ಮಾನವಕುಲ ಅನುಭವಿಸುತ್ತಿರುವ ನೋವು-ನಲಿವುಗಳ ಚಿತ್ರಣ ಸಿನಿಮಾಗಳಿಂದ ಸಿಗುತ್ತದೆ

4 years ago

ಚಲನಚಿತ್ರ ನನ್ನೊಳಗೆ ಪ್ರವೇಶಿಸಿದ್ದು ಅಣ್ಣಾವ್ರ ಮೂಲಕ. ಅವರ ಸಿನಿಮಾಗಳನ್ನು ನೋಡುತ್ತ ಬೆಳೆದ ನಾನು ಅವರಂತೆ ನಟನಾಗಬೇಕೆಂದು ಶಾಲಾ-ಕಾಲೇಜು ನಾಟಕಗಳಲ್ಲಿ ಅಭಿನಯಿಸಲು ತೊಡಗಿದೆ. ಆ ನಂತರ ಮೈಸೂರಿನ ಹವ್ಯಾಸಿ ರಂಗಭೂಮಿಯಲ್ಲಿ ನಟ, ನಿರ್ದೇಶಕ ಮತ್ತು ಬರಹಗಾರನಾಗಿ ತೊಡಗಿಸಿಕೊಂಡೆ.

ಕನ್ನಡ ಸಾಹಿತ್ಯದಲ್ಲಿ ಎಂ.ಎ., ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮಾ, ಆ ನಂತರ ಸಹ-ನಿರ್ದೇಶಕನಾಗಿ ಚಲನಚಿತ್ರಗಳಲ್ಲಿ ಕೆಲಸ. ಜೊತೆ ಜೊತೆಗೆ ಸಾಹಿತ್ಯ ಕೃತಿಗಳ ಓದು. ಆ ನಂತರ 2001ರಲ್ಲಿ  ಚಾಮರಾಜನಗರ ಪ್ರದೇಶದ ಆಡು ಭಾಷೆಯಲ್ಲಿ “ತಿಮ್ಮಜ್ಜಿಯ ಮ್ಯಾಗ್ಲುಂಡಿ” ಕಾದಂಬರಿ ಬರೆದೆ. ಅಪಾರ ಪ್ರಶಂಸೆಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತು.

ಆ ನಂತರ ನಾನು ಕಂಡ ರಾಜಕುಮಾರರ ಬಗೆಗೆ “ಅಂತರಂಗದ ಅಣ್ಣ” ಪುಸ್ತಕ ಅದೂ ಕೂಡ ಓದುಗರಿಂದ ಮೆಚ್ಚುಗೆ ಗಳಿಸಿತು. ಈಗ ನನ್ನ ನಿರ್ದೇಶನದಲ್ಲಿ “ಡಿಎನ್‌ಎ” ಸಿನಿಮಾ ಬಿಡುಗಡೆಯಾಗಿ ನೋಡಿದವರೆಲ್ಲರಿಗೂ ತುಂಬಾ ಇಷ್ಟವಾಗಿದೆ. ಸದ್ಯದಲ್ಲಿಯೇ OTTಯಲ್ಲಿ ಸಿನಿಮಾ ನೋಡಲು ಸಿಗುತ್ತದೆ.

ಇಷ್ಟೆಲ್ಲಾ ಬರೆಯಲು ಕಾರಣವೇನೆಂದರೆ ಈ ಸಿನಿಮೋತ್ಸವ. ನಾನು ಮೊದಲು ತುಂಬಾ ಪುಸ್ತಕಗಳನ್ನು  ಓದುತ್ತಿದ್ದೆ. ಆದರೆ ಇತ್ತೀಚೆಗೆ ಅದು ಸಾಧ್ಯವಾಗುತ್ತಿಲ್ಲ, ಅದರ ಬಗ್ಗೆ ನನಗೇ ಬೇಸರವಿದೆ. ಆದರೆ ಆ ಬೇಸರವನ್ನು ನೀಗುತ್ತಿರುವುದು ಈ ಸಿನಿಮೋತ್ಸವ. ಪ್ರತಿ ವರ್ಷ ಇಲ್ಲಿ ಸರಿಸುಮಾರು 30 ಸಿನಿಮಾಗಳನ್ನು ನೋಡುತ್ತೇನೆ. ನನ್ನ ಪ್ರಕಾರ ಅದು 30 ಪುಸ್ತಕಗಳನ್ನು ಓದಿದಂತೆಯೇ!!!

ಜಗತ್ತಿನ ಸಿನಿಮಾ ಈಗ ಯಾವ ದಾರಿಯಲ್ಲಿದೆ ಅನ್ನುವುದನ್ನು ಅರಿಯುವುದರ ಜೊತೆಗೆ “ಜಗತ್ತು” ಈಗ ಹೇಗಿದೆ? ಅನ್ನುವುದೂ ತಿಳಿಯುತ್ತದೆ. ಜಾತಿ, ಧರ್ಮ ನಾನು ಶ್ರೇಷ್ಠ, ನೀನು ಕನಿಷ್ಠ ಅನ್ನುವ ಈ ಪರಿಮಿತಿಯಲ್ಲೇ ಬದುಕುತ್ತಿರುವ ನಮಗೆ ಇಡೀ ಮಾನವಕುಲ ಅನುಭವಿಸುತ್ತಿರುವ ನೋವು-ನಲಿವುಗಳ ಚಿತ್ರಣ ಈ ಸಿನಿಮಾಗಳಿಂದ ಸಿಗುತ್ತದೆ. ಈ ಸಿನಿಮಾಗಳಿಂದ ನಾನು ಕಂಡುಕೊಂಡ ದೊಡ್ಡ ಸತ್ಯವೇನೆಂದರೆ “ಮನುಷ್ಯರೆಲ್ಲಾ ಒಂದೇ” ಅನ್ನುವುದನ್ನು. ಈ ಚಿತ್ರೋತ್ಸವಕ್ಕೆ ಬನ್ನಿ ಜಗತ್ತನ್ನು ಅರಿಯಲು,ಮನುಷ್ಯತ್ವವನ್ನು ಬೆಳೆಸಿಕೊಳ್ಳಲು.

ಅಲ್ಲಿ ನೇರವಾಗಿ ಸಿಗೋಣ. ಧನ್ಯವಾದಗಳು…

  • ಪ್ರಕಾಶ್ ರಾಜ್ ಮೇಹು, ನಿರ್ದೇಶಕ, ಲೇಖಕ

Leave a Reply