ತೇಜಸ್ವಿ ಜನ್ಮದಿನದ ನೆನಪಿನಲ್ಲಿ ಒಂದಾನೊಂದು ಕಾಡಿನಲ್ಲಿ ಕೃತಿಯ ತುಣುಕು

4 years ago

ಸೆಪ್ಟೆಂಬರ್ 8. ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ. ನನ್ನಲ್ಲಿ ಓದಿನ ಅಭಿರುಚಿ ಮೂಡಿಸಿದ್ದೇ ಅವರ ಪರಿಸರ ಕೇಂದ್ರಿತ ಕೃತಿಗಳು ಮತ್ತು ಅವರು ಬಳಸುತ್ತಿದ್ದ ಜೀವಂತಿಕೆ ಶೈಲಿಯ ಬರಹ. ಅವರಿಂದ ಪ್ರೇರಿತನಾಗಿ, ಸುಮಾರು 150 ವರ್ಷಗಳ ಹಿಂದಿನ ಮೈಸೂರು ಸಂಸ್ಥಾನದ ಕಾಡಿನ ಕಥನವೊಂದನ್ನು ಅನುವಾದಿಸುವ ಸಾಹಸಕ್ಕಿಳಿದಿದ್ದೇನೆ. ಜಿ.ಪಿ. ಸ್ಯಾಂಡರ್ಸನ್ (ಕೆನೆತ್ ಆಂಡರ್ಸನ್ ಅಲ್ಲ!) ಎಂಬ ಬ್ರಿಟಿಷ್ ಅಧಿಕಾರಿಯ ದಟ್ಟ ಅನುಭವಗಳ ಸಂಗ್ರಹ ಇದು. ಕೇವಲ ಕಾಡು, ಕಾಡಿನ ಪ್ರಾಣಿಗಳಷ್ಟೇ ಅಲ್ಲದೇ ಆ ಕಾಲಮಾನದ ಜನರ ಬದುಕಿನ ರೀತಿನೀತಿಗಳನ್ನೂ ಕಟ್ಟಿಕೊಡುವ ಈ ಕೃತಿಯ ಆಯ್ದ ಒಂದು ತುಣುಕು, ನಿಮಗಾಗಿ, ತೇಜಸ್ವಿಯವರ ಜನ್ಮದಿನದ ಉಡುಗೊರೆಯ ರೂಪದಲ್ಲಿ…

1873ರ ನವೆಂಬರ್ 5ನೇ ತಾರೀಕು ಬೆಳ್ಳಂಬೆಳಿಗೆ ಬಿಡಾರದ ಬಳಿ ಬಂದ ಜಾಡುಪತ್ತೆಗಾರರು, ‘ಡಿ’ ಭಾಗದ ಅರಣ್ಯದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿರುವುದಾಗಿ ಹೇಳಿದರು! ತಕ್ಷಣವೇ ಆಸುಪಾಸಿನ ಎಲ್ಲಾ ಊರಿಗೆ ಸುದ್ದಿ ಕಳಿಸಿ, ಸರ್ಕಾರದ ಈ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಬರುವಂತೆ ಡಂಗೂರ ಸಾರಲು ಹೇಳಿದೆ. ನಾನು ಎಷ್ಟೇ ಅವರಿಸಿದರೂ, ಹನ್ನೆರಡು ಗಂಟೆಗು ಮೊದಲು ಜನ ಒಟ್ಟುಗೂಡಲೇ ಇಲ್ಲ. ನಾನು ಕೋಪದಲ್ಲಿ ನಿಗಿನಿಗಿ ಎನ್ನುತ್ತಿದ್ದೆ. ತಡವಾಗುತ್ತಿತ್ತು. ಸುಮಾರು ಐನೂರು ಜನ ಜಮೆಯಾದ ಕೂಡಲೇ ಎಲ್ಲರನ್ನು ಕರೆದುಕೊಂಡು ನಮ್ಮ ಕಾರ್ಯಾಚರಣೆಯ ಅಖಾಡದತ್ತ ನಡೆದೆ. ದೇವಸ್ಥಾನದ ಬಳಿ ಬಂದು, ನಮ್ಮ ತಂಡವನ್ನು ಮೂರು ಭಾಗಗಳಾಗಿ ವಿಂಗಡಿಸಿದೆ. ಒಂದು ತಂಡವನ್ನು ಎಡಗಡೆಗೆ ಹೋಗುವಂತೆ ಕಳಿಸಿ, ನದಿಯ ಈಶಾನ್ಯ ದಂಡೆಯುದ್ದಕ್ಕೂ ಕಾವಲಿಗೆ ನಿಲ್ಲುವಂತೆ ಹೇಳಿದೆ. ಇನ್ನೊಂದು ತಂಡವನ್ನು ಬಲಕ್ಕೆ ಕಳಿಸಿ, ಯಾವುದೇ ಕಾರಣಕ್ಕೂ ಇಲ್ಲಿಂದ ಹೊರಡುವ ಆನೆಗಳು ’ಇ’ ಕಾನನ ಪ್ರದೇಶವನ್ನು ಹೊಕ್ಕದಂತೆ ನಿಗಾ ಇಡಲು ಕಳಿಸಿದೆ. ಮಾರಲೇ (ಹುಣಸೂರು ಬಳಿಯ ಹಳ್ಳಿ) ಸಂಗಡಿಗರು ಒಳಗೊಂಡಂತೆ, ಸಮರ್ಥ ಜನರ ಮೂರನೇ ತಂಡವನ್ನು ಅಡಗುದಾಣದಿಂದ ಆನೆಗಳನ್ನು ಆಚೆಗೆ ಕರೆತರುವ ಬೆದಕು ತಂಡವಾಗಿ ನೇಮಿಸಿದೆ. ಅವರು ದೇವಸ್ಥಾನದಿಂದ ತಮ್ಮ ಕಾರ್ಯಾಚರಣೆ ಶುರು ಮಾಡಬೇಕಿತ್ತು. ಆಗ ಆನೆಗಳು ತಮ್ಮ ಹಿಂಬದಿಯ ಎರಡೂ ‘ಎಕ್ಸ್’ ದಾಟುನೆಲೆಗಳನ್ನು ಬಿಟ್ಟು ಮೂರನೇ ‘ಎ’ ದಾಟುನೆಲೆಯತ್ತ ಬರುತ್ತವೆ ಅನ್ನೋದು ನನ್ನ ಲೆಕ್ಕಾಚಾರ. ಇದನ್ನು ಪ್ರತಿಯೊಬ್ಬರಿಗೂ ಚೆನ್ನಾಗಿ ವಿವರಿಸಿ, ನಾನು ಒಂದಿಷ್ಟು ಸಂಗಡಿಗರೊಂದಿಗೆ ನಮ್ಮ ಖೆಡ್ಡಾವರಣದ ದ್ವಾರದ ಬಳಿ ಬಂದು ನಿಂತುಕೊಂಡೆ. ಅವರು ಓಡಿಸಿಕೊಂಡು ಬರುವ ಆನೆಗಳು ಹಳ್ಳದಿಂದ ಆವೃತವಾದ ಖೆಡ್ಡಾವರಣ ಪ್ರವೇಶಿಸುತ್ತಿದ್ದಂತೆಯೇ ಬಾಗಿಲನ್ನು ಮುಚ್ಚಿ, ಆನೆಗಳು ಬಾಗಿಲಿನ ಮೇಲೆ ದಾಳಿ ಮಾಡದಂತೆ ಗುಂಡು ಹಾರಿಸುತ್ತ ಪಹರೆ ಕಾಯುವುದು ನನ್ನ ಉದ್ದೇಶ.

