ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಇದೀಗ ದಲಿತ ಸಮುದಾಯದ ಮತಗಳ ಓಲೈಕೆಯತ್ತ ಹೆಜ್ಜೆ ಇಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಸಮುದಾಯದ ಮತದಾರರು ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಅಧಿಕಾರದಲ್ಲಿದ್ದಾಗ ಕೈಗೊಂಡ ಕೆಲವು ನಿರ್ಧಾರಗಳು ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದವು. ಈ ಕುರಿತು ಹೈಕಮಾಂಡ್ ನೀಡಿರುವ ಸೂಚನೆ ಆಧರಿಸಿ, ದಲಿತ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನವನ್ನು ಪಕ್ಷ ಆರಂಭಿಸಿದೆ. ಇದಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ದಲಿತ ಮತದಾರರನ್ನು ಆಕರ್ಷಿಸಲು ಪ್ರತಿ ಜಿಲ್ಲೆಯಲ್ಲೂ ಭೀಮ ಸಮಾವೇಶ ನಡೆಸಲು ಪಕ್ಷ ಮುಂದಾಗಿದೆ. ಸಂಕ್ರಾಂತಿ ಮುಗಿಯುತ್ತಿದ್ದಂತೆ ಜಿಲ್ಲಾ ಮಟ್ಟದಲ್ಲಿ ಭೀಮ ಸಮಾವೇಶ ನಡೆಯಲಿದೆ. ಇದರ ಬಳಿಕ ಮಧ್ಯ ಕರ್ನಾಟಕದಲ್ಲಿ ಬೃಹತ್ ರಾಜ್ಯ ಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಾವೇಶಕ್ಕೆ 50 ಸಾವಿರದಿಂದ ಒಂದು ಲಕ್ಷದವರೆಗೂ ಜನರನ್ನು ಸೇರಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿದೆ. ಇದರಲ್ಲಿ ರಾಜ್ಯ ಮುಖಂಡರ ಜೊತೆಗೆ ಕೇಂದ್ರದ ಮಂತ್ರಿಗಳು ಪಾಲ್ಗೊಳ್ಳುವಂತೆ ಯೋಜನೆ ರೂಪಿಸಲಾಗಿದೆ.
ಫೆಬ್ರವರಿ ಅಂತ್ಯಕ್ಕೆ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಆಹ್ವಾನಿಸುವ ಲೆಕ್ಕಾಚಾರವನ್ನು ಕೂಡ ನಡೆಸಿದೆ. ಈಗಾಗಲೇ ಸಮಾವೇಶಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ಸಂಕ್ರಾಂತಿ ಮುಗಿದ ನಂತರ ವಾರಕ್ಕೆ ಎರಡೆರಡು ಸಮಾವೇಶಗಳು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿವೆ.




