ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಬಡವರ ಸ್ಥಿತಿ ಮಾತ್ರ ಚಿಂತಾಜನವಾಗಿದ್ದು, ಬಡವರ ಬದುಕು ದುಸ್ತರವಾಗಿದೆ ಎಂದು ಶಾಸಕ ಕೃಷ್ಣಬೈರೇಗೌಡ ಆರೋಪಿಸಿದರು.
ಬ್ಯಾಟರಾಯನಪುರ ಕ್ಷೇತ್ರದ ಕುದುರಗೆರೆ ಗ್ರಾಮದಲ್ಲಿ ಚೇತನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಅಂಬಾನಿ, ಅಧಾನಿಯಂಥ ಶ್ರೀಮಂತ ಉದ್ಯಮಿಗಳು ಇನ್ನಷ್ಟು ಶ್ರೀಮಂತರಾಗಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂದರು.
ಜಾಗತಿಕ ಅಂಕಿಅಂಶಗಳ ಪ್ರಕಾರ ಪ್ರತಿ ಬಡವರ ತಲಾ ಆದಾಯದಲ್ಲಿ ಭಾರತ 147ನೇ ಸ್ಥಾನದಲ್ಲಿದ್ದರೆ, ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ ಜಾಗತಿಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಇದು ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಈ ಬೆಳವಣಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಕ್ಕೆ ತದ್ವಿರುದ್ಧವಾದುದು ಎಂದರು.
ನಮ್ಮ ದೇಶದ ಜನರಲ್ಲಿ ಲಿಂಗ, ಜಾತಿ ಮತ್ತು ಧರ್ಮ ನಿರಪೇಕ್ಷ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ, ಸಮಾನತೆ ಇರಬೇಕೆಂಬುದು ಅಂಬೇಡ್ಕರ್ ರವರ ಮಹತ್ವದ ಆಶಯವಾಗಿತ್ತು. ಆದರೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಡವರಿಗಿಂತ ಶ್ರೀಮಂತರ ಮೇಲೆಯೇ ಹೆಚ್ಚು ವ್ಯಾಮೋಹ. ದೇಶದಲ್ಲಿ ಬಡವರಿಗೆ ಪೂರಕವಲ್ಲದ ಶ್ರೀಮಂತರಿಗೆ ಮಾತ್ರ ಪೂರಕ ವಾತಾವರಣವಿದೆ ಎಂದರು.
ಬಡವ-ಶ್ರೀಮಂತರ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗುತ್ತಿದೆ. ದೇಶದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ವಿಲೋಮ ಬೆಳವಣಿಗೆ. ಮೋದಿಯವರ ಆಪ್ತರಾದ ಅಂಬಾನಿ, ಅದಾನಿಯವರು ಇದೀಗ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದೆಡೆ ಭಾರತದ ಬಡವರು, ಶ್ರಮಿಕ ವರ್ಗದ ಸ್ಥಿತಿ ಗತಿ ಡೋಲಾಯಮಾನವಾಗಿದೆ ಎಂದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಮುಂತಾದ ದಿನನಿತ್ಯದ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರಿತ್ತಿದ್ದು, ಇದರಿಂದ ಶ್ರೀಮಂತರಿಗೆ ಯಾವುದೇ ನಷ್ಟಕ್ಕಿಂತ ಲಾಭವಾಗುತ್ತಿದೆ, ಬಡವರ ಬದುಕು ಮಾತ್ರ ದುಸ್ತರದ ಹಾದಿ ಹಿಡಿದಿದ್ದು, ನಿತ್ಯ ಜೀವನಕ್ಕಾಗಿ ಬಡವರು ಪರಿತಪಿಸುವಂತಾಗಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ಅಂಬೇಡ್ಕರ್ ಅವರ ತತ್ವಾದರ್ಶಗಳು ಮತ್ತು ಬಡವರ ಏಳಿಗೆಯ ಬಗ್ಗೆ ಉತ್ತಮ ಚಿಂತನೆಗಳು ಇದ್ದಿದ್ದರೆ ದೇಶದ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಇಬ್ಬರೂ ಸಹ ತಳ ಸಮುದಾಯದಿಂದ ಬಂದ ಅದ್ಭುತ ಜ್ಞಾನಿಗಳಿದ್ದು, ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನ ದೇಶದ ಪ್ರತಿ ನಾಗರೀಕರು ಪಾಲಿಸಬೇಕಾದ ಕಾನೂನನ್ನು ತಿಳಿಸುವ ಮೂಲಕ ಗೌರವಿಸಲ್ಪಡುತ್ತಿದೆ, ಅದೇ ರೀತಿ ವಾಲ್ಮೀಕಿಯವರು ರಚಿಸಿರುವ ರಾಮಾಯಣ ಗ್ರಂಥ ದೇಶದ ಪ್ರತಿ ನಾಗರೀಕರು ಗೌರವಿಸುವಂತಹ ಅತ್ಯದ್ಭುತ ಕೃತಿಯಾಗಿದೆ. ಇಂತಹ ಅತ್ಯುತ್ತಮ ಗ್ರಂಥಗಳನ್ನು ರಚಿಸಿದವರು ತಳಸಮುದಾಯದಿಂದ ಬಂದ ಮಹಾನ್ ಚೇತನಗಳು ಎಂಬುದೇ ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಪರಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕುದುರಗೆರೆ ಗ್ರಾಮದ ಎರಡು ಸ್ರ್ತೀ ಶಕ್ತಿ ಗುಂಪುಗಳ ಒಟ್ಟು ಐವತ್ತು ಮಹಿಳೆಯರಿಗೆ ತಲಾ ಹತ್ತು ಸಾವಿರ ರೂ.ಗಳ ಸಹಾಯ ಧನದ ಚೆಕ್ಕುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚೇತನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ.)ಯ ಅಧ್ಯಕ್ಷ ಕುದುರಗೆರೆ ಕೃಷ್ಣಮೂರ್ತಿ, ಗ್ರಾ.ಪಂ. ಸದಸ್ಯರಾದ ಲಕ್ಷ್ಮಿ ಅಣ್ಣೇಗೌಡ, ಮಂಜುಳ ನರಸೇಗೌಡ, ಪ್ರಜಾ ವಿಮೋಚನಾ ಚಳವಳಿ(ಸಮತಾವಾದ)ಯ ರಾಜ್ಯ ಉಪಾಧ್ಯಕ್ಷ ಜಾಲಕಿಟ್ಟಿ, ಕಾಂಗ್ರೆಸ್ ಮುಖಂಡರಾದ ತಿರುಮಳಪ್ಪ, ಮುನಿಕೃಷ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.