ನಾನು ನನ್ನ ಜಾಗದಲ್ಲಿ ಕಾರ್ಯಾಚರಣೆ ಶುರುವಾಗುವುದಕ್ಕಾಗಿ ಉತ್ಸಾಹಭರಿತನಾಗಿ, ಅಷ್ಟೇ ಆತಂಕದಿಂದ ಕಾಯುತ್ತಾ ನಿಂತೆ. ಆದರೆ ಎಷ್ಟುಹೊತ್ತಾದರು ಜನರಿಂದ ಯಾವ ಕೂಗಾಟವೂ ಕೇಳಿಬರಲಿಲ್ಲ. ಇಲ್ಲಿನ ಜನರಿಗೆ ತರಾತುರಿ ಅನ್ನುವುದೇ ಅರ್ಥವಾಗಲ್ಲ. ಏನೇ ಕೆಲಸ ಹೇಳಿದರೂ ವಿಳಂಭವೇ ಅವರ ಸೂತ್ರ! ಕೊನೆಗೂ ನನ್ನಿಂದ ಅರ್ಧಮೈಲಿ ದೂರದಲ್ಲಿ ಬೆದಕು ತಂಡದ ಕೂಗಾಟ, ಗದ್ದಲ ಕೇಳಿಬಂತು. ಅಂತೂ ನಮ್ಮ ಕಾರ್ಯಾಚರಣೆ ಅಧಿಕೃತವಾಗಿ ಶುರುವಾಯಿತು. ಗಲಾಟೆ ಶುರುವಾದ ಸ್ವಲ್ಪ ಹೊತ್ತಿನಲ್ಲೇ ಐದು ಆನೆಗಳು ನದಿಯ ದಡದ ಬಳಿ ಕಾಣಿಸಿಕೊಂಡವು. ಆದರೆ ಅವು ನದಿಯನ್ನು ದಾಟಲು ಅವಸರ ಮಾಡುವ ಬದಲು, ಅಲ್ಲೇ ನಿಂತು ಗಲಾಟೆ ಕೇಳಿಬರುತ್ತಿದ್ದ ದಿಕ್ಕಿನತ್ತ ನೋಡತೊಡಗಿದವು. ಬಹುಶಃ ತಮ್ಮ ಹಿಂಡಿನ ಮಿಕ್ಕುಳಿದ ಆನೆಗಳು ಇನ್ನೂ ಬಾರಲಿಲ್ಲವಲ್ಲ ಎಂದು ಅವು ಆತಂಕದಿಂದ ಪರಿಶೀಲಿಸುತ್ತಿದ್ದವು ಅನ್ನಿಸುತ್ತೆ. ನನಗು ಸಹಾ ಅದೇ ಬೇಕಾಗಿತ್ತು. ಎಲ್ಲವೂ ಒಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ನದಿ ದಾಟಲು ಮುಂದಾದಾಗಲೇ ದೊಡ್ಡ ಹಿಂಡನ್ನು ಹಿಡಿದು ನಮ್ಮ ಯೋಜನೆ ಯಶಸ್ವಿ ಅನ್ನಿಸಿಕೊಳ್ಳುತ್ತಿತ್ತು.

