.
ಅಹಿಂದ ಸಂಘಟನೆಯ ಎಲ್ಲ ಹೋರಾಟ ಮತ್ತು ಸಭೆಗಳು ಸಚಿವ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯಲಿದ್ದು ಸಿದ್ದರಾಮಯ್ಯ ಬಹಿರಂಗ ಸಭೆಯಲ್ಲಿ ಭಾಷಣಗಳನ್ನು ಮಾಡಲಿದ್ದಾರೆ ಎನ್ನಲಾಗಿದೆ.