ಸ್ವಲ್ಪ ಸಮಯ ಅಲ್ಲೇ ಕದಲಾಡಿದ ಆನೆಗಳು ಇದ್ದಕ್ಕಿದ್ದಂತೆ ತಾವು ಬಂದ ದಾರಿಯತ್ತಲೇ ವಾಪಾಸು ಹೋದವು. ಆರಂಭದಲ್ಲಿ ಜನರ ಕೂಗಾಟ ಯಾವ ಪ್ರದೇಶದಿಂದ ಕೇಳಿಬಂತೋ, ಅದೇ ಪ್ರದೇಶದಲ್ಲಿ ಕೂಗಾಟ ಜೋರಾಗುತ್ತಿತ್ತೇ ವಿನಾ, ಅದು ಮುಂಬರಿದ ಸೂಚನೆ ಕೇಳಿಬರಲಿಲ್ಲ. ಅಲ್ಲಿ ಏನಾಗುತ್ತಿದೆ? ಆನೆಗಳು ದಂಡೆಯ ಬಳಿ ಬರಲು ಯಾಕಿಷ್ಟು ತಡವಾಗುತ್ತಿದೆ? ವಾಪಾಸು ಹೋದ ಆನೆಗಳು ಏನಾದವು? ಪ್ರಶ್ನೆಗಳಿಂದ ನನ್ನ ತಲೆ ಸಿಡಿಯಲಾರಂಭಿಸಿತು. ನಾನಿದ್ದ ಜಾಗವನ್ನು ಬಿಟ್ಟು ಅತ್ತ ಹೋಗುವುದು ಅಷ್ಟು ಸರಿಯಲ್ಲವೆಂದು ಗೊತ್ತಿದ್ದರು ಸಹಾ, ಕುತೂಹಲ ಮತ್ತು ಆತಂಕಗಳನ್ನು ಹತ್ತಿಕ್ಕಿಕೊಳ್ಳಲಾಗದೆ , ನನ್ನ ಜೊತೆಗಿದ್ದ ಜನರಲ್ಲೇ ಒಬ್ಬ ‘ನಂಬಿಕಸ್ತ’ನನ್ನು ಆಯ್ಕೆ ಮಾಡಿ, ಅವನ ಕೈಗೆ ನನ್ನ ಬಂದೂಕನ್ನು ಕೊಟ್ಟು ನಾನು ಅತ್ತ ಹೊರಟೆ.

ಅಲ್ಲಿ ದೊಡ್ಡ ಅವಾಂತರವೇ ಆಗಿಹೋಗಿತ್ತು. ಬರುವಾಗ ಎಡಭಾಗಕ್ಕೆ ಕಳಿಸಿ, ನದಿಯ ದಂಡೆಗುಂಟ ಕಾವಲು ಕಾಯಲು ಹೇಳಿ ಬಂದಿದ್ದ ಮುಠ್ಠಾಳ ಮಹಾಶಯರು, ತಾವಿದ್ದ ಜಾಗವನ್ನು ಬಿಟ್ಟು, ಆನೆಗಳು ಯಾವ ದಿಕ್ಕಿನಿಂದ ಸಾಗಿ ಬರಬೇಕೆಂದು ನಾವು ತೆರವಿಗೆ ಜಾಗಮಾಡಿಕೊಂಡಿದ್ದೆವೊ, ಆ ತೆರವಿನ ದಿಕ್ಕಿನಲ್ಲಿ ಜಮಾವಣೆಯಾಗಿ ಕೂಗಾಡಲಾರಂಭಿಸಿದ್ದರು. ಅತ್ತ ಬೆದಕು ದಂಡಿನವರು ಕಿರುಚಾಟ, ಇತ್ತ ಈ ಮುಠ್ಠಾಳ ಮಹಾಶಯರ ಅರಚಾಟದಿಂದ ಎತ್ತ ಹೋಗಬೇಕೆಂಬುದು ತಿಳಿಯದೆ ಕಂಗಾಲಾಗಿದ್ದ ಆನೆಗಳು, ದಟ್ಟ ಮರಗಳ ಪೊದೆಗಳಿಂದ ಆಚೆ ಬರದೆ, ಅಲ್ಲೇ ಅವಿತುಕೊಂಡಿದ್ದವು!

ಇಂತವರನ್ನು ಕಟ್ಟಿಕೊಂಡು ಮಹತ್ವಾಕಾಂಕ್ಷೆಯ ಶಿಕಾರಿಗೆ ಮುಂದಾಗಿದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಳ್ಳದೆ ಬೇರೆ ದಾರಿಯಿರಲಿಲ್ಲ. ತಲೆ ಚಚ್ಚಿಕೊಂಡೆ. ಸಿಟ್ಟು ಇನ್ನಷ್ಟು ಹೆಚ್ಚಾಯ್ತು. ದೂರದಲ್ಲಿ ಕೂಗಾಡುತ್ತಾ, ಎಗರಾಡುತ್ತಾ ಆನೆಗಳ ದಾರಿಗೆ ಅಡ್ಡಲಾಗಿ ನಿಂತು ದಾಂಧಲೆ ಎಬ್ಬಿಸುತ್ತಿದ್ದ ಆ ಮಹಾಶಯರ ಕಡೆಗೆ ಸಿಟ್ಟಿನಿಂದ ರಭಸವಾಗಿ ಕೈಚಾಚಿ, ಪಕ್ಕಕ್ಕೆ ಸರಿಯಿರಿ ಎಂದು ಸನ್ನೆ ಮಾಡಿದೆ. ಅಬ್ಬಬ್ಬಾ! ಅಂತ ಮುಠ್ಠಾಳರನ್ನು ನಾನು ಯಾವತ್ತೂ ನೋಡಿಲ್ಲ. ಪಕ್ಕಕ್ಕೆ ಸರಿಯುವುದು ಬಿಟ್ಟು ಮತ್ತಷ್ಟು ಜೋರಾಗಿ ಗದ್ದಲ ಮಾಡುತ್ತಾ, ಕೈಯಲ್ಲಿದ್ದ ಬಿದಿರಿನ ಕೋಲುಗಳನ್ನು ನೆಲಕ್ಕೆ, ಪೊದೆಗಳಿಗೆ ಬಡಿಯುತ್ತ ಇನ್ನಷ್ಟು ದಾಂಧಲೆ ಮಾಡಲು ಶುರು ಮಾಡಿದರು. ನಾನು ಸಿಟ್ಟಿನಿಂದ, ಪಕ್ಕಕ್ಕೆ ಸರಿಯಿರಿ ಎಂದು ಮಾಡಿದ ಸನ್ನೆ, ಅವರಿಗೆ ’ನಿಮ್ಮ ಗಲಾಟೆ ಸಾಕಾಗುತ್ತಿಲ್ಲ, ಇನ್ನಷ್ಟು ಜೋರಾಗಿ ಕೆಲಸ ಮಾಡಿ’ ಅಂತ ಬೈದಂತೆ ಭಾಸವಾಗಿರಬೇಕು. ರೋಷ ಹೊಕ್ಕವರಂತೆ ಕುಣಿದಾಡುತ್ತಿದ್ದರು. ಅಯ್ಯೋ, ನನ್ನ ಪಾಲಿನ ಖಳನಾಯಕರೇ!! ಎಂದು ತಲೆಮೇಲೆ ಕೈಹೊತ್ತುಕೊಂಡೆ.

ಕೇಕೆ, ಗದ್ದಲ, ಗಲಾಟೆ ಎಷ್ಟಿತ್ತೆಂದರೆ ಅಲ್ಲಿ ಕೂಗಿ ಹೇಳಿದರೆ ಯಾರಿಗೂ ಕೇಳುವಂತಿರಲಿಲ್ಲ. ಹೇಳಿದರೂ ನನ್ನ ಭಾಷೆ ಅವರಿಗೆ ಅರ್ಥವಾಗುವುದು ಅಷ್ಟರಲ್ಲೇ ಇತ್ತು. ಬೇರೆ ದಾರಿಯಿಲ್ಲ. ನನ್ನ ಪಕ್ಕದಲ್ಲಿದ್ದ ಒಂದಿಬ್ಬರು ಸಂಗಡಿಗರಿಗೆ, ’ಚಾವಟಿ ತಗೊಂಡೋಗಿ ಆ ಖಳ ಮಹಾಶಯರಿಗೆ ನಾಲ್ಕು ಬಡಿದು, ಅಲ್ಲಿಂದ ಜಾಗ ಖಾಲಿ ಮಾಡಿಸಿ’ ಅಂತ ಆಜ್ಞೆ ಮಾಡಿದೆ. ನಾನು ಅವರತ್ತ ಚಾವಟಿ ಸಮೇತ ಸೈನಿಕರನ್ನು ಛೂಬಿಟ್ಟದ್ದನ್ನು ನೋಡಿದ ಮಂದಿ, ‘ನಾವು ಮಾಡುತ್ತಿರೋ ಕೆಲಸ ಯಾತಕ್ಕೂ ಸಾಲುತ್ತಿಲ್ಲ ಅಂತ ಕಾಣ್ಸುತ್ತೆ. ಅದಕ್ಕೇ ಛಡಿ ಏಟು ಕೊಡಲು ಛಾವಟಿ ಕಳಿಸುತ್ತಿದ್ದಾರೆ’ ಅಂದುಕೊಂಡ ಅವರು ಅಲ್ಲಿಂದ ದಿಕ್ಕಾಪಾಲಾಗಿ ಓಡಿಹೋದರು. ನನಗೂ ಅದೇ ಬೇಕಿತ್ತು!

ಮತ್ತೆ, ಮಾರಲೇ ಸಂಗಡಿಗರನ್ನು ಒಟ್ಟಿಗೆ ಕಲೆಹಾಕಿ, ಸಾಧ್ಯವಾದಷ್ಟು ಅವರಲ್ಲೇ ಒಂದಷ್ಟು ಜನರನ್ನು ವಿಭಜಿಸಿ ಬೇರೆ ಬೇರೆ ದಿಕ್ಕಿನಿಂದ ಆನೆಗಳನ್ನು ಬೆದರಿಸಿ, ಖೆಡ್ಡಾವರಣದತ್ತ ಸಾಗುವಂತೆ ಯೋಜನೆ ಪುನರ್‌ರೂಪಿಸಿದೆ. ಆ ಖಳ ಮಹಾಶಯರು ಮಾಡಿದ ಅವಾಂತರದಿಂದಾಗಿ ಹಿಂಡಿನ ಅಷ್ಟೂ ಆನೆಗಳನ್ನು ಹಿಡಿಯದಿದ್ದರೂ, ಕೆಲವನ್ನಾದರು ಸೆರೆ ಹಿಡಿದರೂ ನಮ್ಮ ಕಾರ್ಯಾಚರಣೆ ಯಶಸ್ವಿಯಾದಂತೆ ಅನ್ನಿಸತೊಡಗಿತು. ಈಗ ಬೆದಕು ತಂಡದೊಂದಿಗೆ ನಾನೂ ಉಳಿದೆ. ನಮ್ಮ ಯೋಜನೆಯ ಪ್ರಕಾರ ಈಗ ಆನೆಗಳು ಖೆಡ್ಡಾವರಣದ ದಿಕ್ಕಿನತ್ತ ಮುಂಬರಿಯತೊಡಗಿದವು. ಇಕ್ಕೆಲಗಳಲ್ಲಿ ಅಲ್ಲಲ್ಲಿ ನಿಲ್ಲಿಸಿದ್ದ ಕಾವಲುಗಾರರ ಕೂಗಾಟ ಮತ್ತು ಹಿಂದಿನಿಂದ ಕೇಳಿಬರುತ್ತಿದ್ದ ನಮ್ಮ ಗದ್ದಲದ ಮಾರ್ಗದರ್ಶನದಿಂದ ಅವು ಸೀದಾ ನದಿಯ ದಾಟುನೆಲೆಯತ್ತಲೇ ಸಾಗಿದವು.

ನನಗಾದ ಖುಷಿ ಅಷ್ಟಿಷ್ಟಲ್ಲ. ಇಡೀ ಹಿಂಡನ್ನು ಸೆರೆಹಿಡಿಯಬಹುದೆನ್ನುವ ಲೆಕ್ಕಾಚಾರಗಳು ಮತ್ತೆ ಮನಸ್ಸಿನಲ್ಲಿ ಮುನ್ನೆಲೆಗೆ ಬಂದವು. ಎಲ್ಲಾ ಸರಿಯಾಗಿ ಸಾಗುತ್ತಿದೆ ಅನ್ನುವಾಗ ಮತ್ತೊಂದು ಅವಾಂತರ ಘಟಿಸಿತು. ಆನೆಗಳು ಇನ್ನೇನು ನದಿ ದಾಟಲು ದಂಡೆಯನ್ನು ಇಳಿಯಬೇಕೆನ್ನುವಾಗ, ಅತ್ತ ಕಡೆಯಿಂದ ಸಿಡಿದ ‘ಢಮಾರ್!’ ಎನ್ನುವ ಗುಂಡಿನ ಸದ್ದು ಅವುಗಳನ್ನು ದಿಗ್ಭ್ರಮೆಗೆ ಈಡುಮಾಡಿ, ನಿಂತಲ್ಲೇ ನಿಲ್ಲುವಂತೆ ಮಾಡಿತು. ಏನಾಗುತ್ತಿದೆ ಅನ್ನೋದು ನನಗೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಆನೆಗಳು ವಾಪಾಸು ನಾವಿದ್ದ ದಿಕ್ಕಿನತ್ತ ತಿರುಗಿ ದಾಂಗುಡಿಯ ಹೆಜ್ಜೆ ಹಾಕಲಾರಂಭಿಸಿದವು. ಅಕ್ಷರಶಃ ನನ್ನ ಯೋಜನೆ ತಲೆಕೆಳಗಾಯಿತು. ಆನೆಗಳು ಅಕಸ್ಮಾತ್ ವಾಪಾಸ್ ತಿರುಗಿ ಬಂದರೆ ಏನು ಮಾಡಬೇಕೆಂಬ ಪರ್ಯಾಯ ಯೋಜನೆಯೇ ನನ್ನ ಪ್ಲ್ಯಾನ್‌ನಲ್ಲಿ ಇರಲಿಲ್ಲ.

ಸಾಧ್ಯವಾದಷ್ಟು ಕೂಗಾಡಿ, ಚೀರಾಡಿ, ಗದ್ದಲವೆಬ್ಬಿಸಿ ಅವುಗಳನ್ನು ಮತ್ತೆ ನದಿಯತ್ತ ಕಳಿಸಲು ಯತ್ನಿಸಿದೆವು. ಆದರೆ ಗಾಬರಿಯಲ್ಲಿದ್ದ ಅವುಗಳಿಗೆ ನಮ್ಮ ಗದ್ದಲಕ್ಕಿಂತ, ಬಂದೂಕಿನ ಗುಂಡು ಉಂಟುಮಾಡಿದ್ದ ಭಯವೇ ಹೆಚ್ಚಾಗಿತ್ತು ಅನ್ನಿಸುತ್ತೆ, ನಮ್ಮತ್ತ ನುಗ್ಗಿಬಂದವು. ಈಗ ಆನೆ ಸೆರೆಹಿಡಿಯುವುದಿರಲಿ, ನಮ್ಮ ಪ್ರಾಣ ಉಳಿಸಿಕೊಳ್ಳೋದೆ ದೊಡ್ಡ ಸಾಹಸವಾಯ್ತು. ಬೇರೆ ದಾರಿಕಾಣದೆ ಕೈಯಲ್ಲಿದ್ದ ಬಂದೂಕನ್ನು ಗುರಿಹಿಡಿದು ಮುಂದೆ ಸಾಗಿಬರುತ್ತಿದ್ದ ಆನೆಯ ಕಾಲಿಗೆ ಗುಂಡು ಹಾರಿಸಿದೆ. ಅದು ಮುಂದಕ್ಕೆ ಮುಗ್ಗರಿಸಿ, ಕುಸಿದು, ಸಾವರಿಸಿಕೊಂಡು ಮೇಲಕ್ಕೆದ್ದು ನಿಂತಿತು. ಈ ದಾಳಿಯಿಂದ ಮತ್ತಷ್ಟು ಗಲಿಬಿಲಿಗೀಡಾದ ಆನೆಗಳು ಎರಡೂ ದಿಕ್ಕನ್ನು ಬಿಟ್ಟು ತಮ್ಮ ಎಡಕ್ಕಿದ್ದ ಕಾಲುವೆ ಕಣಿವೆಯೊಳಕ್ಕೆ ಇಳಿದು, ನಾವು ನಕ್ಷೆಯಲ್ಲಿ ಗುರುತಿಸಿದ್ದ ‘ಇ’ ಅರಣ್ಯದಾಣದತ್ತ ಓಡಿದವು. ಆ ದಿಕ್ಕಿನಲ್ಲಿ ನಾವು ಕಾವಲಿಗೆ ಕೂರಿಸಿದ್ದ ಬೆರಳೆಣಿಕೆ ಮಂದಿಯ ಕೂಗಾಟದ ತಡೆಗೋಡೆ ಅವುಗಳ ಭಯದ ಮುಂದೆ ಏನೇನೂ ಅಲ್ಲ. ಜನ ಹುಚ್ಚೆದ್ದವರಂತೆ ಅವುಗಳ ಹಿಂದೆ ಓಡಿಹೋಗಿ ಬೆದರಿಸಿದರು. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ ಅನ್ನೋದು ನನಗೆ ಅರ್ಥವಾಯ್ತು. ಇಡೀ ಪ್ರಯತ್ನ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತೆ ವ್ಯರ್ಥವಾದದ್ದು ಮಾತ್ರ ದಿಟ.

ಉತ್ಸಾಹವೆಲ್ಲ ಬಸಿದುಹೋಗಿ, ನಿತ್ರಾಣನಾಗಿ ಹೆಜ್ಜೆ ಕಿತ್ತಿಡುತ್ತಾ, ನಮ್ಮ ಖೆಡ್ಡಾವರಣದ ಪ್ರವೇಶದ್ವಾರದ ಬಳಿ ಬಂದು, ಮರವೊಂದರ ಕೆಳಕೆ ಇಟ್ಟಿದ್ದ ಕೂರುಮೆತ್ತೆಯ ಮೇಲೆ ಧಸಕ್ಕನೆ ಕುಳಿತುಕೊಂಡೆ. ಅಷ್ಟುಹೊತ್ತು, ಪ್ರಯತ್ನ ವ್ಯರ್ಥವಾದದ್ದರ ಬಗ್ಗೆ ಬೇಸರಗೊಂಡಿದ್ದನೇ ಹೊರತು, ಒಂದು ಮುಖ್ಯವಾದ ವಿಚಾರವನ್ನು ಮರೆತಿದ್ದೆ. ನಮ್ಮ ಲೆಕ್ಕಾಚಾರದ ಪ್ರಕಾರ ನದಿಯತ್ತ ಹೊರಟಿದ್ದ ಆನೆಗಳನ್ನು ಹಠಾತ್ತನೆ ತಡೆದು ನಿಲ್ಲಿಸಿ, ವಾಪಾಸು ಹೋಗುವಂತೆ ಮಾಡಿದ ಆ ಗುಂಡಿನ ಸದ್ದು ಎಲ್ಲಿಂದ ಬಂತು?

ಅನುಮಾನವೇ ಇಲ್ಲ, ನಾನು ಜನರ ನಡುವೆ ಹುಡುಕಿ, ಯಾರನ್ನು ‘ನಂಬಿಕಸ್ಥ’ ಅಂತ ಬಂದೂಕು ಕೊಟ್ಟು ಪ್ರವೇಶದ್ವಾರದ ಕಾವಲು ಕಾಯಲು ಹೇಳಿಬಂದಿದ್ದೆನೋ ಅದೇ ವ್ಯಕ್ತಿ ಆ ಬದಿಯ ದಂಡೆಯಲ್ಲಿ ಆನೆಗಳ ಹಿಂಡು ಓಡಿ ಬರುತ್ತಿರೋದನ್ನು ನೋಡಿದ ಕೂಡಲೇ ಗಾಬರಿಯಾಗಿ ಇತ್ತಲಿಂದ ಗುಂಡು ಹಾರಿಸಿದ್ದ! ಅವನು ಮಾಡಿದ ಅವಾಂತರಕ್ಕೆ ಆನೆಗಳು ನದಿ ದಾಟದೆ ಹೆದರಿ ವಾಪಾಸು ಹೋಗಿದ್ದವು. ಸಿಟ್ಟು ನೆತ್ತಿಗೇರುತ್ತಿತ್ತಾದರೂ, ವಾಸ್ತವದಲ್ಲಿ ಗುಂಡು ಹಾರಿಸುವಂತಹ ಪರಿಸ್ಥಿತಿ ಏನಿತ್ತು ಅಂತ ತಿಳಿದುಕೊಳ್ಳುವ ಸಲುವಾಗಿ ಅವನನ್ನು ಕರೆದುಕೊಂಡು ಬರುವಂತೆ ಜನರನ್ನು ಕಳಿಸಿದೆ. ಆದರೆ ಅದೊಂದು ರಹಸ್ಯ ನನಗೆ ಯಾವತ್ತಿಗೂ ಅರ್ಥವಾಗದೆ ನಿಗೂಢವಾಗಿ ಉಳಿಯಿತು. ಯಾಕೆಂದರೆ, ಗುಂಡು ಹಾರಿಸಿದ ಕೂಡಲೇ ತಾನು ಮಾಡಿದ ಅವಾಂತರ ಅರ್ಥವಾಗಿ, ನಾನು ಬೈಯುತ್ತೇನೆ ಎಂದರಿತ ಆ ‘ನಂಬಿಕಸ್ಥ’ ವ್ಯಕ್ತಿ, ನನ್ನ ಕೋವಿಯನ್ನು ಮರದ ಬುಡಕ್ಕೆ ಆನಿಸಿ, ಹೇಳದೆ ಕೇಳದೆ ಪರಾರಿಯಾಗಿದ್ದ! ಅದೇ ಕೊನೆ, ಮತ್ತ್ಯಾವತ್ತೂ ನನಗವನು ಮುಖ ತೋರಿಸಲೇ ಇಲ್ಲ!

ಅಷ್ಟೊತ್ತಿಗಾಗಲೇ ಇಳಿಸಂಜೆಯಾಗಿತ್ತು. ನಾನು ಇಡೀ ಕಾರ್ಯಾಚರಣೆಯನ್ನು ಮಾನಸಿಕವಾಗಿ ಕೈಚೆಲ್ಲಿದ್ದೆ. ನನ್ನ ದೇಹ ಬೆವರಿನ ಮುದ್ದೆಯಾಗಿತ್ತು. ಮೈತುಂಬಾ ತರಚುಗಾಯಗಳು. ಮನಸ್ಸು ಭಾರವಾಗಿತ್ತು. ತುಟಿಗಳ ನಡುವೆ ಸಿಗಾರ್ ತಾಗಿಸಿ, ದೀರ್ಘವಾಗಿ ಹೊಗೆಯನ್ನು ಎಳೆದು, ಹೊರಬಿಟ್ಟು ಆಲೋಚನೆಗಳಲ್ಲಿ ಮುಳುಗಿದೆ. ಇಡೀ ದಿನದ ಚಿತ್ರಣಗಳೆಲ್ಲ ಮತ್ತೊಮ್ಮೆ ಕಣ್ಮುಂದೆ ಹಾದುಹೋದವು. ನಾವು ಎಡವಿದ್ದೆಲ್ಲಿ ಎಂಬ ಹುಡುಕಾಟಕ್ಕಿಳಿದೆ. ಜಾಸ್ತಿ ಜನರು ನೆರವಿಗಿರಲಿ ಅಂತ, ಅನುಭವವಿಲ್ಲದ, ಸೂಕ್ಷ್ಮತೆ ಅರ್ಥವಾಗದ ಜನರನ್ನೆಲ್ಲ ಗುಡ್ಡೆ ಹಾಕಿಕೊಂಡಿದ್ದೇ ನಾನು ಮಾಡಿದ ಮೊದಲ ಪ್ರಮಾದ ಅನ್ನೋದು ಮನದಟ್ಟಾಯ್ತು. ಬರೀ ಅಷ್ಟೇ ಅಲ್ಲ, ನಾವು ಮಾಡಿದ ಈ ಅವಾಂತರದಿಂದ ಆನೆಗಳು ಎಷ್ಟು ಬೆದರಿದ್ದವೆಂದರೆ ಏನಿಲ್ಲವೆಂದರೂ ಇನ್ನೊಂದು ತಿಂಗಳು ನದಿ ದಾಟಿ, ದಟ್ಟ ಕಾಡಿನತ್ತ ಹೋಗುವ ಸವಾಸಕ್ಕೆ ಹೋಗಲಾರವು.

ಈ ಎಲ್ಲಾ ಬೇಸರಗಳ ನಡುವೆ ಒಂದಷ್ಟು ನಿಟ್ಟುಸಿರಿನ ಸಂಗತಿಗಳೂ ಇದ್ದವು. ಅವುಗಳಲ್ಲಿ ಮುಖ್ಯವಾದದ್ದು, ನನ್ನ ಪುಣ್ಯಕ್ಕೆ ಈ ಕಾರ್ಯಾಚರಣೆಯ ಅವಾಂತರದಲ್ಲಿ ಯಾರೊಬ್ಬರೂ ಸಾವನ್ನಪ್ಪಿರಲಿಲ್ಲ, ಮಾರಣಾಂತಿಕ ಗಾಯ ಮಾಡಿಕೊಂಡಿರಲಿಲ್ಲ. ಕಡಿಮೆ ಸಂಖ್ಯೆಯಲ್ಲಿದ್ದರೂ, ನುರಿತ ಜನರನ್ನು ಜೊತೆಗಿಟ್ಟುಕೊಂಡರೆ ಯೋಜನೆಯನ್ನು ಯಶಸ್ವಿಗೊಳಿಸಬಹುದೆನ್ನುವ ಪಾಠ ಇದರಿಂದ ನನಗೆ ಅರ್ಥವಾಗಿತ್ತು. ಎಲ್ಲಾ ದೊಡ್ಡ ಗೆಲುವುಗಳು, ಸೋಲಿನ ಸೋಪಾನದಿಂದಲೇ ಶುರುವಾಗಿರುತ್ತವೆ ಎಂಬ ಹಿತವಾಣಿಯನ್ನು ಮತ್ತೆಮತ್ತೆ ಸ್ಮರಿಸಿಕೊಂಡು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ. ನನ್ನ ಶಿಕಾರಿ ಜೀವನದಲ್ಲಿ ಇಂತಹ ಅದೆಷ್ಟೊ ಅನುಭವಗಳಾಗಿವೆ. ಅದರಲ್ಲಿ ಇದೂ ಒಂದು ಎಂದುಕೊಂಡೆ.

ಅದೇವೇಳೆ, ಮಾರಲೆ ಜನರ ಮೇಲೆ ನನಗಿದ್ದ ವಿಶ್ವಾಸ ಇನ್ನಷ್ಟು ಹೆಚ್ಚಾಗಿತ್ತು. ಅವರಿಗೆ ಸರಿಯಾದ ತರಬೇತಿ ಕೊಟ್ಟು, ಕಟ್ಟುನಿಟ್ಟಾದ ಮಾರ್ಗದರ್ಶನ ನೀಡಿದರೆ ಯೋಜನೆಗೆ ಪರಿಣಾಮಕಾರಿಯಾಗಿ ಒದಗಬಲ್ಲರು ಎಂಬುದು ಅರ್ಥವಾಯ್ತು. ಮಾರಲೆಯ ಬಿಡಾರಕ್ಕೆ ವಾಪಾಸು ಬಂದೆವು. ರಾತ್ರಿ ಊಟ ಮುಗಿಸಿ, ಮರದ ಕೆಳಗೆ ಬೆಂಕಿಯನ್ನು ಹಾಕಿಕೊಂಡು ಅದರ ಸುತ್ತ ಕೂತು, ಎಲ್ಲಿ ನಮ್ಮಿಂದ ತಪ್ಪಾಯ್ತು ಅನ್ನೋ ಸಾಮೂಹಿಕ ವಿಮರ್ಶೆಗಿಳಿದೆವು. ಮಾರಲೆಯ ಸಂಗಡಿಗರು ತಮಗೆ ತೋಚಿದಂತೆ ತಮ್ಮ ವಾದಗಳನ್ನು ಮುಂದಿಟ್ಟರು. ಅಂತಹ ಉಪಯುಕ್ತ ಸಲಹೆಗಳೇನಲ್ಲ. ಅವರು ಹೇಳಿದ್ದನ್ನು ಸಾರಾಂಶವಾಗಿ ಹೇಳಬೇಕೆಂದರೆ “ನಾವು ಇವತ್ತು ಮಾಡಿದ ಇಂತಿಂತದ್ದನ್ನು ಮಾಡದೇ ಇದ್ದಿದ್ದರೆ ಹಾಗೂ ಮಾಡಬೇಕಿದ್ದ ಇಂತಿಂತಿದ್ದನ್ನು ಮಾಡದೇ ಹೋಗಿದ್ದಕ್ಕಾಗಿ ಅವಕಾಶ ಕಳೆದುಕೊಂಡೆವು. ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಆನೆಗಳು ನಮ್ಮ ಬಂಧಿಯಾಗಿರುತ್ತಿದ್ದವು” ಅಂತ ಶಪಿಸುತ್ತಾ ಕೂತರು. ಅಂತಹ ಮಾತುಗಳನ್ನು ಕೇಳಿಸಿಕೊಂಡ ಅನುಭವಿ ಶಿಕಾರಿದಾರ ಮಾರ ಎನ್ನುವವ, “ಹೌದೌದು ಕಣ್ರಯ್ಯ, ನೀವು ನಿಮ್ಮ ಚಿಗವ್ವುಂಗೇ ಮೀಸೆ ಐತೆ ಅಂದ್ಕೊಂಡ್ರೆ, ಆ ಆನೆಗಳು ನಿಮ್ಮ ದೊಡಪ್ಪಂದ್ರು, ತಿಳ್ಕಳ್ರಿ!” ಎಂದು ತಮಾಷೆ ಮಾಡಿದ. ಎಲ್ಲರೂ ನಗೆಯಲ್ಲಿ ತೇಲಾಡಿದರು…

* * *

ಶೀಘ್ರದಲ್ಲೇ ಈ ಕೃತಿ ನಿಮ್ಮ ಕೈಸೇರಲಿದೆ. ಹಿಂದಿನಂತೆಯೇ ನಿಮ್ಮ ಪ್ರೋತ್ಸಾಹವಿರಲಿ……

– ಗಿರೀಶ್ ತಾಳಿಕಟ್ಟೆ, ಲೇಖಕರು

Leave a Reply